Advertisement
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಕುರಿತು ಸುದೀರ್ಘ ಚರ್ಚೆ ನಡೆದು, ಮುಂದಿನ ಸೋಮವಾರದಿಂದ ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆದರೂ, ಅದರಲ್ಲಿನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಮತ್ತೂಂದು ಬಾರಿ ಪರಾಮರ್ಶಿಸಿ, ಸಂಬಂಧ ಪಟ್ಟವ ರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪುಟ ಅಧಿಕಾರ ನೀಡಿದೆ. ಹೀಗಾಗಿ, ತಪ್ಪು ಮಾಡುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಂಡು ಎರಡು ವರ್ಷ ಜೈಲು ಶಿಕ್ಷೆಗೆ ಗುರಿ ಪಡಿಸುವುದು. 5 ಲಕ್ಷದವರೆಗೂ ದಂಡ ವಿಧಿಸುವುದು ಮತ್ತು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದೂರು ನಿವಾರಣಾ ಸಮಿತಿಗಳ ರಚನೆ ಮಾಡುವ ಪ್ರಸ್ತಾವನೆಯನ್ನು ಮರುಪರಿಶೀಲಿಸುವ ಸಾಧ್ಯತೆಗಳಿವೆ. ಈ ಅಂಶಗಳ ಬಗ್ಗೆಯೇ ಖಾಸಗಿ ವೈದ್ಯಕೀಯ ಸಂಸ್ಥೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಖಾಸಗಿ ವೈದ್ಯರು ಈಚೆಗೆ ಒಂದು ದಿನದ ಮುಷ್ಕರ ನಡೆಸಿದ್ದಲ್ಲದೆ, ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಸಂದರ್ಭ “ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
Related Articles
ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿ ವಿಧೇಯಕದಲ್ಲಿ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಸರ್ಕಾರ ಕೈಬಿಡುವವರೆಗೂ ಖಾಸಗಿ ವೈದ್ಯರ ಹೋರಾಟದಲ್ಲಿಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಶಾಖೆ ಸ್ಪಷ್ಟಪಡಿಸಿದೆ. ತಿದ್ದುಪಡಿ ವಿಧೇಯಕ ಮಂಡನೆಗೂ ಮುನ್ನ ಖಾಸಗಿ ವೈದ್ಯರು, ಆಸ್ಪತ್ರೆಗಳ ಆಕ್ಷೇಪಣೆಗಳ ಬಗ್ಗೆ ಪುನರ್‌ಪರಿಶೀಲನೆಗಾಗಿ ಸಭೆ ನಡೆಸಲು ಸಿಎಂ ನಿರ್ಧರಿಸಿರುವುದನ್ನು ಸಂಘ ಸ್ವಾಗತಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಘದ ರಾಜ್ಯ ಶಾಖೆ ಅಧ್ಯಕ್ಷ ಡಾ.ಎಚ್.ಎನ್. ರವೀಂದ್ರ, “”ವಿಧೇಯಕದ ತಿದ್ದುಪಡಿಗೆ ಸಂಬಂಧಿಸಿದಂತೆ ಖಾಸಗಿ ವೈದ್ಯರ ಆಕ್ಷೇಪಣೆ ಆಲಿಸಲು ಮುಖ್ಯಮಂತ್ರಿಗಳು ಸಭೆ ಕರೆಯಲು ತೀರ್ಮಾನಿಸಿರುವುದು ಸ್ವಾಗತಾರ್ಹ. ವಿಧೇಯಕದಲ್ಲಿನ ಪ್ರಸ್ತಾಪಿತ ಅಂಶಗಳಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಯೋಚಿಸಬೇಕು” ಎಂದಿದ್ದಾರೆ.
Advertisement