Advertisement

ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದ್ದಕ್ಕೆ ವೈದ್ಯರಿಗೆ ತರಾಟೆ

01:06 PM Jun 04, 2019 | Team Udayavani |

ಟೇಕಲ್: ಸಮಯಕ್ಕೆ ಸರಿಯಾಗಿ ಔಷಧಿ ಸಿಗದಿರುವುದು, ರಾತ್ರಿ ವೇಳೆ ಆಸ್ಪತ್ರೆ ಬಾಗಿಲು ಮುಚ್ಚುವುದು, ವೈದ್ಯರ ಕೊರತೆ, ಹೀಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವೈದ್ಯ ಡಾ.ಪ್ರಕಾಶ್‌ ಅವರನ್ನು ಟೇಕಲ್ ಸುತ್ತಮುತ್ತಲಿನ ಜನತೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಗರದಲ್ಲಿ ಜರುಗಿತು.

Advertisement

ಎರಡು ತಿಂಗಳಿಂದ ಸಮಯಕ್ಕೆ ಸರಿಯಾಗಿ ವೈದ್ಯರು, ನರ್ಸ್‌ಗಳು ರೋಗಿಗಳ ಕೈಗೆ ಸಿಗುತ್ತಿಲ್ಲ. ಸ್ಥಳೀಯ ವೈದ್ಯರು ಸಹ ರೋಗಿಗಳ ಬಳಿ ಸಂಯಮದಿಂದ ವರ್ತಿಸದೇ ಮನಬಂದಂತೆ ಮಾತನಾಡುತ್ತಾರೆ. 24್ಡ7 ಸೇವೆ ಒದಗಿಸಬೇಕಾದ ಟೇಕಲ್ ಆಸ್ಪತ್ರೆಗೆ ರಾತ್ರಿ ವೇಳೆ ಬೀಗ ಹಾಕಲಾಗುತ್ತದೆ. ಈ ಬಗ್ಗೆ ಹಲವು ಬಾರಿ ತಾಲೂಕು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಸಮಸ್ಯೆಗಳಿದ್ದರೆ ಜಿಪಂಗೆ ತಿಳಿಸಬೇಕು: ತಾಪಂ ಸದಸ್ಯ ರಮೇಶ್‌ಗೌಡ ಮಾತನಾಡಿ, ಟೇಕಲ್ನಲ್ಲಿ ಸುಸಜ್ಜಿತ ಆಸ್ಪತ್ರೆ ಇದ್ದರೂ ರೋಗಿಗಳಿಗೆ ಉತ್ತಮ ವೈದ್ಯಕೀಯ ಸಿಬ್ಬಂದಿ ಇಲ್ಲ. ರೋಗಿಗಳಿಗೆ ಸೂಕ್ತ ಸೇವೆ ಸಿಗುತ್ತಿಲ್ಲ. ತಿಂಗಳಿನಿಂದ ವೈದ್ಯರ ಮೇಲೆ ದೂರುಗಳು ಬಂದಿದ್ದು, ಬಡಜನತೆಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ತಮಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಸಿಬ್ಬಂದಿ ಕೊರತೆ ಇದ್ದರೆ ತಾಪಂ, ಜಿಪಂ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.

ನೋಟಿಸ್‌ ನೀಡಿದ್ದರೂ ನಿರ್ಲಕ್ಷ್ಯ: ಈ ವೇಳೆ ನೆರೆದಿದ್ದ ಸಾರ್ವಜನಿಕರು ಆಸ್ಪತ್ರೆ ವೈದ್ಯರ ಮೇಲೆ ಆರೋಪಗಳ ಸುರಿಮಳೆಗೈದರು. ನಂತರ ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ, ಈ ವಿಚಾರದ ಬಗ್ಗೆ ವೈದ್ಯರಿಗೆ ನೋಟಿಸ್‌ ನೀಡಿದ್ದು, ಸಮಜಾಯಿಷಿ ನೀಡದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಹೇಳಿದರು.

ಬೇಡಿಕೆ ಈಡೇರಿಸುವ ಭರವಸೆ: ಸ್ಥಳೀಯರ ಅಹವಾಲನ್ನು ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನಕುಮಾರ್‌ ಮಾತನಾಡಿ, ಇಂದಿನಿಂದಲೇ ಸ್ಟಾಪ್‌ನರ್ಸ್‌ಗಳನ್ನು ಇಲ್ಲಿರುವ ವಸತಿ ಗೃಹಗಳಲ್ಲಿ ಇರುವಂತೆ ಸೂಚಿಸಲಾಗಿದೆ. ತಮ್ಮ ಪಾಳಿಯಲ್ಲಿ ತಪ್ಪದೇ ಕಾರ್ಯನಿರ್ವಹಿಸಬೇಕು, ಬಹಳ ದಿನಗಳ ಬೇಡಿಕೆಯಂತೆ ಮಹಿಳಾ ವೈದ್ಯರನ್ನು ವಾರಾಂತ್ಯದಲ್ಲಿ ಟೇಕಲ್ ಆಸ್ಪತ್ರೆಗೆ ನೇಮಿಸಲಾಗುವುದು. 108 ಆ್ಯಂಬುಲೆನ್ಸ್‌ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಆದಷ್ಟು ಬೇಗ ಆ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ತಾಪಂ ಸದಸ್ಯ ಎಚ್.ಎಂ.ರಮೇಶ್‌ಗೌಡ, ಎಪಿಎಂಸಿ ನಿರ್ದೇಶಕ ಬಿ.ಜಿ.ಸತೀಶ್‌ಬಾಬು, ಆಂಜಿನಪ್ಪ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next