ನವದೆಹಲಿ: ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಶನಿವಾರ ಅಗ್ನಿ ಅವಘಡ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಏಮ್ಸ್ ಕಟ್ಟಡದ ಒಂದು ಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು ಕಾರ್ಯಪ್ರವೃತ್ತರಾಗಿದ್ದ ಸಮಯದಲ್ಲೇ ಇತ್ತ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯೊಂದರಲ್ಲಿ ತಜ್ಞ ವೈದ್ಯರ ತಂಡವೊಂದು ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವುದರಲ್ಲಿ ನಿರತವಾಗಿತ್ತು. ಈ ಘಟನೆ ನಡೆದಿರುವ ಕುತೂಹಲಕರ ವಿಚಾರ ಆದಿತ್ಯವಾರದಂದು ಬೆಳಕಿಗೆ ಬಂದಿದೆ.
ಶನಿವಾರ ಬೆಳಿಗ್ಗೆ ಗರ್ಭಿಣಿಯೊಬ್ಬರು ಏಮ್ಸ್ ಆಸ್ಪತ್ರೆಯ ಗೈನಕಾಲಜಿ ವಾರ್ಡ್ ನಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಬಳಿಕ ಸಾಯಂಕಾಲದ ಹೊತ್ತಿಗೆ ಆಸ್ಪತ್ರೆಯ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣದಿಂದ ಆಸ್ಪತ್ರೆಯ ಸಿಬ್ಬಂದಿಗಳು ತುರ್ತುಚಿಕಿತ್ಸಾ ಕೊಠಡಿಯಲ್ಲಿದ್ದ ರೋಗಿಗಳನ್ನು ತರಾತುರಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲೇ ಈ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ.
ತಕ್ಷಣವೇ ಮಹಿಳೆಯನ್ನು ಡಾ. ರಾಜೆಂದ್ರ ಪ್ರಸಾದ್ ನೇತ್ರಶಾಸ್ತ್ರ ವಿಜ್ಞಾನ ವಿಭಾಗದಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗುತ್ತದೆ. ಇಷ್ಟೊತ್ತಿಗೆ ಸಮಯ ರಾತ್ರಿ 9.30 ಗಂಟೆಗಳಾಗಿತ್ತು ಮತ್ತು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ವೈದ್ಯರ ಸಕಾಲಿಕ ಸ್ಪಂದನೆಯಿಂದಾಗಿ 30 ವರ್ಷ ಪ್ರಾಯದ ಈ ಮಹಿಳೆ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು.
ಗರ್ಭಿಣಿ ಮತ್ತು ಮಗುವಿನ ಪ್ರಾಣ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ವೈದ್ಯರೊಬ್ಬರು ಈ ಘಟನೆಯ ಕುರಿತಾಗಿ ಹೇಳಿದ್ದು ಹೀಗೆ, ‘ರೋಗಿಗಳಿಗೆ ಸಕಾಲಿಕ ವೈದ್ಯಕೀಯ ನೆರವನ್ನು ಒದಗಿಸುವುದು ನಮ್ಮ ಕರ್ತವ್ಯ ಮತ್ತು ನಾವಿದನ್ನು ಯಾವುದೇ ಸನ್ನಿವೇಶದಲ್ಲೂ ನಿರ್ಲಕ್ಷಿಸಲಾಗದು. ಈ ಘಟನೆಯಲ್ಲಿ ತಾಯಿ ಮತ್ತು ಮಗುವಿನ ಪ್ರಾಣ ನಮಗೆ ಅತೀ ಮುಖ್ಯವಾಗಿತ್ತು. ಹಾಗಾಗಿ ನಾವು ಆಕೆಯನ್ನು ತಕ್ಷಣವೇ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಹೆರಿಗೆ ಮಾಡಿಸಿದೆವು.’
ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲೂ ವಿಚಲಿತರಾಗದೇ ಗರ್ಭಿಣಿಯೊಬ್ಬರಿಗೆ ಸಕಾಲಿಕ ವೈದ್ಯಕೀಯ ನೆರವನ್ನು ಒದಗಿಸಿದ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡದ ಈ ಕಾರ್ಯಕ್ಕೆ ಇದೀಗ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.