ಬೆಂಗಳೂರು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಮೂರು ವರ್ಷ ಸರ್ಕಾರಿ ಸೇವೆ ಸಲ್ಲಿಸುತ್ತೇವೆ ಎಂದು ಪ್ರವೇಶದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಬದ್ಧರಾಗದೆ ಮತ್ತು ನಿಗದಿತ ದಂಡ ಪಾವತಿಸದಿರುವ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ 2018-19ನೇ ಸಾಲಿನ ಕೌನ್ಸೆಲಿಂಗ್‌ಗಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ 2018ರ ಸೆ.28ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ 300ಕ್ಕೂ ಹೆಚ್ಚು ಅರ್ಜಿಗಳನ್ನು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ. ಅದೇ ರೀತಿ ಪ್ರಸಕ್ತ ಸಾಲಿನ ಎಲ್ಲ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಹಾಗೂ ಈಗಾಗಲೇ ಸರ್ಕಾರಿ ಸೇವೆಯಲ್ಲಿರುವವರ ಪಟ್ಟಿ ಸಿದ್ದಗೊಳ್ಳುವವರೆಗೆ 2018-19ನೇ ಸಾಲಿನ ಕೌನ್ಸೆಲಿಂಗ್‌ಗಾಗಿ ಅಭ್ಯರ್ಥಿಗಳಿಗೆ ಬಲವಂತ ಮಾಡಬಾರದು ಎಂದೂ ನ್ಯಾಯಪೀಠ ಹೇಳಿದೆ.
ಅರ್ಜಿಗಳ ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಪೀಠ, ಅದನ್ನು ಶುಕ್ರವಾರ ಪ್ರಕಟಿಸಿತು. ಸರ್ಕಾರದ ರಿಯಾಯಿತಿ ದರದಲ್ಲಿ ಸೀಟುಗಳನ್ನು ಪಡೆದು ವೈದ್ಯಕೀಯ ಪದವಿ ಪೂರೈಸಿದ ನಂತರ ಒಪ್ಪಂದದನ್ವಯ ಮೂರು ವರ್ಷ ಸರ್ಕಾರಿ ಸೇವೆ ಸಲ್ಲಿಸದೆ, ದಂಡ ಪಾವತಿ ಮಾಡಿರುವ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಆದ್ದರಿಂದ ಕಾನೂನು ಪ್ರಕಾರ ದಂಡ ಪಾವತಿಸಿಕೊಳ್ಳಲು ವಿಫಲರಾಗಿರುವ ತಪ್ಪಿತಸ್ಥರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು.
ಅಲ್ಲದೆ, 2006ರ ನಿಯಮದ ಅನುಸಾರ ಯಾರೆಲ್ಲಾ ಸರ್ಕಾರಿ ಸೀಟುಗಳನ್ನು ಪಡೆದಿದ್ದಾರೊ ಅವರನ್ನು ಆರೋಗ್ಯ ಇಲಾಖೆ ಪುನ: ಸೇವೆಗೆ ಕರೆಯಬೇಕು ಇಲ್ಲವೇ ನಿಯಮ 15ರ ಅನುಸಾರ ಅವರಿಂದ ಸೂಕ್ತ ದಂಡ ಪಾವತಿ ಮಾಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
6 ತಿಂಗಳಲ್ಲಿ ನಿಯಮ ರೂಪಿಸಿ: ಅಧಿನಿಯಮ 2006ರ ನಿಯಮ 15ರನ್ವಯ ಮೂರು ವರ್ಷ ಸರ್ಕಾರಿ ಸೇವೆ ಕಡ್ಡಾಯಗೊಳಿಸಲು ಒಪ್ಪಂದ ಪತ್ರ ಬರೆಸಿಕೊಳ್ಳುವ ಸಂಬಂಧ 6 ತಿಂಗಳಲ್ಲಿ ಸಮಗ್ರ ಯೋಜನೆ ರೂಪಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಹಾಗೂ ರಾಜ್ಯದ ಪ್ರಧಾನ ಲೆಕ್ಕಪಾಲಕರಿಗೆ ರವಾನಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿರುವುದು ಗಮನಾರ್ಹ.