Advertisement

ದೇಶದಲ್ಲಿ ಸಂಖ್ಯೆಗನುಗುಣವಾಗಿ ವೈದ್ಯರಿಲ್ಲ

12:14 PM Apr 08, 2019 | Team Udayavani |
ಬೆಳಗಾವಿ: ಗ್ರಾಮೀಣ ಹಾಗೂ ಕೃಷಿ ಆಧಾರಿತ ಭಾರತದಲ್ಲಿ ಜನಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಅವರಲ್ಲಿ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭಿಸದೇ ಇರುವುದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ನವದೆಹಲಿಯ ನ್ಯಾಶನಲ್‌ ಬೋರ್ಡ್‌ ಆಫ್‌ ಎಕ್ಸಾಮಿನೇಶನ್‌ನ ಡಾ| ಅಭಿಜಾತ ಶೇಟ ಹೇಳಿದರು.
ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಜೆಎನ್‌ಎಂಸಿ ಸೈಂಟಿಫಿಕ್‌ ಸೊಸೈಟಿಯ 37ನೇ ವಾರ್ಷಿಕ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಸಾವಿರ ಜನಕ್ಕೆ ಓರ್ವ ವೈದ್ಯರು ಅವಶ್ಯ. ಆದರೆ ನಮ್ಮಲ್ಲಿ ಎರಡು ಸಾವಿರ ಜನಕ್ಕೆ ಒಬ್ಬರು ವೈದ್ಯರು ಮಾತ್ರ ಇದ್ದಾರೆ. ಹೀಗಾಗಿ ವೈದ್ಯಕೀಯ ಮಹಾವಿದ್ಯಾಲಯಗಳು ಗುಣಮಟ್ಟ ಶಿಕ್ಷಣ
ನೀಡುವುದರೊಂದಿಗೆ ಗ್ರಾಮೀಣ ಸೇವೆಗೆ ವೈದ್ಯರು ಅಣಿಯಾಗುವಂತೆ ಕಾರ್ಯ ರೂಪಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಅತ್ಯಂತ ಸಂದಿಗ್ಧ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ತಜ್ಞ ವೈದ್ಯರು ಲಭಿಸುತ್ತಿಲ್ಲ. ಪ್ರತಿ ವರ್ಷ 60 ಸಾವಿರ ಪದವಿ, 30 ಸಾವಿರ ಸ್ನಾತ್ತಕೋತ್ತರ ಪದವಿ ಪಡೆದ ವೈದ್ಯರು ಹೊರಬೀಳುತ್ತಿದ್ದಾರೆ. ಆದರೂ ವೈದ್ಯರು ಸೇವೆಗೆ ಲಭಿಸುತ್ತಿಲ್ಲ. ದೇಶದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೈದ್ಯರಿದ್ದರೂ ಅವರಲ್ಲಿ ಕೇವಲ 8.18 ಲಕ್ಷ ಅಲೋಪತಿ ವೈದ್ಯರು ಸೇವೆಗೆ ಲಭ್ಯವಿದ್ದಾರೆ. 2025ಕ್ಕೆ 1.5 ಲಕ್ಷ ವೈದ್ಯರನ್ನು ಪ್ರತಿ ವರ್ಷ ಸೇವೆಗೆ ಅಣಿಗೊಳಿಸಲು ಯೋಜನೆ ರೂಪಿಸಲಾಗಿದೆ. ಕಳೆದ 40 ವರ್ಷಗಳಿಂದ ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಕಂಡಿಲ್ಲ. ಅದನ್ನು ಬದಲಾಯಿಸಿ ಪ್ರಸಕ್ತ ವ್ಯವಸ್ಥೆಗೆ ತಕ್ಕಂತೆ ರೂಪಿಸಬೇಕಾಗಿದೆ. ಆದರೆ ಅದು ಕಾರ್ಯಗತಗೊಳ್ಳುವುದು ಕಠಿಣ. ಮಿಲಿಟರಿ ವೈದ್ಯರಿಂದ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಹಿರಿಯ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸಕ ಡಾ| ಕೆ.ಎಸ್‌. ಗೋಪಿನಾಥ ಅವರು ದತ್ತಿ ಉಪನ್ಯಾಸ ನೀಡಿದರು. ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ರೋಬೋಟಿಕ್‌ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ| ಎನ್‌. ಎಸ್‌. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯಾಧ್ಯಕ್ಷ ಡಾ| ಆರ್‌.ಬಿ. ನೇರಲಿ, ಡಾ| ವಿ.ಎ. ಕೋಟಿವಾಲೆ, ಡಾ| ರೇಷ್ಮಾ ಕರಿಶೆಟ್ಟಿ, ಡಾ| ಶಮಾ ಬೆಲ್ಲದ, ಡಾ| ಆರ್‌.ಎಸ್‌. ಮುಧೋಳ, ಡಾ| ಕುಮಾರ ವಿಂಚುರಕರ, ಡಾ| ಶಿವಗೌಡ ಪಾಟೀಲ, ಡಾ| ಎ.ಪಿ. ಹೊಗಾಡೆ, ಡಾ| ಎನ್‌.ಆರ್‌. ಮುನವಳ್ಳಿ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next