Advertisement

ಪಶುಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು, ಸಿಬಂದಿ ಇಲ್ಲ!

02:44 AM Jul 09, 2019 | sudhir |

ಸುಬ್ರಹ್ಮಣ್ಯ: ಕರಾವಳಿಯಲ್ಲಿ ಹೈನುಗಾರಿಕೆ ಒಂದು ಪ್ರಮುಖ ಕಸುಬು. ಅದನ್ನೆ ನಂಬಿಕೊಂಡು ಅನೇಕ ಹೈನುಗಾರರಿದ್ದಾರೆ. ಹೈನುಗಾರರಿಗೆ ದೊಡ್ಡ ಸಮಸ್ಯೆಯಾಗಿರುವುದು ಸರಕಾರಿ ಪಶುವೈದ್ಯರ ಕೊರತೆ. ರಾಜ್ಯದಲ್ಲಿ ಕ್ಷೀರಭಾಗ್ಯ, ಪಶುಭಾಗ್ಯ ಯೋಜನೆಗಳು ಜಾರಿಯಲ್ಲಿವೆ. ಮುಖ್ಯವಾಗಿ ಬೇಕಿರುವ ಪಶುವೈದ್ಯರೇ ಇಲ್ಲಿಲ್ಲ.

Advertisement

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಶು ವೈದ್ಯರ ಕೊರತೆ ಇದ್ದು, ಅನೇಕ ಕಡೆಗಳಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳು ಸಿಬಂದಿಯಿಲ್ಲದೆ ಬೀಗ ಹಾಕಿಕೊಂಡಿವೆ. 5 ಸಾವಿರ ಜಾನುವಾರುಗಳಿರುವಲ್ಲಿ ಒಂದು ಆಸ್ಪತ್ರೆ ಇರಬೇಕು ಎನ್ನುವ ಮಾನದಂಡವಿದೆ. ಆದರೆ ವಾಸ್ತವದಲ್ಲಿ ಚಿತ್ರಣ ಬೇರೆಯೇ ಆಗಿದೆ.

ಶೇ. 60ರಷ್ಟು ಕೊರತೆ

ಜಿಲ್ಲೆಯಲ್ಲಿ ಒಂದು ಜಿಲ್ಲಾ ಕೇಂದ್ರ ಕಚೇರಿ, 5 ಸಂಚಾರಿ ಘಟಕ, 6 ತಾಲೂಕು ಪಶು ಆಸ್ಪತ್ರೆ, 16 ಹೋಬಳಿ ಮಟ್ಟದ ಆಸ್ಪತ್ರೆ, 39 ಪಶುಚಿಕಿತ್ಸಾ ಕೇಂದ್ರ, 48 ಪ್ರಾ.ಪಶುಚಿಕಿತ್ಸಾ ಕೇಂದ್ರಗಳಲ್ಲಿ ಶೇ. 60ಕ್ಕಿಂತ ಹೆಚ್ಚು ವೈದ್ಯರು, ಪರಿವೀಕ್ಷಕರು ಹಾಗೂ ಸಿಬಂದಿ ಕೊರತೆ ಇರುವುದರಿಂದ ಜಿಲ್ಲೆಯ ರೈತರಿಗೆ, ಕೃಷಿ ಕಾರ್ಮಿಕರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಇಲಾಖೆ ವಿಫ‌ಲವಾಗಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಜಿಲ್ಲೆಯಲ್ಲಿ 449 ಮಂಜೂರಾತಿಗೊಂಡ ಹುದ್ದೆಗಳ ಪೈಕಿ 135 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 314 ಹುದ್ದೆಗಳು ಖಾಲಿ ಉಳಿದಿವೆ.

ಅಲೆದಾಡುವ ಪರಿಸ್ಥಿತಿ

Advertisement

ಲಸಿಕೆ ಅಭಿಯಾನ, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವುದು, ಆಕಸ್ಮಿಕವಾಗಿ ಜಾನುವಾರು, ಕುರಿ, ಮೇಕೆ ಮೃತಪಟ್ಟರೆ ಮಹಜರು ನಡೆಸಿ ವರದಿ ನೀಡುವುದು. ವಿಮೆ ದೃಢೀಕರಣ ಕೆಲಸವನ್ನು ವೈದ್ಯರೇ ಮಾಡಬೇಕಿದೆ. ಹುದ್ದೆಗಳು ಖಾಲಿ ಇರುವುದರಿಂದ ಕಾಲುಬಾಯಿ, ಜ್ವರ ಹಾಗೂ ಇತರ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ. ಮಳೆಗಾಲದಲ್ಲಿ ಪ್ರಾಣಿಗಳಿಗೆ ಸಾಮಾನ್ಯವಾಗಿ ಗಂಟಲು ಬೇನೆ, ಕಾಲು ಬೇನೆ, ಕರುಳು ಬೇನೆ ಸಹಿತ ಅನಾರೋಗ್ಯ ತುತ್ತಾಗುವ ಜಾನುವಾರು, ಇತರ ಸಾಕುಪ್ರಾಣಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಪ್ರಾಣಿಗಳ ಜತೆ ಅಲೆದಾಡುವ ಸ್ಥಿತಿ ತಲೆದೋರಿದೆ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next