Advertisement
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಜಾರಿ ಮಾಡುವ ಬಗ್ಗೆ ಇರುವ ಮಸೂದೆ ಮಂಗಳವಾರ ಸಂಸತ್‌ನಲ್ಲಿ ಚರ್ಚೆಗೆ ಬರಲಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ. ನಡ್ಡಾ ಭಾರತೀಯ ವೈದ್ಯರ ಮಂಡಳಿ (ಐಎಂಎ) ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಆದರೆ ಸಂಸತ್‌ನಲ್ಲಿ ಮಸೂದೆಯ ಬಗ್ಗೆ ಚರ್ಚೆ ಶುರುವಾಗುವ ಹಿನ್ನೆಲೆಯಲ್ಲಿ ಮಾತುಕತೆಯಿಂದ ಹೆಚ್ಚಿನ ಪ್ರಗತಿ ಕಾಣಲಿಲ್ಲ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ ತಂದು, ಅಲ್ಲಿರುವ ಭ್ರಷ್ಟಾಚಾರ ಮತ್ತು ನಿಯಮಕ್ಕೆ ಒಳಪಡದ ಪದ್ಧತಿ ತಡೆಯುವುದೇ ಮಸೂದೆಯ ಉದ್ದೇಶ ಎಂದು ನಡ್ಡಾ ಹೇಳಿದ್ದಾರೆ. ಆದರೆ, ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ಕರಾಳ ದಿನ ಎಂದು ಆಚರಿಸಲು ವೈದ್ಯರು ಮುಂದಾಗಿದ್ದಾರೆ.
ಐಎಂಎ ಅಧ್ಯಕ್ಷ ಡಾ| ರವಿ ವಾಂಖೇಡ್ಕರ್ ಮಾತನಾಡಿ ಎಂಸಿಐ ಬದಲಾಗಿ ಹಾಲಿ ರೂಪದಲ್ಲಿ ಆಯೋಗ ಸ್ಥಾಪನೆಯಾದರೆ ಅಧಿಕಾರಶಾಹಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತರಲ್ಲದವರ ಮಾತು ಕೇಳಬೇಕಾಗುತ್ತದೆ. ಜತೆಗೆ ಅದು ಬಡವರ ವಿರೋಧಿಯಾಗಲಿದೆ ಎಂದ್ದಾರೆ. ಬ್ರಿಡ್ಜ್ ಕೋರ್ಸ್ ಮೂಲಕ ಹೋಮಿಯೋಪತಿ ಮತ್ತು ಆಯುರ್ವೇದ ವೈದ್ಯರಿಗೂ ಅಲೋಪತಿ ಔಷಧ ನೀಡುವುದಕ್ಕೆ ಅನುಮತಿ ನೀಡುವ ಪ್ರಸ್ತಾವಕ್ಕೂ ವಿರೋಧವಿದೆ ಎಂದಿದ್ದಾರೆ.