Advertisement

ವೈದ್ಯರು ಸಮಾಜಮುಖೀಯಾಗುತ್ತಿರುವುದು ಸಂತಸಕರ: ಬಿ. ರಮಾನಾಥ ರೈ

01:27 AM Jul 02, 2019 | Team Udayavani |

ಮಂಜೇಶ್ವರ: ಮಂಗಳೂರಿನ ಮಾಯಾ ಇಂಟರ್‌ನ್ಯಾಶನಲ್‌ ಹೊಟೇಲ್‌ನ ಸಭಾಂಗಣದಲ್ಲಿ ಖ್ಯಾತ ದಂತ ವೈದ್ಯ, ಶಸ್ತ್ರ ಚಿಕಿತ್ಸಕ ಮತ್ತು ವೈದ್ಯ ಸಾಹಿತಿ ಡಾ| ಮುರಲೀ ಮೋಹನ್‌ ಚೂಂತಾರು ಅವರ 9ನೇ ಕೃತಿ “ಧನ್ವಂತರಿ’ ಲೋಕಾರ್ಪಣೆಗೊಂಡಿದ್ದು, ಚೂಂತಾರು ಸರೋಜಿನಿ ಭಟ್‌ ಪ್ರತಿಷ್ಠಾನ ಇದರ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರಗಿತು.


Advertisement

ಕರ್ನಾಟಕ ಸರಕಾರದ ಮಾಜಿ ಸಚಿವ‌ ಬಿ. ರಮಾನಾಥ ರೈ ಅವರು ಈ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ| ಶಾಂತಾರಾಮ ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಈ ಕೃತಿ ಲೋಕಾರ್ಪಣೆಗೊಂಡಿತು. ಕೃತಿ ಲೋಕಾರ್ಪಣೆಗೊಳಿಸಿದ ಬಿ. ರಮಾನಾಥ ರೈ ಅವರು ಮಾತನಾಡುತ್ತಾ ವೈದ್ಯರು ರೋಗದ ಚಿಕಿತ್ಸೆ ಮಾಡುವುದರ ಜತೆಗೆ ರೋಗವನ್ನು ತಡೆಗಟ್ಟುವ ಬಗ್ಗೆ, ಜೀವನ ಶೈಲಿ ಬದಲಾವಣೆ ಮಾಡುವ ಬಗ್ಗೆ ಜನರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಅನಿವಾರ್ಯ ಈಗ ಇದೆ. ವೈದ್ಯರು ಜನರಿಗೆ ಮಾಹಿತಿ ನೀಡಿ ಹೆಚ್ಚು ಸಮಾಜಮುಖೀಯಾಗಿ ಕೆಲಸ ಮಾಡುವುದು ಬಹಳ ಆರೋಗ್ಯಕರ ಬೆಳವಣಿಗೆ ಎಂದರು.

ಡಾ| ಚೂಂತಾರು ಅವರ ಎಲ್ಲ ಕೃತಿಗಳನ್ನು ಲೋಕಾರ್ಪಣೆ ಗೊಳಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು. ಅವರಿಂದ ಮತ್ತಷ್ಟು ಕೃತಿಗಳು ಹೊರ ಬರಲಿ ಎಂದು ಹಾರೈಸಿದರು.

ಅತಿಥಿಗಳಾಗಿ ಭಾಗವಹಿಸಿದ ನಿಟ್ಟೆ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ| ಶಾಂತಾರಾಮ ಶೆಟ್ಟಿ ಇವರು ಮಾತನಾಡಿ ಒಬ್ಬ ವೈದ್ಯ ಬರೀ ವೈದ್ಯನಾಗಿರದೆ, ಮನುಷ್ಯನಾಗಿ, ವೈದ್ಯ ಸಾಹಿತಿಯಾಗಿ ಮತ್ತು ಸಮಾಜ

ಸೇವಕನಾಗಿ ಹೇಗೆ ಬದುಕಬೇಕು ಮತ್ತು ಬದುಕಬಹುದು ಎಂಬುದನ್ನು ಸಾಧಿಸಿ ತೋರಿಸಿದ ಡಾ| ಚೂಂತಾರು ಅವರು ಯುವ ವೈದ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ. ವೈದ್ಯ ವೃತ್ತಿಯ ಜೊತೆ ಪ್ರವೃತ್ತಿಯನ್ನು ವೈದ್ಯರು ಪೋಷಿಸಬೇಕು. ಹಾಗೆ ಮಾಡಿದರೆ ವೈದ್ಯರ ಮೇಲಿನ ಒತ್ತಡ ನಿವಾರಣೆಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಆಗಬಹುದು ಎಂದು ಅಭಿಪ್ರಾಯಪಟ್ಟರು.

Advertisement

ವೈದ್ಯರು ನಾಲ್ಕು ಗೋಡೆಗಳ ಒಳಗೆ ಸೀಮಿತವಾಗದೆ ಸಮಾಜದ ಸಮಸ್ಯೆಗಳಿಗೆ ಕಿವಿಯಾಗಬೇಕು ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಾತನಾಡಿ ಸಾಹಿತ್ಯ ಎಂಬುದು ಕೇವಲ ಕವಿಗಳ ಆಸ್ತಿಯಲ್ಲ. ಎಲ್ಲರಿಗೂ ಹಿತವಾಗುವ ಬರವಣಿ ಗೆಯೇ ಸಾಹಿತ್ಯ. ಗ್ರಾಮೀಣ ಪ್ರದೇಶದ ಹೊಲ ಗದ್ದೆಗಳನ್ನು ಊಳುವ ರೈತನು ಕೂಡ ಸಾಹಿತ್ಯ ಕೃಷಿ ಮಾಡುತ್ತಾನೆ. ವೈದ್ಯಕೀಯ ಸಾಹಿತ್ಯದಲ್ಲಿ ಇನ್ನಷ್ಟು ಹೆಚ್ಚು ಸಾಹಿತ್ಯದ ಕೃಷಿಯಾಗಬೇಕಾಗಿದೆ. ಹೆಚ್ಚಿನ ವೈದ್ಯರು ತಮ್ಮನ್ನು ಬರವಣಿಗೆಯಲ್ಲಿ ತೊಡಗಿ ಸಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ವಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.

ಸಮಾರಂಭದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಅಧ್ಯಕ್ಷರಾದ ಚೂಂತಾರು ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು. ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಿರಿ ಚೂಂತಾರು, ಸ್ನೇಹಾ ಚೂಂತಾರು, ಸರಸ್ವತಿ, ಅಪೂರ್ವಾ ಪ್ರಾರ್ಥನೆ ನಿರ್ವಹಿಸಿದರು. ಧನ್ವಂತರಿ ಕೃತಿಯ ಲೇಖಕರಾದ ಡಾ| ಮುರಲೀ ಮೋಹನ್‌ ಚೂಂತಾರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ರಾಜಶ್ರೀ ಮೋಹನ್‌ ಅವರು ಸ್ವಾಗತಿಸಿದರು. ಚೂಂತಾರು ಪ್ರತಿಷ್ಠಾನ ಇದರ ಟ್ರಸ್ಟಿ ಮಹೇಶ್‌ ಚೂಂತಾರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next