Advertisement

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ವೈದ್ಯರ ತರಾಟೆ

11:56 AM Oct 16, 2019 | Team Udayavani |

ಬೆಳಗಾವಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಅವರು ಜಿಲ್ಲಾಸ್ಪತ್ರೆಗೆ ಮಂಗಳವಾರ ಬೆಳಗ್ಗೆ ಹಠಾತ್‌ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು ಹಾಗೂ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

Advertisement

ಇಲ್ಲಿಯ ಜಿಲ್ಲಾಸ್ಪತ್ರೆ ಅವ್ಯವಸ್ಥೆಗಳ ಆಗರ ಆಗಿದೆ ಎನ್ನುವ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಶಂಕರಗೌಡ ಅವರು, ಆಸ್ಪತ್ರೆಗೆ ತೆರಳಿ ಪ್ರತಿ ವಿಭಾಗವನ್ನು ಪರಿಶೀಲಿಸಿ ಸ್ವಚ್ಛತೆ ಇಲ್ಲದಿರುವುದು, ರೋಗಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದಿರುವುದು, ಗರ್ಭಿಣಿಯರು 2-3ಗಂಟೆ ಸಾಲು ಹಚ್ಚಿ ನಿಂತುಕೊಳ್ಳಬೇಕಾದ ಪರಿಸ್ಥಿತಿ, ಸರಕಾರ ಒದಗಿಸಿರುವ ಯಂತ್ರಗಳನ್ನು ಬಳಸದಿರುವುದು, ರೋಗಿಗಳ ಹಾಸಿಗೆ ಮಲಿನ ಆಗಿರುವುದು ಸೇರಿದಂತೆ ವಿವಿಧ ಅವ್ಯವಸ್ಥೆಗಳನ್ನು ಕಂಡು ಕೆಂಡಾಮಂಡಲರಾದರು.

ರೋಗಿಗಳನ್ನು ಮಾತನಾಡಿಸಿ ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ವಾರ್ಡ್‌ ಪರಿಶೀಲಿಸಿ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕಳಸದ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಇಂತಹ ಆಸ್ಪತ್ರೆಗೆ ರೋಗಿಗಳು ಹೇಗೆ ಬರಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಆಗುವುದಿಲ್ಲವೇ. ಆಸ್ಪತ್ರೆಗೆ ಬಡವರು ಬರುತ್ತಾರೆ ಎಂದರೆ ಅವರಿಗೆ ಬೆಲೆ ಇಲ್ಲವೇ ಎಂದು ಎಂದು ಪ್ರಶ್ನಿಸಿದರು. ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಂಕರಗೌಡ ಪಾಟೀಲ, ಶೌಚಾಲಯಗಳಿಗೆ ಭೇಟಿ ನೀಡಿ ಅಸ್ವತ್ಛತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮೇಯರ್‌ ವಿಜಯ ಮೋರೆ ಹಾಗೂ ಕಾರ್ಯಕರ್ತರು ಶಂಕರಗೌಡ ಪಾಟೀಲ ಅವರಿಗೆ ಸಾಥ್‌ ನೀಡಿದರು. ಆಸ್ಪತ್ರೆಯಲ್ಲಿ ಮಹಿಳೆಯರು ನೆಲದ ಮೇಲೆ ಮಲಗುತ್ತಾರೆ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಸರ್ಕಾರ ನೀಡಿರುವ ಎಂಆರ್‌ಐ ಯಂತ್ರ ಇನ್ನೂ ಬಳಕೆ ಮಾಡುತ್ತಿಲ್ಲ ಎಂದು ವಿಜಯ ಮೋರೆ ಮಾಹಿತಿ ನೀಡಿದರು. ಇದೇ ಅವ್ಯವಸ್ಥೆ ಮುಂದುವರಿದರೆ ಸಹಿಸಲು ಸಾಧ್ಯವಿಲ್ಲ. ತಕ್ಷಣ ಆಸ್ಪತ್ರೆಯ ಆರೋಗ್ಯ ಸುಧಾರಿಸಬೇಕು ಎಂದು ಶಂಕರಗೌಡ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next