ಮದ್ದೂರು: ತಾಲೂಕಿನ ವೈದ್ಯನಾಥಪುರದ ಇತಿಹಾಸ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ಶ್ರೀ ಪ್ರಸನ್ನ ಪಾರ್ವತಾಂಬ ವೈದ್ಯನಾಥೇಶ್ವರ ಸ್ವಾಮಿ ಜತೆಗೆ ಶ್ರೀ ಆಲೂರಮ್ಮ, ಮದ್ದೂರಮ್ಮ, ಶ್ರೀಅಂಕನಾಥೇಶ್ವರಸ್ವಾಮಿ ಮೆರವಣಿಗೆಯೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಮೀಸಲು ನೀರು: ರಥೋತ್ಸವದ ಮುನ್ನಾದಿನ ಮಂಗಳವಾರ ಸಂಜೆ ಮದ್ದೂರು ಪಟ್ಟಣದ ಹೊರವಲಯದಲ್ಲಿರುವ ಶಿಂಷಾನದಿ ದಡದ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯ ಆವರಣದಿಂದ ಸಂಪ್ರದಾಯದಂತೆ ವೈದ್ಯನಾಥಪುರ ಗ್ರಾಮದ ಮಹಿಳೆಯರು ಮೀಸಲು ನೀರು ತರುವ ಜತೆಗೆ ಹಳೇಬೂದನೂರು ಶ್ರೀಅಂಕನಾಥೇಶ್ವರಸ್ವಾಮಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ರಥೋತ್ಸವಕ್ಕೆ ಗ್ರಾಮಸ್ಥರೂ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಗ್ರಾಮದ ವಿನಾಯಕ ಗೆಳೆಯರ ಬಳಗ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಶ್ರೀಪ್ರಸನ್ನಪಾರ್ವತಾಂಬ ಸೇವಾಟ್ರಸ್ಟ್ ಹಾಗೂ ಚನ್ನಪಟ್ಟಣ ತಾಲೂಕಿನ ಜೆ.ಬ್ಯಾಡರಹಳ್ಳಿ ವೈದ್ಯನಾಥೇಶ್ವರ ಸಮಿತಿ ಹಾಗೂ ಗ್ರಾಮಸ್ಥರಿಂದ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ವಿ.ಟಿ.ಕೃಷ್ಣ, ಪದಾಧಿಕಾರಿಗಳಾದ ವಿ.ಟಿ.ಶಿವರಾಜು, ವಿ.ಟಿ.ರಾಜಣ್ಣ, ವಿ.ಪಿ.ಶ್ರೀಕಂಠ, ವಿ.ಎಲ್.ರಾಜು, ವಿ.ಎಲ್. ಶಿವಲಿಂಗಪ್ಪ, ಮುಜರಾಯಿ ಇಲಾಖೆ ಅಧಿಕಾರಿ ಪ್ರಭಾವತಿ, ಗ್ರಾಮ ಲೆಕ್ಕಿಗ ತಿಮ್ಮಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.