Advertisement

Dr GG Lakshmana Prabhu: ಕವಿ ಮನಸ್ಸಿನ ಸಾಧಕ ವೈದ್ಯ ಡಾ| ಪ್ರಭು: ಡಾ| ಜೋಷಿ

12:16 AM Dec 01, 2023 | Team Udayavani |

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ವೈದ್ಯ, ನಗರದ ಕೆಎಂಸಿ ಆಸ್ಪತ್ರೆಯ ಮೂತ್ರಾಂಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಸರ್ಜನ್‌ ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಶ್ರದ್ಧಾಂಜಲಿ ಸಭೆ ಗುರುವಾರ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಿತು.

Advertisement

ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ನುಡಿ ನಮನ ಸಲ್ಲಿಸುತ್ತ, “ಉತ್ಕೃಷ್ಟ ವೈದ್ಯರಾಗಿ ಸಮಾಜ ಸ್ಪಂದನೆಯ ಹಾಗೂ ಕವಿ ಮನಸ್ಸಿನ ಅಪರೂಪದ ಸಾಧಕ ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರು ಮಾನವೀಯತೆಯ ಬಹುಮುಖ ಹೊಂದಿದವರು. ವೈದ್ಯಕೀಯ ಕ್ಷೇತ್ರದಲ್ಲಿದ್ದು ಸಾಹಿತ್ಯವನ್ನು ಅರಗಿಸಿಕೊಂಡ ಅವರು ಅಪರೂಪದ ಮಹಾ ಪುರುಷ. ಸದಾ ನಗು ಮುಖ ಹಾಗೂ ಹಾಸ್ಯದಲ್ಲಿ ಸಿದ್ಧಾಂತ ಹೊಂದಿದ್ದ ಅವರಿಂದು ನಮ್ಮೊಡನೆ ಇಲ್ಲವಾದರೂ ಅವರ ಜಾಗೃತ ಪ್ರಜ್ಞೆ ಎಂದೆಂದಿಗೂ ಜಾಗೃತವಾಗಿರುತ್ತದೆ ಎಂದರು.

ಯುರೋಲಜಿಸ್ಟ್‌ ಡಾ| ಅಶೋಕ್‌ ಪಂಡಿತ್‌ ಮಾತನಾಡಿ, ಪ್ರಖ್ಯಾತ ವೈದ್ಯರಾಗಿದ್ದ ಲಕ್ಷ್ಮಣ ಪ್ರಭು ಅವರು ಪ್ರವಾಸದ ಬಗ್ಗೆ ಹೆಚ್ಚು ಆಸ್ಥೆ ವಹಿಸಿಕೊಂಡಿದ್ದರು. ವಿದೇಶಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಅಂಚೆಚೀಟಿ ಸಂಗ್ರಹ ಸಹಿತ ವಿವಿಧ ಕುತೂಹಲವನ್ನು ತನ್ನಲ್ಲಿ ಬೆಳೆಸಿಕೊಂಡಿದ್ದರು. ದೈಹಿಕವಾಗಿ ಇಂದು ಅವರು ನಮ್ಮೊಂದಿಗಿಲ್ಲವಾದರೂ ನಮ್ಮ ಮನಸ್ಸಿನಲ್ಲಿ ಅಜರಾಮರ ಎಂದರು.
ಯುರೋಲಜಿಸ್ಟ್‌ ಚೆನ್ನೈಯ ಡಾ| ಗಣೇಶ್‌ ಕಾಮತ್‌ ಮಾತನಾಡಿ, ಯುರಾಲಜಿಕಲ್‌ ಸೊಸೈಟಿ ಆಫ್‌ ಇಂಡಿಯಾದಲ್ಲಿ ಲಕ್ಷ್ಮಣ ಪ್ರಭು ಅವರು ಪದಾಧಿಕಾರಿಯಾಗಿ ಮಹೋನ್ನತ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ವೈದ್ಯಕೀಯ ಲೋಕದಲ್ಲಿ ಅವರ ಹೆಸರು ಶಾಶ್ವತ ಎಂದು ಹೇಳಿದರು.

ಲೆಕ್ಕಪರಿಶೋಧಕ ವಾಮನ ಕಾಮತ್‌ ಮಾತನಾಡಿ, ಲಕ್ಷ್ಮಣ ಪ್ರಭು ಅವರು ವೈದ್ಯರಾಗಿ, ಸಾಹಿತ್ಯ,ಸಾಂಸ್ಕೃತಿಕ, ಸಂಘಟನೆ, ಸಮಾಜ ಮುಖೀ, ಪ್ರವಾಸಿ ನೆಲೆಯಲ್ಲಿಯೂ ತನ್ನನ್ನು ತಾನು ಅರ್ಪಿಸಿಕೊಂಡ ಬಗೆ ಅವಿಸ್ಮರಣೀಯ. ಉತ್ತಮ ಮನೆತನದೊಂದಿಗೆ ಸಮಾಜದ ಹತ್ತಾರು ವಿಚಾರಗಳ ಬಗ್ಗೆ ಕುತೂಹಲ ಉಳಿಸಿಕೊಂಡಿದ್ದ ಅವರು ಅಪರೂಪದ ಸಾಧಕ. ಹಲವಾರು ಸಂಕೀರ್ಣ ವೈದ್ಯ ಕೀಯ ಪ್ರಕರಣಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಮಣಿಪಾಲ ಪೈ ಕುಟುಂಬದ ಟಿ. ಸತೀಶ್‌ ಯು. ಪೈ, ಡಾ| ಸಂಧ್ಯಾ ಎಸ್‌. ಪೈ, ಟಿ. ಗೌತಮ್‌ ಪೈ, ವನಿತಾ ಪೈ, ಟಿ. ಹರೀಶ್‌ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್‌ ಕುಮಾರ್‌, ಶಾಸಕ ಡಿ. ವೇದವ್ಯಾಸ ಕಾಮತ್‌, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕೆಎಂಸಿ ಮಂಗಳೂರು ಕ್ಯಾಂಪಸ್‌ ಪ್ರೊ ವೈಸ್‌ ಚಾನ್ಸಲರ್‌ ಡಾ| ದಿಲೀಪ್‌ ನಾಯಕ್‌, ಕೆಸಿಸಿಐ ಅಧ್ಯಕ್ಷ ಅನಂತೇಶ್‌ ಪ್ರಭು ಮುಂತಾದವರು ಶ್ರದ್ಧಾಂಜಲಿ ಸಮರ್ಪಿಸಿದರು.

Advertisement

ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರ ಪತ್ನಿ ಕವಿತಾ ಎಲ್‌. ಪ್ರಭು, ಪುತ್ರ ಡಾ| ಜಿ.ಜಿ. ಅಕ್ಷಯ್‌ ಪ್ರಭು, ಪುತ್ರಿ ಜಿ.ಜಿ. ಕೃತಿಕಾ ಪ್ರಭು, ಸಹೋದರ ಜಿ.ಜಿ. ಮೋಹನ್‌ದಾಸ್‌ ಪ್ರಭು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next