Advertisement

ಶ್ರೀಗಳ ಸೇವೆ ಭಾಗ್ಯ ದೊರಕಿದ್ದೇ ನನ್ನ ಪುಣ್ಯ

12:30 AM Jan 27, 2019 | Team Udayavani |

 ಶ್ರೀಗಳಿಗೆ ಚಿಕಿತ್ಸೆ ನೀಡುವಾಗ ನಿಮ್ಮ ಮನಸ್ಸಿನಲ್ಲಿ ಉಂಟಾಗುತ್ತಿದ್ದ ಭಾವನೆಗಳೇನು?
– ನಡೆದಾಡುವ ದೇವರಿಗೆ ಚಿಕಿತ್ಸೆ ನೀಡುವ ಭಾಗ್ಯ ನನಗೆ ಬಂತು. ನಾನಲ್ಲದೆ ಹಲವು ವೈದ್ಯರು ಶ್ರೀಗಳ ಆರೋಗ್ಯದ ಕಡೆ ಗಮನ ಹರಿಸಿದ್ದರು. ಅವರೆಲ್ಲರ ಗುರಿ ಒಂದೇ ಆಗಿತ್ತು. ಶ್ರೀಗಳು ನಮ್ಮೆಲ್ಲರ ನಡುವೆ ಇನ್ನೂ ಇರಬೇಕು. ಭಕ್ತರಿಗೆ ಆಶೀರ್ವಾದ ಮಾಡಬೇಕು ಎನ್ನುವುದಾಗಿತ್ತು. ಶ್ರೀಗಳಿಗೆ ಚಿಕಿತ್ಸೆ ನೀಡುವಾಗ ಅವರ ದೇಹ ಮುಟ್ಟಿದರೆ ಒಂದು ರೀತಿಯ ಕಂಪನವಾದಂತೆ ಭಾಸವಾಗುತ್ತಿತ್ತು.

Advertisement

ಹಲವು ವೈದ್ಯರು ಅವರನ್ನು ಮುಟ್ಟಲು ಹೆದರುತ್ತಿದ್ದರು. ನಾವು ಧೈರ್ಯ ಹೇಳಿ ಏನೂ ಆಗುವುದಿಲ್ಲ, ಚಿಕಿತ್ಸೆ ಮಾಡಿ ಎಂದು ಹೇಳುತ್ತಿದ್ದೆವು. ಶ್ರೀಗಳ ರಕ್ತ ಪರೀಕ್ಷೆಗಾಗಿ ದೇಹದಿಂದ ಹೊರಗೆ ರಕ್ತ ತೆಗೆಯುವಾಗ ದೇವರಿಗೆ ನೋವು ಕೊಡುತ್ತಿದ್ದೇವಲ್ಲಾ ಎನ್ನುವ ಭಾವನೆ ನನಗೆ ಕಾಡುತ್ತಿತ್ತು. 111ನೇ ವಯಸ್ಸಿನಲ್ಲಿರುವ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಸಾಮಾನ್ಯ ವಿಷಯವಲ್ಲ. ಅವರ ಸೇವೆ ಮಾಡುವ ಭಾಗ್ಯ ದೊರಕಿದ್ದೇ ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ.

ಶ್ರೀಗಳಿಗೆ ಆರೋಗ್ಯ ಕೆಟ್ಟಿದ್ದು ಯಾವಾಗ, ಅವರು ಎಷ್ಟು ಬಾರಿ ಚಿಕಿತ್ಸೆ ಪಡೆದಿದ್ದಾರೆ?
– ಶ್ರೀಗಳಿಗೆ 2016ರ ಮೇ ನಲ್ಲಿ ಮೊದಲ ಬಾರಿಗೆ ಪಿತ್ತಕೋಶದಲ್ಲಿ ತೊಂದರೆ ಕಂಡು ಬಂದಿತ್ತು. ತಕ್ಷಣ ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಬಿ.ಜಿ.ಎಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಪಿತ್ತಕೋಶ ಮತ್ತು ಲಿವರ್‌ನ್ನು ಸಂಪರ್ಕಿಸುವ ನಾಳ ಲಾಕ್‌ ಆಗಿತ್ತು. ಅಲ್ಲಿ ಗಡ್ಡೆಯ ರೀತಿ ಇತ್ತು. ಅದನ್ನು ತೆರವುಗೊಳಿಸಿ ಸ್ಟಂಟ್ ಅಳವಡಿಸಿದೆವು. ಈ ರೀತಿ ಆರು ಬಾರಿ ಪ್ರತಿ ಐದಾರು ತಿಂಗಳಿಗೆ ಶ್ರೀಗಳಿಗೆ ತೊಂದರೆ ಉಂಟಾಗುತ್ತಿತ್ತು.

ಪ್ರತಿ ಬಾರಿಯೂ ಸ್ಟಂಟ್ ಅಳವಡಿಸುತ್ತಿದ್ದೆವು. ನಾಲ್ಕು ಮೆಟಲ್‌, ಏಳು ಪ್ಲಾಸ್ಟಿಕ್‌ ಸ್ಟಂಟ್ ಅಳವಡಿಸಿದ್ದೆವು. ಬಿ.ಜಿ.ಎಸ್‌ ವೈದ್ಯರಾದ ಡಾ.ರವೀಂದ್ರ, ಡಾ.ವೆಂಕಟರಮಣ್‌ ಸೇರಿ ಹಲವರು ಚಿಕಿತ್ಸೆ ನೀಡಿದ್ದರು. ಶ್ರೀಗಳಿಗೆ 2018ರ ಡಿ.1ರಂದು ಪುನಃ ಪಿತ್ತಕೋಶದಲ್ಲಿ ತೊಂದರೆ ಕಂಡು ಬಂದಿತ್ತು. ಆದರೆ, ಹನ್ನೊಂದು ಸ್ಟಂಟ್ ಅಳವಡಿಸಿದ್ದರಿಂದ ಮತ್ತೆ ಅಳವಡಿಸಲು ಸಾಧ್ಯವಾಗಲಿಲ್ಲ.

ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚೆನ್ನೈನ ರೇಲಾ ಆಸ್ಪತ್ರೆ ಸಂಪರ್ಕಿಸಿ, ನಾವೇ ಸ್ವತಃ ಅಲ್ಲಿಗೆ ಹೋಗಿ ಡಾ.ಮಹಮ್ಮದ್‌ ರೇಲಾ ಅವರೊಂದಿಗೆ ಮಾತನಾಡಿದೆವು.

Advertisement

ಅವರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿದರು. ಆದರೆ ಶ್ರೀಗಳು ಮಠ ಬಿಟ್ಟು ಬರಲು ಒಪ್ಪುತ್ತಿರಲಿಲ್ಲ. ನಾವು ಕೊನೆಗೆ ಶ್ರೀಗಳನ್ನು ಒಪ್ಪಿಸಿ, ಚೆನ್ನೈಗೆ ಕರೆದುಕೊಂಡು ಹೋದೆವು. ಅಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆಗಿತ್ತು. 111 ವರ್ಷದ ಶ್ರೀಗಳು ಪವಾಡ ರೀತಿಯಲ್ಲಿ ಗುಣಮುಖರಾದರು. ಅಲ್ಲಿಯೇ ಆರೇಳು ವಾರ ಇದ್ದಿದ್ದರೆ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದರು. ಆದರೆ, ಶ್ರೀಗಳು ನಾನು ಮಠಕ್ಕೆ ಹೋಗಬೇಕೆಂದು ಒಂದೇ ಸಮನೆ ಹಠ ಹಿಡಿದರು. ಜತೆಗೆ ಮಾತನಾಡುವುದನ್ನೇ ನಿಲ್ಲಿಸಿದರು.

ಬುದ್ದೀ ನಾವು ಮಠಕ್ಕೆ ಹೋಗೋಣಾ ಎಂದರೆ ಲವಲವಿಕೆಯಿಂದ ಅವರೇ ಎದ್ದೇಳಲು ಚಡಪಡಿಸುತ್ತಿದ್ದರು. ಅವರ ಸಹಾಯಕರಿಗೆಲ್ಲಾ ಒತ್ತಡ ಹಾಕುತ್ತಿದ್ದರು. ಕೊನೆಗೆ ಮಠಕ್ಕೆ ಕರೆದುಕೊಂಡು ಬಂದೆವು. ಆದರೆ, ಇಲ್ಲಿ ಶ್ರೀಗಳಿಗೆ ಸೋಂಕು ತಗುಲಿ ಗುಣಮುಖರಾಗಲಿಲ್ಲ. ಪ್ರೋಟಿನ್‌ ಅಂಶ ಉತ್ಪತ್ತಿಯಾಗಲಿಲ್ಲ. ಅದಕ್ಕೆಲ್ಲಾ ಚಿಕಿತ್ಸೆ ಮಾಡಿದೆವು. ಆದರೂ ಗುಣಮುಖರಾಗಲಿಲ್ಲ.

ಶ್ರೀಗಳು ಲಿಂಗೈಕ್ಯರಾಗುವ ಮೊದಲು ಅವರ ಕೊನೆಯ ಕ್ಷಣಗಳು ಹೇಗಿದ್ದವು?
– ಜ.21ರ ಬೆಳಗಿನ ಜಾವ 3.30ರಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರು ಪೇರಾಯಿತು. ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿಲ್ಲ. ತಕ್ಷಣ ಚಿಕಿತ್ಸೆ ನೀಡಿದೆವು. ಆಗ ಸ್ವಲ್ಪ ಚೇತರಿಸಿಕೊಂಡರು. ಆದರೂ, ನಮಗೆ ಒಂದು ಆತಂಕವಿತ್ತು. ಕಿರಿಯ ಶ್ರೀಗಳಿಗೆ ಇಷ್ಟಲಿಂಗ ಪೂಜೆ ಮಾಡಿಕೊಂಡು ಬರಲು ಸೂಚಿಸಿದೆವು. ಕಿರಿಯ ಶ್ರೀಗಳು ಗಾಬರಿಯಾಗಿ ಕಣ್ಣೀರು ಹಾಕತೊಡಗಿದರು. ಅವರನ್ನು ಸಮಾಧಾನ ಪಡಿಸಿದೆವು. ಶ್ರೀಗಳಿಗೆ ಯಾವುದೇ ತೊಂದರೆಯಾಗುವುದು ಬೇಡ, ಅವರು ನಮ್ಮೊಟ್ಟಿಗೆ ಇರಬೇಕು, ಚಿಕಿತ್ಸೆ ನೀಡಿ ಎನ್ನುತ್ತಲೇ ಇದ್ದರೂ ನಾವು ಕಿರಿಯ ಶ್ರೀಗಳಿಗೆ ಸಮಾಧಾನ ಮಾಡಿದೆವು. 4.30ಕ್ಕೆ ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ಮುಗಿಸಿ ಹಿರಿಯ ಶ್ರೀಗಳ ಕೊಠಡಿಗೆ ಬಂದು ಶಿವ ಮಂತ್ರಾಕ್ಷರಗಳನ್ನು ಹೇಳುತ್ತಾ ಹಿರಿಯ ಶ್ರೀಗಳು ಪೂಜಿಸುತ್ತಿದ್ದ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದರು. ನಂತರ, ಶ್ರೀಗಳಿಗೆ ಲಿಂಗದರ್ಶನವನ್ನು ಮಾಡಿಸಲು ಹೋದಾಗ ಬೆಳಿಗ್ಗೆ 5.40ರಲ್ಲಿ ಹಿರಿಯ ಶ್ರೀಗಳು ಕಣ್ಣು ಬಿಟ್ಟು ತಮ್ಮ ಇಷ್ಟಲಿಂಗ ನೋಡಿ, ನಂತರ 40 ಸೆಕೆಂಡ್‌ಗಳ ಕಾಲ ಕಿರಿಯ ಶ್ರೀಗಳನ್ನು ದಿಟ್ಟಿಸಿ ನೋಡಿ, ತಕ್ಷಣವೇ ಕಣ್ಣು ಮುಚ್ಚಿದರು. ನಂತರ ಕಣ್ಣು ತೆರೆಯಲಿಲ್ಲ. ಇನ್ನೂ ಉಸಿರಿತ್ತು. ನಾವು ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಮುಂದುವರೆಸಿದ್ದೆವು. ಬೆಳಗ್ಗೆ 11.44ಕ್ಕೆ ಸರಿಯಾಗಿ ಶ್ರೀಗಳು ಶಿವೈಕ್ಯರಾದರು.

Advertisement

Udayavani is now on Telegram. Click here to join our channel and stay updated with the latest news.

Next