ಕಾರಟಗಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲ ವೈದ್ಯಾಧಿಕಾರಿಗಳು ಹಾಗೂ ಕೆಲವು ನರ್ಸ್‌ಗಳು ಕರ್ತವ್ಯ ಲೋಪ ಖಂಡಿಸಿ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಆರೋಗ್ಯ ಕೇಂದ್ರದ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಮರಿಯಪ್ಪ, ಕಾರಟಗಿ ತಾಲೂಕು ಕೇಂದ್ರವಾದ ಬಳಿಕ ಜನಸಂಖ್ಯೆ 40 ಸಾವಿರಕ್ಕೆ ತಲುಪಿದೆ. ಕಾರಟಗಿ ಹೋಬಳಿ ಮತ್ತು ನಗರದ ಜನಸಂಖ್ಯೆ 91 ಸಾವಿರವಿದ್ದು, ಜನಸಂಖ್ಯೆಗನುಗುಣವಾಗಿ ತಾಲೂಕು ಕೇಂದ್ರದ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡ ಕೃಷಿ ಕೂಲಿಕಾರರೆ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸದೇ ನಿರ್ಲಕ್ಷ ತೋರುತ್ತಾರೆ. ಹಣ ನೀಡಿದ ರೋಗಿಗೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಹಣ ನೀಡದಿದ್ದರೆ ರೋಗಿಗಳಿಗೆ ಗಂಗಾವತಿಗೆ ಅಥವಾ ಜಿಲ್ಲಾ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ. ಇದರಿಂದಾಗಿ ಬಡ ರೋಗಿಗಳು ಮತ್ತು ಗರ್ಭಿಣಿಯರು ಬಹಳಷ್ಟು ತೊಂದರೆ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಕೇಂದ್ರದಲ್ಲಿನ ಆಡಳಿ ವೈದ್ಯಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರು ಎನು ಪ್ರಶ್ನಿಸುವಂತಿಲ್ಲ. ಒಂದು ವೇಳೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಅಲ್ಲದೆ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಔಷಧಗಳು ಇದ್ದರೂ ಕೂಡ ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಾರೆ. ಈ ಕೂಡಲೇ ಆರೋಗ್ಯ ಕೇಂದ್ರದಲ್ಲಿನ ಸಮಸ್ಯೆ ಇತ್ಯರ್ಥಗೊಳಿಸಿ ಕರ್ತವ್ಯ ಲೋಪ ಎಸಗುತ್ತಿರುವ ವೈದ್ಯರ ಹಾಗೂ ನರ್ಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಆರೋಗ್ಯ ಕೇಂದ್ರದ ಮುಂದೆ ರಾಜ್ಯ ರೈತ ಸಂಘದ ಎಲ್ಲ ಜಿಲ್ಲಾ ಘಟಕಗಳ ಮುಂದಾಳತ್ವದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಖಾಜಾ ಹುಸೇನ್ ಮುಲ್ಲಾ ಮಾತನಾಡಿ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಟಗಿ ಪಟ್ಟಣದಲ್ಲಿ ಆರೋಗ್ಯ ಚಿಕಿತ್ಸೆಗಾಗಿ ಹೋಬಳಿ ವ್ಯಾಪ್ತಿಯ ಬಡ ಕೂಲಿಕಾರರೆ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ಮುಂದಾಗಬೇಕು. ಆರೋಗ್ಯ ಕೇಂದ್ರಕ್ಕೆ ಜನಸಂಖ್ಯೆಗನುಗುಣವಾಗಿ ಸರಕಾರದ ಮಾರ್ಗ ಸೂಚಿಯಂತೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬಬೇಕು. ಎಕ್ಸರೇ, ಸ್ಕಾ ್ಯನಿಂಗ್ ಸೌಲಭ್ಯ, ಅಗತ್ಯ ಔಷಧಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಲ್ಲು ಮತ್ತು ಎಲುಬು ಕೀಲು ತಜ್ಞರನ್ನು ನೇಮಿಸಬೇಕು. ಶಸ್ತ್ರ ಚಿಕಿತ್ಸಾ ವೈದ್ಯರನ್ನು ನೇಮಕ ಮಾಡಬೇಕು. ಮಕ್ಕಳ ವೈದ್ಯರನ್ನು ಈ ಕೂಡಲೇ ನೇಮಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಶರಣಪ್ಪ ಚಕೋತಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುಂಚೆ ರೈತ ಸಂಘದ ಮುಖಂಡರು ಆಡಳಿತ ವೈದ್ಯಾಧಿಕಾರಿ ಹಾಗೂ ಕೇಂದ್ರದ ಸಿಬ್ಬಂದಿಯನ್ನು ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ರೈತ ಮುಖಂಡರಾದ ಭೀಮಣ್ಣ ಪನ್ನಾಪುರ, ದೊಡ್ಡನಗೌಡ, ಸುಂದರ್‌ರಾಜ್, ಬಸವಣ್ಣ ಕ್ಯಾಂಪ್, ಯಲ್ಲಪ್ಪ ಕಟ್ಟೆಮನಿ, ರಮೇಶ ಭಂಗಿ, ಹನಮೇಶ, ಪಂಪಯ್ಯಸ್ವಾಮಿ, ವೀರೇಶಪ್ಪ, ಶಂಕ್ರಪ್ಪ ಮೇಗೂರ, ಈರಪ್ಪ ಕಾರಟಗಿ, ಕನಕಪ್ಪ ಕಾರಟಗಿ, ಅಂಬಣ್ಣ, ಶರಣಪ್ಪ ಆರೇರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.