Advertisement
ಈ ನಡೆಯ ಬೆನ್ನಲ್ಲೇ ಶಿರಸಿಯ ವೈದ್ಯೆಯೊಬ್ಬರು ಲಸಿಕೆ ಹಾಕಿಸಿಕೊಳ್ಳುವ ಮೊದಲು ಅರ್ಹ ದಾನಿಗಳು ‘ರಕ್ತದಾನ ಮಾಡಿ ಪ್ಲೀಸ್’ ಎಂಬ ವಿನೂತನ ಜಾಗೃತಿ ಅಭಿಯಾನವನ್ನೂ ಆರಂಭಿಸಿದ್ದಾರೆ.
Related Articles
Advertisement
ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್‌ಲೈನ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಸುಮನ್ ದಿನೇಶ ಹೆಗಡೆ, ಲಸಿಕೆಗೂ ಮೊದಲು ರಕ್ತದಾನ ಮಾಡಿ ಎಂಬ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹಣಾ ಕೊರತೆ ನೀಗಿಸಲು ಇದೊಂದೇ ದಾರಿಯಾಗಿದೆ.
ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ, ಮನವಿಗಳ ಮೂಲಕ 18ರಿಂದ 45 ವರ್ಷದೊಳಗಿನ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಇದೇ ವಯಸ್ಸಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಾರೆ. ಒಮ್ಮೆ ರಕ್ತದಾನ ಮಾಡಿದರೆ ಒಬ್ಬ ಪುರುಷ ದಾನಿಗೆ 3, ಮಹಿಳಾ ದಾನಿಗೆ 4 ತಿಂಗಳ ಕಾಲ ಬಿಡುವು ಬೇಕಿದೆ ಎಂಬುದೂ ಉಲ್ಲೇಖನೀಯ.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ಆರಂಭ: ಅಗತ್ಯ ವಸ್ತು ಖರೀದಿಗೆ ಬೆಳಗ್ಗೆ ಅವಕಾಶ
ಡಾ.ಸುಮನ್ ಹೆಗಡೆ, ಪ್ರಥಮ ಹಂತದ ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಲಸಿಕೆ ಪಡೆಯಬಹುದು. ಅಥವಾ ಈಗ ಕೊಟ್ಟಿಲ್ಲ ಎಂದರೆ ಎರಡನೇ ಲಸಿಕೆ ಪಡೆಯುವ ಮುನ್ನವೂ ರಕ್ತದಾನ ಮಾಡಬಹುದು ಎಂದು ಸಲಹೆ ಮಾಡುತ್ತಾರೆ.
ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿದರೆ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ. ಈ ಸಂದೇಶವನ್ನು ವಾಟ್ಸಪ್‌ಗಳಲ್ಲಿ ಹಾಕಿದಾಗ ದಾನಿಗಳೂ ಉತ್ಸುಕರಾಗಿ ಸ್ಪಂದಿಸುತ್ತಿದ್ದು, ತಾವೂ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಡಾ. ಸುಮನ್ ಹೆಗಡೆ.
ಅಪಘಾತದಲ್ಲಿ ಗಾಯಗೊಂಡು ರಕ್ತ ಕಳೆದುಕೊಂಡವರು, ಗರ್ಭಿಣಿ ಸ್ತ್ರೀಯರಿಗೆ, ಫೆಲಸೀಮಿಯಾ ರೋಗಿಗಳು, ರಕ್ತಹೀನತೆ ಉಳ್ಳವರು, ಕ್ಯಾನ್ಸರ್ ರೋಗಿಗಳ ಜೀವ ಉಳಿಸಲು ಬೇಕು ರಕ್ತ. ಈ ಕಾರಣದಿಂದ ಸಂಭಾವ್ಯ ರಕ್ತದ ಕೊರತೆ ಆಗದಂತೆ ಕೈ ಜೋಡಿಸಬೇಕಿದೆ.
ಕೈ ಜೋಡಿಸಿ
ಸಮುದಾಯ ಮನಸ್ಸು ಮಾಡಿದರೆ ಜೀವ ಉಳಿಸಬಹುದು. ಲಸಿಕೆಗೂ ಮೊದಲು ರಕ್ತದಾನ ಮಾಡಿ ಜೀವ ಉಳಿಸಲು ಕೈ ಜೋಡಿಸುತ್ತೇವೆ.
– ಡಾ. ಸುಮನ್ ಹೆಗಡೆ, ಪೆಥಾಲಜಿಸ್ಟ್