Advertisement
ಬಾಲ್ಯದಲ್ಲಿನ ಹತ್ತು ಹಲವು ನೆನಪುಗಳಲ್ಲಿ ಶಾಲಾ ದಿನಗಳಲ್ಲಿ ಕಳೆದ ನೆನಪುಗಳನ್ನು ಎಂದಿಗೂ ಮರೆಯೆವು. ಹಿಂದೆಲ್ಲಾ ಶಿಕ್ಷಕರು ಬೆತ್ತ ಹಿಡಿದೇ ಪಾಠ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. “ಜಾಣಂಗೆ ಮಾತಿನ ಪೆಟ್ಟು, ಕೋಣಂಗೆ ಲತ್ತೆಯ ಪೆಟ್ಟು’ ಎಂಬ ಗಾದೆಯಂತೆ ಓದಿನಲ್ಲಿ ಕೊಂಚ ಮುಂದಿದ್ದ ನಾನು ಮಾತಿನ ಪೆಟ್ಟನ್ನು ತಿಂದವನೇ ಹೊರತು, ಮಾಸ್ತರರಿಂದ ಲತ್ತೆಯ ಪೆಟ್ಟನ್ನು ತಿಂದಿರಲಿಲ್ಲ.
Related Articles
Advertisement
ಪಾಠ ಆರಂಭಿಸುವಾಗ ಟೇಬಲ್ ಮೇಲೆ ಒಂದು ರೂಲ್ ದೊಣ್ಣೆ ಇಟ್ಟು “ತಮ್ಮಾ, ಯಾರೂ ಈ ಕರಿಬಸಮ್ಮನ ಹತ್ರ ಹೊಡಸ್ಕೋಬೇಡಿ’ ಎನ್ನುತ್ತಿದ್ದರು. ಬೆತ್ತ ಕಳೆದುಹೋದರೆ ಹೊಸ ಕರಿಬಸಮ್ಮನನ್ನು ಸಪ್ಲೆ„ ಮಾಡುವ ಕಾಂಟ್ರಾಕ್ಟ್ ನಮ್ಮ ತರಗತಿಯ ಉಗಮ್‌ರಾಜ್‌ನದು! ಅವರಪ್ಪನದು ಬಟ್ಟೆ ಅಂಗಡಿಯಿತ್ತು. ಬಟ್ಟೆಯ ಥಾನುಗಳ ಮಧ್ಯೆ ಇಡುವ ಉದ್ದನೆ ಕೋಲುಗಳು ನಮಗೆ ಕರಿಬಸಮ್ಮನಾಗುತ್ತಿದ್ದವು. ಆದರೆ ಆ ಕರಿಬಸಮ್ಮನಿಂದ ಯಾರಿಗೂ ಪ್ರಸಾದ ಸಿಗುತ್ತಿರಲಿಲ.É ಅಪರೂಪಕ್ಕೊಮ್ಮೆ ದೊಡ್ಡ ತಪ್ಪು ಮಾಡಿದ ಪ್ರಭೃತಿಗಳಿಗೆ ಮಾತ್ರ ಸಿಗುತ್ತಿತ್ತಷ್ಟೇ!
ಬೋರಾಗಿ ಪಾಠ ಮಾಡುತ್ತಿದ್ದ ಇನ್ನೊಬ್ಬ ಮಾಸ್ತರರೆಂದರೆ ತಿಪ್ಪೇಸ್ವಾಮಿ ಸರ್. ಒಮ್ಮೆ ಪಾಠ ಮಾಡುವಾಗ “ಇನ್‌ಸ್ಟ್ರೆಮೆಂಟ್ಸ್’ ಪದದ ಸ್ಪೆಲಿಂಗ್ ಕೇಳಿದರು. ನನ್ನ ಸರದಿ ಬಂತು. instruments ಎಂದು ನಾನು ಸರಿಯಾಗಿಯೇ ಹೇಳಿದೆ. ಮಾಸ್ತರರು ಯಾವ ಲಹರಿಯಲ್ಲಿದ್ದರೋ “ತಪ್ಪು, ನೆಕ್ಸ್ಟ್’ ಎಂದು ಪಕ್ಕದವನನ್ನು ಕೇಳಿದರು. ನನಗೆ ಕಸಿವಿಸಿ. ನನ್ನ ಉತ್ತರದ ಬಗ್ಗೆ ಪೂರ್ಣ ವಿಶ್ವಾಸವಿತ್ತು. ಅಲ್ಲಿಯೇ ನನ್ನೆದುರಿದ್ದ ಕಂಪಾಸ್‌ಬಾಕ್ಸ್ ಸ್ಪೆಲಿಂಗ್ ತೋರಿಸಿ ಹೇಳಿದೆ- “ಸಾರ್ ಇಲ್ಲಿ ನೋಡಿ ಸಾರ್, ನನ್ನ ಉತ್ತರ ಸರಿ’. ಮಾಸ್ತರರಿಗೆ ಅಸಾಧ್ಯ ಕೋಪ ಬಂದಿತ್ತು. “ನನಗೇ ಎದುರು ಹೇಳ್ತಿಯಾ?’ ಎಂದವರೇ ತಾವು ತಂದಿದ್ದ ಬೆತ್ತದಿಂದ ನನ್ನ ಪೃಷ್ಠಕ್ಕೆ ಒಂದು ಕಾಣಿಕೆ ಕೊಟ್ಟೇಬಿಟ್ಟರು.
ನನಗೋ ಅವಮಾನವಾಗಿತ್ತು. ಆಕಾಶವೇ ತಲೆಯ ಮೇಲೆ ಬಿದ್ದಂತೆ ಧರಾಶಾಹಿಯಾಗಿದ್ದೆ. ಕಣ್ಣಂಚಿನಲ್ಲಿ ಅಶ್ರುಗಳು ಇಣುಕಿ ನೋಡುತ್ತಿದ್ದವು. ಅವರಿಗೆ ಏನನ್ನಿಸಿತೋ ಏನೋ, “ಕೂತ್ಕೊ’ ಎಂದರು. ನಂತರ ಸ್ಟಾಫ್ರೂಮ್‌ಗೆ ಕರೆಸಿ ನನಗೆ ಸಮಾಧಾನ ಹೇಳಿದರೆನ್ನಿ!
ಜೀವಮಾನದಲ್ಲಿ ತಿಂದ ಬೆತ್ತದೇಟುಗಳು ನನಗೆ ತುಂಬಾ ವಿಚಾರಗಳನ್ನು ಕಲಿಸಿವೆ. ಜೊತೆಗೆ ತಪ್ಪೋ ಒಪ್ಪೋ ಅವಸರಿಸದೇ ಮಾಸ್ತರರಿಗೆ, ಹಿರಿಯರಿಗೆ ವಿಧೇಯತೆ ಸಲ್ಲಿಸಬೇಕೆಂಬ ಅರಿವನ್ನೂ ಮೂಡಿಸಿವೆ.ಇತಿ ಬೆತ್ತ ಪುರಾಣ ಸಮಾಪ್ತಂ! ಕೆ. ಶ್ರೀನಿವಾಸರಾವ್