Advertisement

ಜಡ್ಜ್ಮೆಂಟ್‌ ಕೊಟ್ಟು  ಸಂಸ್ಥೆಯನ್ನೇಕೆ ಟಾರ್ಗೆಟ್‌ ಮಾಡುವಿರಿ?

08:45 AM Jul 31, 2017 | Team Udayavani |

ಉಡುಪಿ: ಕೆಮರಾದ ಮುಂದೆ ಹೋರಾಟಗಾರರಾಗುವವರನ್ನು ಪ್ಯಾನಲ್‌ ಚರ್ಚೆಯಲ್ಲಿ ಕುಳ್ಳಿರಿಸಿಕೊಂಡು ವಾದ-ಪ್ರತಿ
ವಾದಗಳನ್ನು ನಡೆಸಿ ಪ್ರತಿಷ್ಠಿತ ಸಂಸ್ಥೆಗಳನ್ನು ಟಾರ್ಗೆಟ್‌ ಮಾಡಿ ಕೊನೆಗೆ ಜಡ್ಜ್ಮೆಂಟನ್ನೂ ಕೊಡುವ ಕೆಲವು ಟಿ.ವಿ. ಚಾನೆಲ್‌ಗ‌ಳ ಪರಿಪಾಠ ಒಳ್ಳೆಯದಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಉಡುಪಿ ಯಲ್ಲಿ ಹೇಳಿದ್ದಾರೆ.

Advertisement

ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿರುವ ಪ್ರಕರಣದ ಸತ್ಯಾಸತ್ಯತೆಯು ಪೊಲೀಸ್‌ ತನಿಖೆಯ ಮೂಲಕ ಸಾರ್ವಜನಿಕರಿಗೆ ತಿಳಿಯಬೇಕು. ಜನರಲ್ಲಿ ಮೂಡಿರುವ ಅನುಮಾನವನ್ನು ಹೋಗಲಾಡಿಸಬೇಕು. ಹಾಗಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಾಳು ತೋರಿಸಿರುವ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿಸಿರುವ ಶಿಕ್ಷಣ ಸಂಸ್ಥೆಯನ್ನೇ ದೂಷಿಸುವುದು ಸರಿಯಲ್ಲ. ಆ ಶಿಕ್ಷಣ ಸಂಸ್ಥೆಯಲ್ಲಿ 4,000 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿದಿದೆ. ಸಂಸ್ಥೆಯಲ್ಲಿ ಕಲಿಯುತ್ತಿರುವ ಬೇರೆ ವಿದ್ಯಾರ್ಥಿಗಳ ಪೋಷಕರು ಗಾಬರಿಗೊಳಗಾಗುವಂತೆ ಸುದ್ದಿ ಬಿತ್ತರಿಸಬಾರದು. ಸತ್ಯಾಸತ್ಯತೆ ತಿಳಿಯದೆ ತೀರ್ಮಾನ ಕೈಗೊಳ್ಳುವುದೇ ಅಪಾಯಕಾರಿ ಎಂದರು ಸಂಸ್ಥೆಯ ಹೆಸರು ಕೆಡಿಸಬೇಡಿ ಪ್ರಕರಣದಲ್ಲಿ ಊಹಾಪೋಹಗಳೇ ಹೆಚ್ಚಿವೆ. ಅತ್ಯಾಚಾರ, ಕೊಲೆ ಎನ್ನುವ ಕಲ್ಪಿತ ಸುದ್ದಿಗಳಿಂದ ಆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆಷ್ಟು ಮಾನಸಿಕ ಹಿಂಸೆಯಾಗಿರಬಹುದು ಎನ್ನುವುದನ್ನೂ ಆಲೋಚಿಸಬೇಕು. ಒಂದು ಸಂಸ್ಥೆಯನ್ನು ಸುದೀರ್ಘ‌ ಕಾಲ ಕಟ್ಟಿ ಬೆಳೆಸಲು ಇರುವ ಕಷ್ಟ ಅರಿಯಬೇಕು. ಸುಳ್ಳಿನ ಕಂತೆಗಳನ್ನು ಸೃಷ್ಟಿಸಿ ಅದರ ಹೆಸರನ್ನು ನಿಮಿಷದಲ್ಲಿ ಹಾಳು ಮಾಡಬಹುದು. ಅಂತಹ ಕೃತ್ಯಕ್ಕೆ ಕೈ ಹಾಕಬಾರದು. ಬೃಹದಾಗಿ ಕಟ್ಟಿ ಬೆಳೆಸಿದ ಸಂಸ್ಥೆಯ ಹೆಸರನ್ನು ಕೆಡಿಸಲು ಯಾರೂ ಮುಂದಾಗಬಾರದು ಎಂದು ಕುಮಾರಸ್ವಾಮಿ ಹೇಳಿದರು.

ನ್ಯಾಯ ದೊರೆಯಲಿ
ಪ್ರಕರಣ ನಡೆದು ವಾರದ ಬಳಿಕ ಚರ್ಚೆಗಳು ಆರಂಭವಾದದ್ದೇಕೆ? ಇದರಿಂದ ರಾಜಕೀಯ ದುರ್ಲಾಭ ಪಡೆಯುವ ಹುನ್ನಾರವೂ ಇರಬಹುದು. ತನಿಖೆಯಿಂದ ಸಾವಿನ ಪೂರ್ಣ ಸತ್ಯಾಂಶ ಹೊರಬರಲಿ. ಆಕೆಯ ತಂದೆ-ತಾಯಿಗೆ ನ್ಯಾಯ ದೊರೆಯಲಿ ಎಂದು ತಿಳಿಸಿದರು.

ಪ್ರಹಾರ !
ಕೆಲ ಚಾನೆಲ್‌ಗ‌ಳಲ್ಲಿ ಪ್ಯಾನಲ್‌ ಚರ್ಚೆ ನಡೆಸಲು ಇಷ್ಟ ಇರದಿದ್ದರೂ ಒತ್ತಾಯ ಮಾಡಿ ವ್ಯಕ್ತಿಗಳನ್ನು ಕರೆಯುತ್ತಾರೆ. ಒಂದು ವೇಳೆ ಅವರು ಚರ್ಚೆಗೆ ಹೋಗದಿದ್ದರೆ ಅವರ ವಿರುದ್ಧವೇ ಪ್ರಹಾರ ನಡೆಸುತ್ತಾರೆ ಇದು ವಾಸ್ತವ ಎಂದರು ಕುಮಾರಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next