Advertisement
ಅಪರಾತ್ರಿಯ ಉರಿ ಬಿಸಿಲೇ…ಯಾವುದರಲ್ಲೂ ಮನಸು ನೆಲೆಗೊಳ್ಳುತ್ತಿಲ್ಲ. ಎಲ್ಲಿ ನೋಡಿದರೂ ನಿನ್ನ ನೆನಪುಗಳದೇ ಹಾವಳಿ. ಕಣ್ಮುಚ್ಚಿ ಕುಳಿತರೆ ಹಾಳಾದ ಹೃದಯದ ಉಮ್ಮಳಿಕೆ. ನಿನಗಾಗಿ ಅಂಗಳದಲ್ಲಿ ಬೆಳೆಸಿದ್ದ ಗುಲಾಬಿ ಗಿಡ, ಮುಳ್ಳುಗಳೇ ಕಾಣದಂತೆ ಮೈತುಂಬಾ ಹೂಗಳ ತುಂಬಿಕೊಂಡು ನಳನಳಿಸುತ್ತಿತ್ತು. ಆದರೆ, ಒಂದೂ ಹೂವು ನಿನ್ನ ಮುಡಿಗೇರಲೇ ಇಲ್ಲ. ಹೂವಿನ ಪಕಳೆಗಳು ಒಂದೊಂದಾಗಿ ಉದುರುತ್ತಾ ಹೋದವು, ನನ್ನದೇ ಕಣ್ಣ ಹನಿಗಳಂತೆ! ಈಗ ಅಂಗಳದ ತುಂಬಾ ಹರಡಿಕೊಂಡು ಒಣಗುತ್ತಿರುವ ಗುಲಾಬಿ ಪಕಳೆಗಳು ನನ್ನ ಅಂತರಾಳದ ಚಿತ್ರದಂತೆ ಕಾಣುತ್ತದೆ. ನಿನ್ನ ಮುನಿಸು, ಸಿಟ್ಟು, ಸೆಡವುಗಳೆಲ್ಲ ಒಲವಿನ ಒಂದು ಭಾಗವಾಗಿಯೇ ಉಳಿದಿತ್ತು. ಆದರೆ, ಆ ಸಂಜೆ ಕಂಡೆನಲ್ಲಾಆ ಉದಾಸೀನ ಭಾವ? ಅದು ನನ್ನನ್ನು ನಡುಗಿಸಿಬಿಟ್ಟಿತು. ಅದು ಮೋಡಗಟ್ಟದೇ ಸುರಿದ ಅಸ್ವಾಭಾವಿಕ ಅಕಾರಣ ಮಳೆ.
ಆಗಿತ್ತು. ಮಾತಿನಲ್ಲಿ ಸಂಬಂಧಕ್ಕೊಂದು ಮರಣ ಶಾಸನ ಬರೆಯುತ್ತಿರುವ ಶಾಯಿಯ ಮೊನೆಯಿತ್ತು. ತಿರುವೊಂದರಲ್ಲಿ ಧುತ್ತನೆ ಕೊನೆಗೊಂಡ ರಸ್ತೆಯಂತೆ, ಅನಿರೀಕ್ಷಿತ ಅಪಘಾತವೊಂದು ನನ್ನನ್ನು ಅಪ್ಪಳಿಸಿತ್ತು. ಹಿಡಿ ಘಳಿಗೆಯಲ್ಲಿ ವಿಷದ ಅತ್ತರಿನ ಘಮ ತುಂಬಿಕೊಂಡಿತ್ತು. ಬದುಕು ಸಂತಸದ ಕೊನೆಯ ಕ್ಷಣಕ್ಕೆ ಬಂದು ನಿಂತಿತ್ತು. ನನ್ನೊಳಗಿನ ಖಾಲಿತನಕ್ಕೆ ನೋವಿನ ಹನಿಗಳು ತೊಟ್ಟಿಕ್ಕತೊಡಗಿದವು. ನಾ ನಿಂತಲ್ಲೇ ನಿಂತಿದ್ದೆ. ನಿನ್ನೊಳಗೆ ಹೊಸ ಕನಸಿತ್ತು. ನಾನು ನಿನಗೆ ಪರಿಚಯವೇ ಇಲ್ಲವೇನೋ, ನಮ್ಮಿಬ್ಬರ ಮಧ್ಯೆ ಏನೂ ನಡೆದೇ ಇಲ್ಲವೇನೋ ಅನ್ನುವಷ್ಟು ಸಹಜವಾಗಿ ನನ್ನಿಂದ ದೂರದೂರಕ್ಕೆ ನಡೆದುಹೋದೆ. ಬಹುಶಃ ಮತ್ತೂಮ್ಮೆ ಮುಖಾಮುಖೀ ಆಗಲಾರೆವೇನೋ. ಇರಲಿ, ಹೊಸ ದಾರಿಯಲ್ಲಿ ಹುಷಾರಾಗಿ ಹೆಜ್ಜೆಯಿಡು. ನಿನ್ನ ಹಾದಿ ಚೆಂದವಿರಲಿ, ನೆನಪೆಂಬ ಇರುಳಲಿ, ನೋವೆಂಬ ಹಗಲಲ್ಲಿ ನಾನು ನಿತ್ಯ ಸುಖೀ. ನಿನ್ನವ ನಲ್ಲ
ಜೀವ ಮುಳ್ಳೂರು