ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಬರ ಪೀಡಿತ ಜಿಲ್ಲೆಗೆ ಅದರಲ್ಲೂ ಚಿಕ್ಕಬಳ್ಳಾಪುಕ್ಕೆ ಜಿಲ್ಲೆಯ ಸ್ಥಾನಮಾನ ಕೊಟ್ಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಔದಾರ್ಯ ತೋರುತ್ತಾರಾ ಎಂಬುದನ್ನು ಜಿಲ್ಲೆಯ ಜನತೆ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.
ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದ ಕೃಷಿ, ಹೈನುಗಾರಿಕೆಯನ್ನು ಪ್ರಧಾನವಾಗಿ ಅವಲಂಬಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಜಿಲ್ಲೆಯಾಗಿ ದಶಕ ಕಳೆದರೂ ಜಿಲ್ಲಾಡಳಿತ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ ನಿರ್ಮಾಣಗೊಂಡಿರುವುದು ಬಿಟ್ಟರೆ ಜನರ ಅಣೆ ಬರಹ ಬದಲಿಸುವ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳ ಇಂದಿಗೂ ಮರೀಚಿಕೆಯಾಗಿರುವುದು ಎದ್ದು ಕಾಣುತ್ತಿದೆ.
ಸೌಲಭ್ಯಗಳ ನಿರೀಕ್ಷೆ: ಬೆಂಗಳೂರು ಹೈದರಾಬಾದ್ ನಡುವೆ ಸುಸಜ್ಜಿತವಾದ ರಾಷ್ಟ್ರೀಯ ಹೆದ್ದಾರಿ ಸೌಲಭ್ಯ, ವಿಮಾನ ನಿಲ್ದಾಣ ಕೂಗಳತೆಯ ದೂರದಲ್ಲಿದ್ದರೂ ಜಿಲ್ಲೆಯ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗಾ ವಕಾಶಗಳನ್ನು ಒದಗಿಸುವ ಯಾವುದೇ ಕೈಗಾರಿಕೆಗಳು ಇದುವರೆಗೂ ಜಿಲ್ಲೆಯ ಕಡೆಗೆ ಮುಖ ಮಾಡಿಲ್ಲ. ಹೀಗಾಗಿ ರಾಜ್ಯ ಮೈತ್ರಿ ಸರ್ಕಾರದಲ್ಲಾದರೂ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿರುವ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಸಿಗುತ್ತಾ ಎಂಬುದನ್ನು ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳು ಎದುರು ನೋಡುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರಲ್ಲಿ ಗುರುತಿಸಲಾಗಿರುವ ಕೈಗಾರಿಕಾ ಎಸ್ಟೇಟ್‌ಗಳು ಅಭಿವೃದ್ಧಿ ಕಾಣದೇ ಮೂಲೆಗುಂಪಾಗಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಬರ ಆವರಿಸುತ್ತಿದ್ದು, ರೈತಾಪಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ಹೀಗಾಗಿ ಜಿಲ್ಲೆಯ ಕೃಷಿ, ಹೈನುಗಾರಿಕೆಗೆ ಕ್ಷೇತ್ರಗಳಿಗೆ ಹೆಚ್ಚಿನ ಸೌಲಭ್ಯಗಳ ದೊರೆಯುವ ನಿರೀಕ್ಷೆಯನ್ನು ಜಿಲ್ಲೆಯ ಜನತೆ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೇ ಜಿಲ್ಲೆಯ ಕೃಷಿ ಮಾರುಕಟ್ಟೆಗಳಿಗೆ ಮೂಲ ಸೌಕರ್ಯ, ರೇಷ್ಮೆಗೂಡು ಮಾರುಕಟ್ಟೆಗಳ ಉನ್ನತ್ತೀಕರಣಕ್ಕೆ ಆದ್ಯತೆ ಸಿಗಬೇಕಿದೆ.
ಬೆಂಗಳೂರು ಉತ್ತರ ವಿವಿ: ಕಳೆದ ಮೂರು ವರ್ಷಗಳ ಹಿಂದೆಯೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ತಾಲೂಕುಗಳ ಪದವಿ ಕಾಲೇಜುಗಳನ್ನು ಒಳಗೊಂಡಂತೆ ಬೆಂಗಳೂರು ಉತ್ತರ ವಿವಿ ಆರಂಭವಾದರೂ ಇನ್ನೂ ಸುಸಜ್ಜಿತವಾದ ಕ್ಯಾಂಪಸ್ ನಿರ್ಮಾಣ ಸಾಧ್ಯವಾಗಿಲ್ಲ. ಇದುವರೆಗೂ 100 ಎಕರೆ ಜಮೀನು ನೀಡಲು ಸಾಧ್ಯವಾಗಿದ್ದು ಅದರ ಜತೆಗೆ ಉಳಿದ 50 ಎಕೆರೆ ಹಾಗೂ ಕ್ಯಾಂಪಾಸ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಲಾಗಿದೆ.
ಜಲಮೂಲಗಳ ಪುನಶ್ಚೇತನಕ್ಕೆ ನೆರವು ಸಾವಿರಾರು ಕೆರೆ, ಕುಂಟೆಗಳ ಮೇಲೆಯೆ ಅವಲಂಬಿತಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಪಾತಳಕ್ಕೆ ಕುಸಿದಿದೆ. ಅದರ ಲ್ಲೂ ಕುಡಿಯುವ ನೀರು ವಿಷಮ ಸ್ಥಿತಿಗೆ ತಲುಪಿ ಅಪಾಯಕಾರಿ ಫ್ಲೋರೈಡ್ ಅಂಶ ಕುಡಿಯುವಲ್ಲಿ ನೀರಿನ ಅಧಿಕವಾಗಿದೆ. ಹೀಗಾಗಿ ಜಿಲ್ಲೆಯ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಅಧಿಕ ಕೆರೆಗಳ ಪುನಚ್ಚೇತನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕೆಂಬ ಬೇಡಿಕೆ ಬಹುದಿನ ಗಳಿಂದಲೂ ಕೇಳಿ ಬರುತ್ತಿದ್ದು, ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲೆಗೆ ದಕ್ಕುತ್ತಾ ಉಪ ನಗರ ಭಾಗ್ಯ? ಬೆಂಗಳೂರು ನಗರದ ಮೇಲೆ ಹೆಚ್ಚುತ್ತಿರುವ ಜನದಟ್ಟಣೆ ಹಾಗೂ ವಾಹನ ಸಂಚಾರವನ್ನು ಕಡಿಮೆ ಮಾಡಲು ಸುತ್ತಮುತ್ತಲಿನ ನಗರಗಳನ್ನು ಉಪ ನಗರಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹೀಗಾಗಿ ರಾಜಧಾನಿಗೆ ಕೂಗಳತೆ ಯ ದೂರದಲ್ಲಿರುವ ಚಿಕ್ಕಬಳ್ಳಾ ಪುರಕ್ಕೆ ಉಪ ನಗರದ ಭಾಗ್ಯ ದೊರೆಯುವುದೇ ಎಂಬುದನ್ನು
ಕಾದು ನೋಡಬೇಕಿದೆ. ಉಳಿದಂತೆ ವಿಶ್ವೇಶ್ವರಯ್ಯ ಹಾಗೂ ಎಚ್. ನರಸಿಂಹಯ್ಯ ಹುಟ್ಟೂರಿನ ಅಭಿವೃದ್ಧಿಗೆ ಆದ್ಯತೆ ಸಿಗಬೇಕಿದೆ.