ಒಂದು ಸಮಯದಲ್ಲಿ ವರ್ಷಕ್ಕೆ ರಾಧಿಕಾ ಅವರ ಮೂರ್‍ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ, ಈಗ ವರ್ಷಕ್ಕೆ ಒಂದು ಸಿನಿಮಾ ಕೂಡಾ ಬಿಡುಗಡೆಯಾಗುವುದು ಕಷ್ಟ. ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ. ಚಿತ್ರರಂಗದಲ್ಲಿ ಅಷ್ಟೊಂದು ಆ್ಯಕ್ಟೀವ್ ಆಗಿದ್ದ ನಟಿ ಯಾಕೆ ಸಿನಿಮಾಗಳಿಂದ ದೂರವಾಗುತ್ತಿದ್ದಾರೆ, ವರ್ಷಕ್ಕೆ ಒಂದು ಸಿನಿಮಾ ಬಿಡುಗಡೆಯಾಗದಷ್ಟು ಬಿಝಿಯಾದರಾ ಎಂದು. ಈ ಪ್ರಶ್ನೆಗೆ ಸ್ವತಃ ರಾಧಿಕಾ ಉತ್ತರಿಸುತ್ತಾರೆ.
ರಾಧಿಕಾ ಹೇಳುವಂತೆ ಅವರಿಗೆ ವರ್ಷಕ್ಕೆ ಒಂದೆರಡು ಸಿನಿಮಾವಾದರೂ ಬಿಡುಗಡೆಯಾಗಬೇಕೆಂಬ ಆಸೆ ಇದೆಯಂತೆ. ಆದರೆ, ಅವರದೇ ಆದ ಕಮಿಟ್‌ಮೆಂಟ್‌ಗಳಿಂದ ಸಿನಿಮಾಕ್ಕೆ ಸಮಯ ಮೀಸಲಿರಿಸಲು ಸಾಧ್ಯವಾಗುತ್ತಿಲ್ಲವಂತೆ. “ನಾನು 14ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದಾಗ ಸಿನಿಮಾನೇ ನನ್ನ ಲೈಫ್. ಸಿನಿಮಾ ಬಿಟ್ಟು ಬೇರೇನೂ ಯೋಚನೆ ಮಾಡುತ್ತಿರಲಿಲ್ಲ. ಈಗ ಸಿನಿಮಾ ಒಂದು ಭಾಗವಾಗಿದೆ ಅಷ್ಟೇ. ಪ್ಯಾಶನ್‌ಗಾಗಿ ಸಿನಿಮಾ ಮಾಡುತ್ತಿದ್ದೇನೆ.
ಈಗ ಮೊದಲಿನ ತರಹ ಸಿನಿಮಾ ಒಪ್ಪಿಕೊಳ್ಳೋದು ಕಷ್ಟ. ಕನ್ನಡವಷ್ಟೇ ಅಲ್ಲದೇ, ಮಲಯಾಳಂ, ತಮಿಳಿನಿಂದಲೂ ಆಫರ್ ಬರುತ್ತಿವೆ. ಆದರೆ, ಡೇಟ್ಸ್ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳಿಗೂ ಸಮಯಕೊಡಬೇಕು. ಸಹಜವಾಗಿಯೇ ತಡವಾಗುತ್ತಾ ಹೋಗುತ್ತದೆ. ಮುಂದೆ ವರ್ಷಕ್ಕೆ ಎರಡು ಸಿನಿಮಾವಾದರೂ ಮಾಡಬೇಕೆಂದು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ರಾಧಿಕಾ. ಜೊತೆಗೆ ಈ ಮೂಲಕ ಗಾಸಿಪ್‌ಗಳಿಗೆ ಉತ್ತರಿಸಬೇಕೆಂದು ಅವರು ನಿರ್ಧರಿಸಿದ್ದಾರೆ.
ಯಾವ ಗಾಸಿಪ್, ಏನು ಉತ್ತರ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ರಾಧಿಕಾ ಅವರು ಬೆಂಗಳೂರು ಬಿಟ್ಟು, ಮಂಗಳೂರಿನಲ್ಲಿ ಸೆಟ್ಲ ಆಗಿದ್ದಾರಂತೆ, ಮುಂದೆ ಸಿನಿಮಾ ಮಾಡೋದಿಲ್ವಂತೆ ಎಂಬೆಲ್ಲಾ ಗಾಸಿಪ್‌ಗಳು ಕೇಳಿಬಂದಿದ್ದವು. ಇದಕ್ಕೆ ರಾಧಿಕಾ ಸಿನಿಮಾ ಮೂಲಕ ಉತ್ತರ ಕೊಡಲು ನಿರ್ಧರಿಸಿದ್ದಾರೆ. “ಜನ ನಾನು ಇಲ್ಲಿ ಇಲ್ಲ ಎಂದು ಭಾವಿಸಿದ್ದಾರೆ. ಎಲ್ಲರಿಗೂ ಉತ್ತರ ಕೊಟ್ಟು ಸುಸ್ತಾಗಿ ಹೋಯಿತು.
ಇನ್ನು ನಾನು ಮಾತನಾಡುವುದರಲ್ಲಿ ಅರ್ಥವಿಲ್ಲ. ಸಿನಿಮಾ ಮೂಲಕ ಉತ್ತರಿಸಬೇಕು. ವರ್ಷಕ್ಕೆರಡು ಸಿನಿಮಾ ಬಿಡುಗಡೆಯಾದಾಗ ನಾನೆಲ್ಲಿದ್ದೇನೆ ಎಂಬುದು ಜನರಿಗೆ ಗೊತ್ತಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ರಾಧಿಕಾ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ರಾಧಿಕಾ ಇತ್ತೀಚೆಗೆ ಬೇರೆ ಬ್ಯಾನರ್‌ನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಯಾವುದಾದರೂ ಕಥೆ ಇಷ್ಟವಾದರೆ, ಅದನ್ನು ತಮ್ಮ ಬ್ಯಾನರ್‌ನಲ್ಲೇ ನಿರ್ಮಿಸಿ, ನಟಿಸುತ್ತಾರೆ.
ಯಾಕೆ ಈ ನಿರ್ಧಾರ ಎಂದರೆ, ತನ್ನಿಂದ ಬೇರೆ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಉತ್ತರ ಅವರಿಂದ ಬರುತ್ತದೆ. “ನಾನು ಒಮ್ಮೆ ಡೇಟ್ ಕೊಟ್ಟ ನಂತರ ಅವರು ಹೇಳಿದಾಗ ಚಿತ್ರೀಕರಣಕ್ಕೆ ಹೋಗಬೇಕು. ನನ್ನಿಂದ ಯಾವ ನಿರ್ಮಾಪಕರಿಗೂ ತೊಂದರೆಯಾಗಬಾರದು. ಅದೇ ಕಾರಣದಿಂದ ನನಗೆ ಬೇರೆ ಬ್ಯಾನರ್‌ಗಳಿಂದ ಅವಕಾಶ ಬಂದರೂ ತುಂಬಾ ಆಲೋಚಿಸಿ ಒಪ್ಪಿಕೊಳ್ಳುತ್ತೇನೆ. ಒಮ್ಮೆ ಕಮಿಟ್ ಆದ ನಂತರ ನಮ್ಮಿಂದ ಯಾರಿಗೂ ತೊಂದರೆಯಾಗಬಾರದು’ ಎನ್ನುತ್ತಾರೆ.