Advertisement
ಯಾರೂ ಕೂಡ ಹೀಗಾಗಬಹುದೆಂದು ಊಹಿಸಿರಲಿಕ್ಕಿಲ್ಲ. ಆದರೆ ಅದು ಆಗುವುದೇ ಹಾಗೆ. ಭವಿಷ್ಯದಲ್ಲಿ ನಾವು ಹೇಗೆ ಬದುಕುತ್ತೇವೆ ಎನ್ನುವ ಚಿತ್ರಣವನ್ನು (ಅಸ್ಪಷ್ಟ) ನಾವು ಚಿಕ್ಕಂದಿನಲ್ಲೇ ರಚಿಸಿಕೊಂಡುಬಿಟ್ಟಿರುತ್ತೇವೆ. ನಾವು ಇಂದು ಒಂದು ಘಟನೆಯೆಡೆಗೆ ವ್ಯಕ್ತಪಡಿಸುವ ಭಾವನೆ ಗಳಿವೆಯಲ್ಲ, ಬಾಲ್ಯದಲ್ಲೇ ಅದರ ಬುನಾದಿಯಿದೆ. ಅಂದರೆ ನಮ್ಮ ಅಳು, ನಗು, ಸಿಟ್ಟು, ಹೆದರಿಕೆ, ಸೇರಿದಂತೆ ಅನೇಕ ಭಾವನೆಗಳು ಮತ್ತು ತತ್ಪರಿಣಾಮವಾಗಿ ವ್ಯಕ್ತವಾಗುವ ವರ್ತನೆಗಳ ಬ್ಲೂಪ್ರಿಂಟ್ ಇರುವುದು ಬಾಲ್ಯದಲ್ಲಿ. ದುರಂತವೆಂದರೆ ನಮ್ಮ ಪೋಷಕರು/ ಹಿರಿಯರು ನಮ್ಮನ್ನು ಎಷ್ಟೇ ಚೆನ್ನಾಗಿ ಜೋಪಾನ ಮಾಡಿರಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ದೊಡ್ಡ ಮಾನಸಿಕ ಆಘಾತಗಳನ್ನು ಅನುಭವಿಸಿರುತ್ತೇವೆ. ಇದನ್ನು ಪ್ರೈಮಲ್ ವೂಂಡ್ ಅಥವಾ ಪ್ರಥಮ ಗಾಯ ಎನ್ನುತ್ತಾರೆ.
Related Articles
Advertisement
ಬಾಲ್ಯದಲ್ಲಿ ನಾವು ಎಷ್ಟು ದುರ್ಬಲವಾಗಿರುತ್ತೀವೆಂದರೆ ನಮಗೆ ಹಿರಿಯರ ಸಹಾಯ ಬೇಕೇ ಬೇಕು. ರಸ್ತೆ ದಾಟುವುದಕ್ಕೆ ಹೆದರುತ್ತೇವೆ, ಜನಜಂಗುಳಿಯಲ್ಲಿ ಒಬ್ಬರಿಗೇ ಓಡಾಡಲು ಆಗುವುದಿಲ್ಲ, ಶೂ ಹಾಕಿ ಕೊಳ್ಳುವುದಕ್ಕೂ ತಿಣುಕಾಡುತ್ತೇವೆ, ಒಂದು ಚಿಕ್ಕ ನಾಯಿಯೂ ನಮ್ಮನ್ನು ಕೆಳಕ್ಕೆ ಕೆಡವಿ ಕಚ್ಚಬಲ್ಲದು. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಸುತ್ತಲಿರುವ ಹಿರಿಯರ ಮೇಲೆ ಅವಲಂಬಿತವಾಗಲೇಬೇಕಾಗುತ್ತದೆ. ಹೀಗಾಗಿ ನಾವು ಅವರನ್ನು ನಂಬುತ್ತೇವೆ. ಅವರ ನಡೆ-ನುಡಿಗಳು ನಮಗೆ ವೇದವಾಕ್ಯವಾಗುತ್ತವೆ. ಅವರು ಮಾಡುವುದೆಲ್ಲ ಸರಿ ಅನಿಸುತ್ತಾ ಹೋಗುತ್ತದೆ. ಈ ಕಾರಣಕ್ಕಾಗಿಯೇ ಪ್ರತಿಯೊಂದು ಮಗುವೂ ತನ್ನ ಅಪ್ಪ-ಅಮ್ಮನನ್ನು “ಜಗತ್ತಿನ ಅತಿ ಶಕ್ತಿಶಾಲಿ, ಬದ್ಧಿವಂತ ವ್ಯಕ್ತಿಗಳು’ ಎಂದು ಭಾವಿಸುವುದು. ಹೀಗಾಗಿ ಅಪ್ಪ-ಅಮ್ಮನನ್ನು ಅನುಕರಿಸಲು ಆರಂಭಿಸು ತ್ತದೆ ಮಗು. ಅನುಕರಣೆ ಅನ್ನುವುದಕ್ಕಿಂತ ನಿರ್ದಿಷ್ಟ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕು ಎನ್ನುವುದರಿಂದ ಹಿಡಿದು ಭಾವನೆಗಳನ್ನು ಎಷ್ಟು ವ್ಯಕ್ತಪಡಿಸಬೇಕು- ವ್ಯಕ್ತಪಡಿಸಬಾರದು ಎನ್ನುವ ಬ್ಲೂ ಪ್ರಿಂಟ್ ರಚಿಸಿಕೊಳ್ಳಲು ಆರಂಭಿಸುತ್ತದೆ. ಅದರ ಆಧಾರದ ಮೇಲೆಯೇ ಅದು ಮುಂದಿನ ಬದುಕನ್ನು ಎದುರಿಸುತ್ತಾ ಸಾಗುತ್ತದೆ. ಹಣಕಾಸಿನ ವಿಚಾರ ದಲ್ಲಿ ಅಪ್ಪ ಜುಗ್ಗನಾಗಿದ್ದರೆ ಮಗನೂ ಮುಂದೆ ಹಾಗೇ ಆಗುವ ಸಾಧ್ಯತೆ ಹೆಚ್ಚು. ಇಲ್ಲವೇ ಅಪ್ಪ ನೀರಿನಂತೆ ಹಣ ಹರಿಸುತ್ತಿದ್ದರೆ ಮಗನೂ ಅದೇ ಸ್ವಭಾವ ಬೆಳೆಸಿಕೊಳ್ಳಬಹುದು. ಆದರೆ ಹೀಗೆ ಹಣ ಪೋಲು ಮಾಡುವ ವ್ಯಕ್ತಿಯನ್ನು ಕೇಳಿನೋಡಿ, ಈ ಗುಣ ಎಲ್ಲಿಂದ ಬಂತಪ್ಪ ಅಂತ? ಆತ ಹೇಳುವ ಉತ್ತರ ಸರಳವಾಗಿರುತ್ತದೆ-“ಯಾಕೋ ಏನೋ… ನಾನಿರೋದೇ ಹೀಗೆ!’
ಸತ್ಯವೇನೆಂದರೆ, ಆತ ಹಾಗಿರುವುದಕ್ಕಿಂತ ಹೆಚ್ಚಾಗಿ “ಹಾಗಿರಬೇಕು’ ಎಂದು ಬಾಲ್ಯದಲ್ಲಿಯೇ ಕಲಿತುಬಿಟ್ಟಿರುತ್ತಾನೆ. ಎಷ್ಟಿದ್ದರೂ ಅವನು “ಜಗತ್ತಿನ ಅತಿ ಶಕ್ತಿಶಾಲಿ, ಬುದ್ಧಿವಂತ ಅಪ್ಪನನ್ನು’ ನಂಬಿರುತ್ತಾನಲ್ಲವೇ!
ಬೇಕಿದ್ದರೆ ಒಮ್ಮೆ ನಿಮ್ಮಲ್ಲಿರುವ ಗುಣಾವಗುಣಗಳನ್ನು ಒರೆಗೆ ಹಚ್ಚಿ ನೋಡಿ. ಅವುಗಳಲ್ಲಿ ಬಹಳಷ್ಟು ಗುಣಗಳು ಅಪ್ಪ, ಅಮ್ಮ, ಅಕ್ಕ, ಟೀಚರ್, ಅಣ್ಣ ಅಥವಾ ಇನ್ಯಾರೋ ಹಿರಿಯರಿಂದ ಎರವಲು ಪಡೆದದ್ದೇ ಆಗಿರುತ್ತದೆ.
ಒಂದು ದಿನ ನೀವು ನಿಮ್ಮ ಶಕ್ತಿಶಾಲಿ ತಂದೆಯೊಂದಿಗೆ ಬೈಕ್‌ನಲ್ಲಿ ಹೊರಟಿರುತ್ತೀರಿ. ಆಗ ಅಚಾನಕ್ಕಾಗಿ ಎದುರಾಗುವ ಟ್ರಾಫಿಕ್ ಪೊಲೀಸ್ ಹೆಲ್ಮೆಟ್ ಹಾಕದ ನಿಮ್ಮ ತಂದೆಯನ್ನು ನಿಲ್ಲಿಸಿ ದಂಡ ಹಾಕುತ್ತಾನೆ. ಸರ್ ಪ್ಲೀಸ್ ಬಿಟ್ಟುಬಿಡಿ ಎಂದು ನಿಮ್ಮ ತಂದೆ ಪೊಲೀಸಪ್ಪನಿಗೆ ಬೇಡಿಕೊಳ್ಳುತ್ತಾನೆ. “ರೀ ಸುಮ್ನೆ ಫೈನ್ ಕಟಿ¤àರೋ, ಬೈಕ್ ಎತ್ತಾಕ್ಕೊಂಡು ಹೋಗ್ಲೋ?’ ಎಂದು ಅಬ್ಬರಿಸುತ್ತಾನೆ ಪೊಲೀಸ್. ನಿಮ್ಮ ಅಪ್ಪ ಬೆವರುತ್ತಾನೆ. ಅಸಹಾಯಕನಾಗಿ ತುಟಿಪಿಟಕ್ ಎನ್ನದೇ ಹಣ ತೆತ್ತು ಬರುತ್ತಾನೆ. ಅಕಟಕಟಾ! ನಿಮ್ಮ ಲೋಕವೇ ಕುಸಿದುಹೋಗುತ್ತದೆ. ಅಪ್ಪನನ್ನೂ ಮೀರಿಸುವ, ಅಪ್ಪನನ್ನೇ ಬೆದರಿಸುವ ಇನ್ನೊಂದು ಬೃಹತ್ ಶಕ್ತಿ(ಪೊಲೀಸ್)ಯ ದರ್ಶನ ನಿಮಗಾಗಿರುತ್ತದೆ. ಅಪ್ಪನೇ ಪೊಲೀಸರಿಗೆ ಅಂಜುವುದನ್ನು ನೋಡಿ ನಿಮಗೂ ಅಂಜಿಕೆ ಶುರುವಾಗುತ್ತದೆ. ಈಗ ನೀವು ಪ್ರೌಢಾವಸ್ಥೆಗೆ ಬಂದಿದ್ದೀರಿ. ತಲೆಯ ಮೇಲೆ ಹೆಲ್ಮೆಟ್ ಇದ್ದರೂ, ಬೈಕ್‌ನ ಎಲ್ಲಾ ದಾಖಲೆಗಳಿದ್ದರೂ ಟ್ರಾಫಿಕ್ ಪೊಲೀಸನನ್ನು ಕಂಡದ್ದೇ ನಿಮ್ಮ ಎದೆ ಢವಢವ ಹೊಡೆದುಕೊಳ್ಳಲಾರಂಭಿಸುತ್ತದೆ!
ತಪ್ಪು ಮಾಡದೇ ಇದ್ದರೂ ಪೊಲೀಸರನ್ನು ಕಂಡದ್ದೇ ಎದೆಯೇಕೆ ಬಡಿದುಕೊಳ್ಳುತ್ತಿದೆ ಎನ್ನುವುದಕ್ಕೆ ನಿಜವಾದ ಕಾರಣವನ್ನು ನೀವು ಹುಡುಕುವುದೇ ಇಲ್ಲ. ಬದಲಾಗಿ “ನನ್ನ ಗುಣವೇ ಹೀಗೆ’ ಎಂದುಕೊಂಡು ಬೆವರುತ್ತಾ ಮುಂದೆ ಸಾಗುತ್ತೀರಿ. ಇಂದಿನ ಪ್ರೌಢ ವ್ಯಕ್ತಿಯಲ್ಲಿ ಅಂದಿನ ಪುಟ್ಟ ಹುಡುಗನಿರುತ್ತಾನೆ. ತಾನು ವಿದ್ಯಾವಂತ/ದಡ್ಡ, ತಾನು ನೋಡಲು ಚೆನ್ನಾಗಿದ್ದೇನೆ/ಮಹಾನ್ ಕುರೂಪಿ, ತಾನು ಧೈರ್ಯವಂತ/ಅಖಂಡ ಪುಕ್ಕಲ, ತಾನು ಯಶಸ್ವಿಯಾಗುತ್ತೇನೆ/ವೈಫಲ್ಯವೇ ಹಣೆಬರಹದಲ್ಲಿದೆ ಎನ್ನುವ ಇಮೇಜ್ ಅನ್ನು ನಾವು ನಮ್ಮ ಸುತ್ತಲೂ ಕಟ್ಟಿಕೊಂಡುಬಿಟ್ಟಿರುತ್ತೇವೆ. ಅಂದೆಂದೋ ಬಾಲ್ಯದಲ್ಲಿ ಗಣಿತದಲ್ಲಿ ಫೇಲಾದ ವ್ಯಕ್ತಿ ಇಂದು ಕತ್ತೆಯ ವಯಸ್ಸಾದರೂ ಗಣಿತವೆಂದರೆ ಬೆಚ್ಚಿಬೀಳುತ್ತಾನೆ. ತನಗೆ ಗಣಿತ ಬರುವುದಿಲ್ಲ ಎಂದು ಖಂಡತುಂಡ ನಂಬಿಬಿಟ್ಟಿರುತ್ತಾನಾತ(ಆದರೆ ಇದೆಷ್ಟು ನಿಜ/ಭ್ರಮೆ ಎಂದು ಪರೀಕ್ಷಿಸಿ ನೋಡುವ ಗೋಜಿಗೇ ಹೋಗುವುದಿಲ್ಲ!)
ಬಹುತೇಕರು ತಮ್ಮ ಭಾವನೆಗಳು ಮತ್ತು ವರ್ತನೆಗಳು “ಸುಟ್ಟರೂ ಹೋಗದ ಗುಣ’ ಎಂದು ಭಾವಿಸಿಬಿಟ್ಟಿರುತ್ತಾರೆ. ತಮ್ಮ ಬಗ್ಗೆಯೇ ತಾವು ಅಪಾರ್ಥಮಾಡಿಕೊಂಡುಬಿಡುತ್ತಾರೆ. ಮನುಷ್ಯ ಇನ್ನೊಬ್ಬರನ್ನು ತಿಳಿದು ಕೊಳ್ಳುವುದಿರಲಿ, ತನ್ನನ್ನು ತಾನೇ ಎಷ್ಟು ತಿಳಿದುಕೊಂಡಿದ್ದಾನೆ?! ದುರಂತವೆಂದರೆ, ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕೂ ಬಿಡುವು ಮಾಡಿಕೊಳ್ಳದಷ್ಟು ಬ್ಯುಸಿಯಾಗಿಬಿಟ್ಟಿದ್ದೇವೆ ಇಂದು. ಅಂತರ್ಜಾಲದ ಯುಗದಲ್ಲಿ ಆತ್ಮಾವಲೋಕನಕ್ಕೆ ಟೈಮೇ ಇಲ್ಲ. ಹೀಗಾಗಿ, ನಾನಿರುವುದೇ ಹೀಗೆ, ನನ್ನ ಹಣೆಬರಹ ಸರಿಯಿಲ್ಲ ಎಂದು ಗೋಳಾಡುವ ವ್ಯಕ್ತಿ ತಾನು ಹಾಗೆ ಇರಬೇಕಾದ ಅಗತ್ಯವಿಲ್ಲ, ತನ್ನ ಹಣೆಬರಹವನ್ನು ಎಡಿಟಿಂಗ್ ಮಾಡುವ ಅವಕಾಶವೂ ಇದೆ ಎನ್ನುವುದನ್ನು ಮರೆತುಬಿಟ್ಟಿದ್ದಾನೆ. ಹೇಳಿ, ನೀವು ಬದಲಾಗಲು ಬಯಸುತ್ತೀರಾ? ಹಾಗಿದ್ದರೆ ನಿಮಗೆ “20 ದಿನದಲ್ಲಿ ಯಶಸ್ವಿಯಾಗಿ’ ಪುಸ್ತಕದ ಅಗತ್ಯವಿಲ್ಲ. ನಿಮಗೆ ಅಗತ್ಯ ವಿರುವುದು ಆತ್ಮಾವಲೋಕನ. ಒಳಗೆ ಇಳಿಯಿರಿ, ಕಲ್ಮಶವ ತೊಳೆಯಿರಿ. ಆಲ್ ದಿ ಬೆಸ್ಟ್! ಅಲೆನ್ ಡೆ ಬಾಟನ್ ಖ್ಯಾತ ಲೇಖಕರು, ಉದ್ಯಮಿ