“ಈ ಸಿನ್ಮಾದಿಂದ ದೇಶ ಬದಲಾವಣೆ ಆಗ್ತದಾ ಗೊತ್ತಿಲ್ಲ, ಆದರೆ, ಸಿನಿಮಾ ಮಾಡಿರುವ ನಿರ್ಮಾಪಕರು ಶೇ.10 ರಷ್ಟಾದರೂ ಬದಲಾಗಬೇಕೆಂದು ನಿರ್ಧರಿಸಿದ್ದಾರೆ! ಹೌದು, ಹೀಗೊಂದು “ದೇಶದ ಬದಲಾವಣೆಗಾಗಿ’ ಉತ್ತರ ಕರ್ನಾಟಕದ ರೈತರೊಬ್ಬರು ಕಷ್ಟಪಟ್ಟು ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರಕ್ಕೆ ಅವರಿಟ್ಟ ಹೆಸರು “ಆ ಒಂದು ದಿನ’. ಈಗಾಗಲೇ ಚಿತ್ರ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ.
ದ್ರಾಕ್ಷಿ ಬೆಳೆಗಾರ ರವೀಂದ್ರಗೌಡ ಎನ್.ಪಾಟೀಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದಾರೆ. ಅವರಿಗೆ ದೇಶದಲ್ಲೊಂದು ಬದಲಾವಣೆ ತರುವ ಆಸೆ. ಹೇಗೆ ತರುವುದು ಅಂತ ಯೋಚಿಸಿದಾಗ, ಅವರ ಮುಂದೆ ಕಾಣಿಸಿಕೊಂಡಿದ್ದೇ, ಚಿತ್ರರಂಗ. ಈ ಮೂಲಕ ತನಗನ್ನಿಸಿದ ವಿಷಯ ಹೇಳುವ ಮನಸ್ಸು ಮಾಡಿದರು. ಆ ಮನಸ್ಸೇ “ಆ ಒಂದು ದಿನ’. ಒಮ್ಮೆ ಕಥೆ ಬರೆದು, ನಿರ್ದೇಶಕ ಸಂಜಯ್ ಬಳಿ ಹೋಗಿದ್ದಾರೆ.
ಸಂಜಯ್‌ಗೂ ಸಿನಿಮಾ ಮಾಡಬೇಕೆನಿಸಿದೆ. ಇಬ್ಬರೂ ಸೇರಿ ಚಿತ್ರ ಮಾಡಿ ಮುಗಿಸಿದ್ದಾರೆ. “ದೇಶದಲ್ಲಿ ಹರಡಿರುವ ಹಣದ ವ್ಯಾಮೋಹ, ಜಾತಿ ರಾಜಕೀಯ, ಹದಗೆಟ್ಟ ಪ್ರಜಾಪ್ರಭುತ್ವದ ವ್ಯವಸ್ಥೆ ಸರಿಪಡಿಸುವುದು ಕಷ್ಟ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ, ಹಣದ ಹಿಂದೆ ಬಿದ್ದ, ರಾಜಕಾರಣಿಗಳು, ಅಧಿಕಾರಿಗಳನ್ನು ಬದಲಿಸಲು ಸಾಧ್ಯವಿದೆ. ಅದು ಜನರಿಂದ ಮಾತ್ರ ಎಂಬುದನ್ನು ಅರಿತ ರವೀಂದ್ರಗೌಡ ಪಾಟೀಲ್, ಜನರು ಎಚ್ಚೆತ್ತುಕೊಳ್ಳುವಂತಹ ಚಿತ್ರ ಮಾಡಿದ್ದಾರೆ.
ಈ ಮೂಲಕ ತನ್ನನ್ನು ದೊಡ್ಡ ಶಾಣ್ಯಾ ಅಂದುಕೊಳ್ಳೋರು ಬಾಳ ಮಂದಿ ಇದಾರ. ಅದಕ್ಕೆಲ್ಲ ನಾವ್ ತಲೆಕೆಡುಸ್ಕೊಳಂಗಿಲ್ಲ’ ಎನ್ನುತ್ತಾರೆ ನಿರ್ಮಾಪಕರು. “ಇದು ಹಳ್ಳಿಯಲ್ಲಿ ಎರಡು ಪಾರ್ಟಿಗಳ ಮಧ್ಯೆ ನಡೆಯುವ ಕಥೆಯಂತೆ. ನೈಜ ಘಟನೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ಕಥೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸಲಿದ್ದು, “ಆ ಒಂದು ದಿನ’ ಬದಲಾವಣೆ ಆಗುತ್ತೋ ಇಲ್ಲವೋ ಅನ್ನೋದೇ ಸಸ್ಪೆನ್ಸ್. ಚಿತ್ರಕ್ಕೆ ಸಾಕಷ್ಟು ಖರ್ಚಾಗಿದೆ. ಎಷ್ಟಾಗಿದೆ ಅನ್ನೋದು ಬೇಡ, ಎಂಥಾ ಚಿತ್ರ ಕೊಡ್ತಾ ಇದೀನಿ ಅನ್ನೋದು ಮುಖ್ಯ.
ವ್ಯಾಪಾರಿ ಮನೋಭಾವದವರು ರಾಜಕೀಯಕ್ಕೆ ಬರಬಾರದು, ಗೂಂಡಾ ಮನೋಭಾವದವರು ಪೊಲೀಸ್ ಇಲಾಖೆಗೆ ಬರಬಾರದು ಎಂಬ ಅಂಶಗಳೂ ಇಲ್ಲಿವೆ’ ಎನ್ನುತ್ತಾರೆ ನಿರ್ಮಾಪಕರು. ನಿರ್ದೇಶಕ ಸಂಜಯ್, ಸಾಣೇಹಳ್ಳಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿದ್ದಾರಂತೆ. ಚಿತ್ರದಲ್ಲಿ ಎರಡು ಐಟಂ ಸಾಂಗ್‌ಗಳಿವೆ. ಸಿಮ್ರಾನ್, ಆಲಿಷಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಚಿತ್ರಕ್ಕೆ ಶ್ರೀ ಹರ್ಷ ಸಂಗೀತ ನೀಡಿದರೆ, ಬಾಲ ಗಣೇಶನ್ ಕ್ಯಾಮೆರಾ ಹಿಡಿದಿದ್ದಾರೆ.