Advertisement
ಪಮ್ಮಿ ಸ್ಕೂಲಲ್ಲಿ ರಂಗನಾಯಕಿ ಮಿಸ್ ಅಂತ ಇದ್ದಾರೆ. ಭಾಳ ಒಳ್ಳೇ ಮಿಸ್ ಅವರು. ಯಾವಾಗಲೂ ನಗ್ತಾ ನಗ್ತಾ ಇರ್ತಾರೆ. ಅವರನ್ನು ನೋಡಿದ ಕೂಡಲೆ ಮಕ್ಕಳೆಲ್ಲಾ “ನಮಸ್ತೆ ಮಿಸ್’ ಅಂತ ಕೂಗ್ತಾರೆ. ಮಿಸ್ ನಗ್ತಾ ನಗ್ತಾ “ನಮಸ್ತೆ ಮಕ್ಕಳೇ…’ ಅಂತಾರೆ. “ಮಕ್ಕಳೇ, ಒಂದು ಪ್ರಶ್ನೆ ಕೇಳಲಾ?’ ಅಂತ ಮಿಸ್ ಕೇಳಿದರೆ, ಮಕ್ಕಳು ಉತ್ಸಾಹದಿಂದ “ಕೇಳೀ ಮಿಸ್’ ಅಂತಾರೆ. “ಪಮ್ಮಿ ನೀನು ಹೇಳು ಕಂದಾ… ಇವತ್ತು ನಿಂಗೆ ಬಿದ್ದ ಕನಸು ಬಣ್ಣದ್ದೋ? ಕಪ್ಪು-ಬಿಳುಪಿಧ್ದೋ?’ ಪಮ್ಮಿ ಕೆನ್ನೆ ಮೇಲೆ ಬೆರಳು ಇಟ್ಟುಕೊಂಡು ಒಂದು ಕ್ಷಣ ಯೋಚನೆ ಮಾಡ್ತಾಳೆ! “ನಾನು ಕನಸಲ್ಲಿ ಗುಲಾಬಿ ಹೂ ಕಂಡೆ!’ “ಅದು ಯಾವ ಬಣ್ಣದ್ದು?’ ಪಮ್ಮಿಗೆ ಥಟ್ಟನೆ ಹೊಳೆಯತ್ತೆ! “ಮಿಸ್, ನಾನು ಕನಸಲ್ಲಿ ನೋಡಿದ ಹೂವಿಗೆ ಗುಲಾಬಿ ಬಣ್ಣ ಇತ್ತು! ವೆರಿ ಗುಡ್ ಕಂದಾ! ಕನಸಲ್ಲಿ ನೀನು ನೋಡಿದ ಗುಲಾಬಿ ಗಿಡದಲ್ಲಿ ಎಷ್ಟು ಗುಲಾಬಿಗಳು ಇದ್ದವು? ಪಮ್ಮಿ ಥಟ್ಟನೆ ಹೇಳ್ತಾಳೆ: “ಒಂದೇ… ಒಂದೇ ಗುಲಾಬಿ ಹೂ ಇತ್ತು!’
“ಮತ್ತೆ! ನಿಮಗೇ! ಅದೂ ಕೆಂಪು ಬಣ್ಣದ ಪಾಟಲ್ಲಿ’
“ಕೆಂಪಾ? ನಮಗೆ ಕೆಂಪು ಇಷ್ಟ’ ಎಂದರು ಮಕ್ಕಳು.
ಮನೆಗೆ ಹೋಗೋವಾಗ ರಂಗನಾಯಕಿ ಮಿಸ್ ಪಮ್ಮಿಗೆ ಪುಟ್ಟ ಬ್ಯಾಗಲ್ಲಿ, ಗುಲಾಬಿ ಗಿಡ ಕೊಟ್ಟರು! ಪಮ್ಮಿ ಮನೆಗೆ ಬಂದೋಳೇ ಅಮ್ಮನ ಹತ್ತಿರ ಓಡಿಹೋಗಿ “ಮಿಸ್ ಗಿಫ್ಟ್ ಕೊಟ್ಟರು ಎಂದು ಕೂಗಿದಳು. ಅವಳ ಮುಖ ಗುಲಾಬಿ ಹೂ ಥರ ಅರಳಿತ್ತು! “ಅಹಾ! ಎಷ್ಟು ಚಂದದ ಪುಟ್ಟ ಗುಲಾಬಿ ಗಿಡ’ ಎಂದು ಆಶ್ಚರ್ಯದಿಂದ ಹೇಳಿದರು ಅಮ್ಮ. ಅವರು ಪಮ್ಮಿನ ತಬ್ಬಿಕೊಂಡು ಹೇಳಿದರು: “ಮಗಳೆ ನಿನಗೆ ಸಣ್ಣ ಬಟ್ಟಲು ಕೊಡ್ತೀನಿ! ಬೆಳಿಗ್ಗೆ ಒಮ್ಮೆ, ಸಂಜೆ ಒಮ್ಮೆ ನೀನು ಗುಲಾಬಿ ಗಿಡಕ್ಕೆ ಒಂದೊಂದು ಕಪ್ ನೀರು ಹಾಕಬೇಕು. ಅದರಲ್ಲಿ ಅರಳ್ಳೋ ಗುಲಾಬಿಯೆಲ್ಲಾ ನಿಂಗೇ!’
Related Articles
“ಹಾಗೇ ಮಾಡು… ಅವರಿಗೆ ಖುಷಿ ಆಗುತ್ತೆ. ಈಗ ಪಾಟ್‌ಅನ್ನು ಬಾಲ್ಕನಿಯಲ್ಲಿ ಇಟ್ಟು ಬಾ… ಕುಡಿಯಲು ಹಾಲು ಕೊಡ್ತೀನಿ’ ಅನ್ನುತ್ತಾರೆ.
Advertisement
ಪಮ್ಮಿ ಬೆಳಿಗ್ಗೆ ಎದ್ದವಳೇ ಕೇಳಿದ್ದು, “ಅಮ್ಮಾ… ಗುಲಾಬಿ ಗಿಡ ಹೂ ಬಿಟ್ಟಿದೆಯಾ?’ ಪಮ್ಮಿ, ಬಾಲ್ಕನಿಗೆ ಹೋಗಿ ನೋಡುತ್ತಾಳೆ. ಅಬ್ಟಾ! ಎಷ್ಟೊಂದು ಹೂಗಳು ಗುಲಾಬಿ ಗಿಡದಲ್ಲಿ! “ಅಮ್ಮಾ… ನನ್ನ ಗಿಡ ಹೂ ಬಿಟ್ಟಿದೆ…’
ಅಡುಗೆ ಮನೆಯಿಂದಲೇ ಅಮ್ಮ ಕೂಗುತ್ತಾರೆ “ಎಷ್ಟು ಹೂ ಬಿಟ್ಟಿದೆ? ಎಣಿಸಿಕೊಂಡು ಬಾ!’ ಪಮ್ಮಿ ಬೆರಳುಗಳನ್ನು ಮಡಿಸಿ ಮಡಿಸಿ ಎಣಿಸುತ್ತಾಳೆ. “ಒಂದು… ಎರಡು… ಮೂರು… ನಾಲಕ್ಕು! ಓ… ನನ್ನ ಗಿಡದಲ್ಲಿ ನಾಲಕ್ಕು ಗುಲಾಬಿ ಹೂ! ಪಮ್ಮಿ ಬೇಗ ಬೇಗ ಹಲ್ಲು ತಿಕ್ಕಿ, ಮುಖ ತೊಳೆದು ಬಾತ್‌ರೂಂ ಕೆಲಸಾನೂ ಮುಗಿಸಿ ಅಮ್ಮನ ಹತ್ತಿರ ಬರ್ತಾಳೆ. ಅಮ್ಮಾ… ನಾಲಕ್ಕು ಗುಲಾಬಿ ಹೂ ಅರಳಿವೆ ನನ್ನ ಪುಟ್ಟ ಗುಲಾಬಿ ಗಿಡದಲ್ಲಿ!’ “ಅದರಲ್ಲಿ ಒಂದು ನೆನ್ನೆ ಗಿಡದಲ್ಲಿ ಇದ್ದದ್ದು ಅಲ್ವಾ? ಹಾಗಾದರೆ ಈವತ್ತು ಬಿಟ್ಟಿರೋದು ಎಷ್ಟು ಹೂ?’
ಪಮ್ಮಿ, ನಾಲಕ್ಕು ಬೆರಳಲ್ಲಿ ಒಂದು ಬೆರಳು ಮಡಿಸಿ ಮತ್ತೆ ಕೌಂಟ್ ಮಾಡುತ್ತಾಳೆ. “ಒಂದು! ಎರಡು! ಮೂರು! ಅಮ್ಮಾ… ಇವತ್ತು ನನ್ನ ಗುಲಾಬಿ ಗಿಡದಲ್ಲಿ ಮೂರು ಹೂ ಬಿಟ್ಟಿವೆ!’
“ವಾಹ್! ಅದರಲ್ಲಿ ಚೆನ್ನಾಗಿ ಅರಳಿರೋ ಹೂವನ್ನು ನಿಮ್ಮ ಮಿಸ್ಸಿಗೆ ತಗೊಂಡು ಹೋಗ್ತಿàಯಾ ಮತ್ತು ಒಂದನ್ನು ನೀನು ಇಟ್ಟುಕೊಳ್ತೀಯಾ. ಆಗ ಗಿಡದಲ್ಲಿ ಉಳಿಯೋದು ಎಷ್ಟು?’ಪಮ್ಮಿ ನಾಲಕ್ಕು ಬೆರಳು ಚಾಚಿ, “ಮಿಸ್‌ಗೆ ಒಂದು!’ ಎನ್ನುತ್ತಾ ಕಿರುಬೆರಳು ಮಡಚಿದಳು. “ನನಗೆ ಒಂದು…’ ಎನ್ನುತ್ತಾ ಉಂಗುರದ ಬೆರಳನ್ನು ಮಡಿಸಿದಳು. ಹಿಂದೆಯೇ “ಅಮ್ಮಾ… ನನಗೆ ಮತ್ತು ಮಿಸ್‌ಗೆ ಒಂದೊಂದು ಅಂದಮೇಲೆ ನಿನಗೂ ಒಂದು ಕೊಡುತ್ತೇನೆ’ ಎನ್ನುತ್ತಾ ಪಮ್ಮಿ ಮಧ್ಯದ ಬೆರಳನ್ನೂ ಮಡಿಸಿದಳು. ಈಗ ನಾಲ್ಕರಲ್ಲಿ ಮಡಿಸದೆ ಉಳಿದಿದ್ದು ತೋರು ಬೆರಳು ಒಂದೇ! ಪಮ್ಮಿಗೆ ಉತ್ತರ ಹೊಳೆದಿತ್ತು. “ಅಮ್ಮಾ, ನನ್ನ ಗಿಡದಲ್ಲಿ ಉಳಿಯೋದು ಒಂದು ಗುಲಾಬಿ!’ ಎಂದವಳು ಜೋರಾಗಿ ಹೇಳಿದಳು. ಈಗ ದಿನಾ ಬೆಳಿಗ್ಗೆ ಪಮ್ಮಿ ಬಾಲ್ಕನಿಗೆ ಓಡುತ್ತಾಳೆ. ಅವಳ ಕಣ್ಣುಗಳು ಗುಲಾಬಿ ಹೂವಿನ ಹಾಗೆ ಅರಳುತ್ತವೆ! ಒಂದಿನ ಮೂರು ಹೊಸಾ ಹೂ! ಇನ್ನೊಂದು ದಿನ ಐದು ಗುಲಾಬಿ! ಭಾನುವಾರವಂತೂ ಮಜವೋ ಮಜ! ಹತ್ತು ಗುಲಾಬಿ ಹೂ ಗಿಡದಲ್ಲಿ! “ಅಮ್ಮಾ, ಗಿಡದಲ್ಲಿ ಹನ್ನೊಂದು ಹೂ ಬಿಟ್ಟರೆ ಅವನ್ನು ಎಣಿಸೋದು ಹೇಗೆ?’ ಎಂದು ಪಮ್ಮಿ ರಾಗ ತೆಗೆಯುತ್ತಾಳೆ! ಹತ್ತು ಬೆರಳು ಮಡಿಸು. ಆಮೇಲೆ ಒಂದೊಂದಾಗಿ ಮತ್ತೆ ಬೆರಳು ಚಾಚು! ಹತ್ತು ಪ್ಲಸ್ ಒಂದು ಎಷ್ಟಾಗುತ್ತೆ? “ಹನ್ನೊಂದು’ ಎಂದು ಪಮ್ಮಿ ಕೂಗುತ್ತಾಳೆ!
“ಅಮ್ಮಾ ನೀನೂ ಟೀಚರ್! ಗಣಿತದ ಟೀಚರ್’ ಎಂದು ಪಮ್ಮಿ ಯಾವುದೋ ಗೊತ್ತಿಲ್ಲದ್ದು ಒಮ್ಮೆಗೇ ಗೊತ್ತಾದಂತೆ ಟಣಪುಣ ಕುಣಿಯುತ್ತಾಳೆ. ಅಮ್ಮ ನಗುತ್ತಾರೆ!
“ಅಮ್ಮಾ ನಾಳೆಯಿಂದ ನಿನ್ನನ್ನು ಅಮ್ಮಾ ಮಿಸ್ ಎನ್ನುತ್ತೇನೆ!’
ಅಮ್ಮ ಪಮ್ಮಿಯನ್ನು ತಬ್ಬಿಕೊಳ್ಳುತ್ತಾರೆ. ಅವಳ ಹಣೆಗೆ ಮೆಲ್ಲಗೆ ಒಂದು ಮುತ್ತು ಕೊಡುತ್ತಾರೆ!
“ಮಗಳೇ! ನಾನು ಅಮ್ಮಾ ಗಣಿತದ ಮಿಸ್!’
“ಎಸ್… ಎಸ್! ಅಮ್ಮ, ನೀನು ಅಮ್ಮಾ ಗಣಿತದ ಮಿಸ್!’
ಅಮ್ಮ ಸದ್ದಿಲ್ಲದೆ ನಗುತ್ತಾರೆ. ಅಹಾ! ಅಮ್ಮನ ನಗು ಕೂಡಾ ಗುಲಾಬಿಯ ಹಾಗೇ ಇದೆ ಎಂದುಕೊಳ್ಳುತ್ತಾಳೆ ನಮ್ಮ ಪಮ್ಮಿ! – ಎಚ್. ಎಸ್. ವೆಂಕಟೇಶಮೂರ್ತಿ