ಯಾವುದೇ ದೇಶವಾಗಿರಲಿ, ಸಂಸತ್ ಎಂದರೆ ಅದರ ಜತೆ ಆ ದೇಶದ ಸಂಪ್ರದಾಯ, ಸಂಸ್ಕೃತಿ, ಮೌಲ್ಯಗಳು ಬೆಸೆದುಗೊಂಡಿರುತ್ತವೆ. ಅದೇ ರೀತಿಯಲ್ಲೇ ಭಾರತದ ನೂತನ ಸಂಸತ್ ಭವನವೂ ನಿರ್ಮಾಣವಾಗಿದೆ. ಹಾಗಾದರೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇರುವ ಸಂಸತ್ ಕಟ್ಟಡಗಳ ವಿಶೇಷತೆ ಏನು? ಯಾವ ದೇಶದಲ್ಲಿ ಅತ್ಯಂತ ವೈಭವೋಪೇತ ಸಂಸತ್ ಕಟ್ಟಡ ನಿರ್ಮಾಣ ಮಾಡಲಾಗಿದೆ?
- ಪ್ಯಾಲೇಸ್ ಆಫ್ ಪಾರ್ಲಿಮೆಂಟ್
ಇದು ರೊಮೇನಿಯಾ ದೇಶದ ಸಂಸತ್ ಭವನ. 1984ರ ಜೂ.25ರಂದು ಈ ಕಟ್ಟಡ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಕಟ್ಟಡದ ವಿನ್ಯಾಸ ಮಾಡಿದ್ದು ಖ್ಯಾತ ವಾಸ್ತುಶಿಲ್ಪಿ ಅನ್ಕಾ ಪೆಟ್ರೆಸ್ಕಾ. ಅಷ್ಟೇ ಅಲ್ಲ, ವಿನ್ಯಾಸಕ್ಕಾಗಿಯೇ 700ಕ್ಕೂ ಹೆಚ್ಚು ವಾಸ್ತುಶಿಲ್ಪಿಗಳು ಕೈಜೋಡಿಸಿದ್ದರು. 13 ವರ್ಷಗಳ ಕಾಲ ಈ ಕಟ್ಟಡದ ನಿರ್ಮಾಣವಾಗಿತ್ತು. ಅಂದ ಹಾಗೆ, ಇದು ಜಗತ್ತಿನಲ್ಲೇ ಎರಡನೇ ಅತೀ ದೊಡ್ಡ ಪಾರ್ಲಿಮೆಂಟ್ ಕಟ್ಟಡ. 2020ರ ಅಂದಾಜಿನಂತೆ ಈ ಕಟ್ಟಡದ ಮೌಲ್ಯ 35 ಸಾವಿರ ಕೋಟಿ ರೂ. ಹೀಗಾಗಿ ಜಗತ್ತಿನ ಅತ್ಯಂತ ದುಬಾರಿ ಕಟ್ಟಡ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. ವಿಶೇಷವೆಂದರೆ ಹೀಟಿಂಗ್, ಎಲೆಕ್ಟ್ರಿಸಿಟಿ ಮತ್ತು ಲೈಟಿಂಗ್‌ಗೇ ವಾರ್ಷಿಕ 49.53 ಕೋಟಿ ರೂ. ಬೇಕಾಗುತ್ತದೆ.
- ನ್ಯಾಶನಲ್ ಡಯಟ್ ಬಿಲ್ಡಿಂಗ್
ಜಪಾನ್‌ನ ಪಾರ್ಲಿಮೆಂಟ್ ಹೌಸ್ ಇದು. ಇದರಲ್ಲಿ ಎರಡು ಹೌಸ್‌ಗಳಿವೆ. 1920ರ ಜ.30ರಂದು ಈ ಕಟ್ಟಡ ಕಟ್ಟಲು ಆರಂಭಿಸಲಾಗಿದ್ದು, 1936ರ ನವೆಂಬರ್ 7ರಂದು ಮುಗಿದಿತ್ತು. ಅಷ್ಟೇ ಅಲ್ಲ, ಇದು 1936ರಿಂದ 1964ರ ವರೆಗೆ ಜಪಾನ್‌ನ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಗ್ಲಾಸ್, ಡೋರ್ ಲಾಕ್, ನ್ಯೂಮ್ಯಾಟಿಕ್ ಟ್ಯೂಬ್ ಸಿಸ್ಟಮ್ ಬಿಟ್ಟರೆ, ಈ ಕಟ್ಟಡವನ್ನು ಜಪಾನ್ ದೇಶದ ವಸ್ತುಗಳನ್ನು ಬಳಸಿಯೇ ನಿರ್ಮಾಣ ಮಾಡಲಾಗಿದೆ.
- ಪಾರ್ಲಿಮೆಂಟ್ ಹೌಸ್
ಆಸ್ಟ್ರೇಲಿಯಾದಲ್ಲಿನ ಅಧಿಕೃತ ಪಾರ್ಲಿಮೆಂಟ್‌ನ ಹೆಸರು ಇದು. 1981ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ 1988ರಲ್ಲಿ ಮುಗಿಯಿತು. ಈ ಕಟ್ಟಡದ ನಿರ್ಮಾಣ ವೆಚ್ಚ 64 ಸಾವಿರ ಕೋಟಿ ರೂ. ಹಾಗೆಯೇ ಇದನ್ನು ಬ್ರಿಟನ್ ರಾಣಿ ಎರಡನೇ ಎಲಿಜೆಬೆತ್ ಅವರು ಉದ್ಘಾಟಿಸಿದ್ದರು. ಈ ಪಾರ್ಲಿಮೆಂಟ್ ಹೌಸ್ ಅನ್ನು ಕ್ಯಾಪಿಟಲ್ ಹಿಲ್ ಎಂದೂ ಕರೆಯಲಾಗುತ್ತದೆ. ಇದು 18 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿದೆ.
- ನ್ಯಾಶನಲ್ ಪಾರ್ಲಿಮೆಂಟ್ ಹೌಸ್
ಬಾಂಗ್ಲಾದೇಶದ ಸಂಸತ್ ಭವನ ಇದಾಗಿದ್ದು, ಪ್ರಖ್ಯಾತ ವಾಸ್ತುಶಿಲ್ಪಿ ಲೂಯಿಸ್ ಖಾನ್ ರೂಪಿಸಿದ್ದರು. ಇದನ್ನು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಎಂದೂ ಕರೆಯಲಾಗುತ್ತದೆ. 1962ರಲ್ಲಿ ಇದನ್ನು ಕಟ್ಟುವುದಕ್ಕೆ ಆರಂಭಿಸಲಾಗಿದ್ದು, 20 ವರ್ಷಗಳ ಕಾಲ ಮುಂದುವರಿದಿತ್ತು. 1971ರಲ್ಲಿ ಲಿಬರೇಶನ್ ವಾರ್ ಸಂದರ್ಭದಲ್ಲಿ ಇದರ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು. ಇದನ್ನು ಬೆಂಗಾಲಿ ಜನರ ಹೆಮ್ಮೆ ಎಂದೂ ಭಾವಿಸಲಾಗುತ್ತಿದೆ. ಈ ನ್ಯಾಶನಲ್ ಹೌಸ್ ಸಿಮೆಂಟ್ ಮತ್ತು ಸುಣ್ಣದ ಕಲ್ಲಿನಿಂದ ನಿರ್ಮಿಸಲಾದ ಒಂಬತ್ತು ಬ್ಲಾಕ್‌ಗಳನ್ನು ಹೊಂದಿದೆ.
- ಬಿನ್ನೆನ್‌ಹಾಫ್
ನೆದರ್ಲೆಂಡ್‌ನ ಸ್ಟೇಟ್ಸ್ ಆಫ್ ಜನರಲ್ ಆಗಿರುವ ಇದು ಉಭಯ ಸದನಗಳನ್ನು ಈ ಕಟ್ಟಡ ಒಳಗೊಂಡಿದೆ. ಬಿನ್ನೆನ್‌ಹಾಫ್ ಎಂದರೆ ಕಟ್ಟಡಗಳ ಸಂಕೀರ್ಣ. ಇದರಲ್ಲಿ ಮಿನಿಸ್ಟ್ರಿ ಆಫ್ ಜನರಲ್ ಅಫೇರ್ಸ್ ಮತ್ತು ನೆದರ್ಲೆಂಡ್‌ನ ಪ್ರಧಾನಿಗಳ ಕಚೇರಿಯೂ ಇದೆ. ಇದನ್ನು ನೆದರ್ಲೆಂಡ್‌ನ 100 ಹೆರಿಟೇಜ್ ಸ್ಥಳಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಅಲ್ಲದೆ ಜಗತ್ತಿನಲ್ಲೇ ಈಗಲೂ ಬಳಕೆಯಲ್ಲಿರುವ ಅತ್ಯಂತ ಹಳೆಯ ಕಟ್ಟಡ ಎಂಬ ಖ್ಯಾತಿಗೂ ಈ ಬಿನ್ನೆನ್‌ಹಾಫ್ ಪಾತ್ರವಾಗಿದೆ.
- ದಿ ನ್ಯಾಶನಲ್ ಕಾಂಗ್ರೆಸ್ ಪ್ಯಾಲೇಸ್
ಇದು ಬ್ರೆಜಿಲ್‌ನ ಪಾರ್ಲಿಮೆಂಟರಿ ಕಟ್ಟಡ. ಬ್ರೆಜಿಲ್‌ನ ನ್ಯಾಶನಲ್ ಲೆಜಿಸ್ಲೇಚರ್ ಮತ್ತು ನ್ಯಾಶನಲ್ ಕಾಂಗ್ರೆಸ್ ಆಫ್ ಬ್ರೆಜಿಲ್‌ನ ಎಲ್ಲ ಸಭೆಗಳು ಇಲ್ಲೇ ನಡೆಯುತ್ತವೆ. 1947ರಲ್ಲಿ ವಿಶ್ವಸಂಸ್ಥೆಯ ಕಟ್ಟಡವನ್ನು ವಿನ್ಯಾಸಗೊಳಿಸಿದ್ದ ಆಸ್ಕರ್ ನೇಮಾರ್ ಅವರ ತಂಡವೇ ಈ ಕಟ್ಟಡ ವಿನ್ಯಾಸ ಮಾಡಿದೆ. ಈ ಕಟ್ಟಡದಲ್ಲಿರುವ ಎರಡು ಸದನಗಳ ಡೋಮ್‌ಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
- ಶ್ರೀಲಂಕಾ ಪಾರ್ಲಿಮೆಂಟ್ ಸಂಕೀರ್ಣ
ಕೊಲಂಬೋದಿಂದ 16 ಕಿ.ಮೀ. ದೂರದಲ್ಲಿರುವ ದುವಾ ಎಂಬ ದ್ವೀಪದಲ್ಲಿ ಈ ಪಾರ್ಲಿಮೆಂಟ್ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ತೇಲುತ್ತಿರುವ ಅರಮನೆ ಎಂಬ ವಿನ್ಯಾಸದ ಮೇಲೆ ಇದನ್ನು ನಿರ್ಮಿಸಲಾಗಿದೆ. ದೇಶಮಾನ್ಯ ಜಾಫ್ರಿ ಬಾವಾ ಅವರು ಇದನ್ನು ವಿನ್ಯಾಸ ಮಾಡಿದ್ದಾರೆ. ಜಪಾನ್‌ನ ಎರಡು ಗ್ರೂಪ್‌ಗಳು ಸೇರಿ ಇದನ್ನು ನಿರ್ಮಿಸಿವೆ. 1982ರಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯ ಅಂತ್ಯವಾಗಿತ್ತು. ಈ ಕಟ್ಟಡದ ವೆಚ್ಚ 200 ಕೋಟಿ ರೂ.ಗಳಾಗಿದ್ದವು.
- ದಿ ಬಿಹೀವ್
ನ್ಯೂಜಿಲೆಂಡ್‌ನ ಕಾರ್ಯಕಾರಿ ವಿಭಾಗದ ಹೆಸರು ಇದು. ಸಾಂಪ್ರದಾಯಿಕ ಶೈಲಿಯಲ್ಲಿ ಈ ಪಾರ್ಲಿಮೆಂಟ್ ಹೌಸ್ ಅನ್ನು ನಿರ್ಮಾಣ ಮಾಡಲಾಗಿದೆ. 1969ರಲ್ಲಿ ಕಾಮಗಾರಿ ಆರಂಭವಾಗಿ, 1981ರಲ್ಲಿ ಅಂತ್ಯವಾಗಿತ್ತು. ನ್ಯೂಜಿಲೆಂಡ್‌ನ 20 ಡಾಲರ್ ಮುಖಬೆಲೆಯ ನೋಟಿನ ಮೇಲೂ ಈ ಕಟ್ಟಡದ ಚಿತ್ರ ಹಾಕಲಾಗಿದೆ. ಇದನ್ನು ಅಲ್ಲಿನ ಕೇಂದ್ರ ಬ್ಯಾಂಕ್, ನ್ಯೂಜಿಲೆಂಡ್‌ನ ಐಕಾನ್ ಎಂದು ಕರೆದಿದೆ.
- ಸೆಂಟ್ರಲ್ ಬ್ಲಾಕ್
ಕೆನಡಾದ ಪಾರ್ಲಿಮೆಂಟ್ ಹೌಸ್ ಇದಾಗಿದೆ. 1916 ಜು. 25ರಂದು ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದ್ದು, 1927ರ ಜು.1ರಂದು ಮುಗಿದಿತ್ತು. ಇದನ್ನು ಕೆನಡಾದ ಅತ್ಯಂತ ಪ್ರಮುಖ ಕಟ್ಟಡಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.
- ಹಂಗೇರಿಯನ್ ಪಾರ್ಲಿಮೆಂಟ್ ಕಟ್ಟಡ
ಹಂಗೇರಿಯ ಅತ್ಯಂತ ದೊಡ್ಡ ಕಟ್ಟಡ ಇದಾಗಿದ್ದು, 1902ರಲ್ಲಿ ಇದನ್ನು ಕಟ್ಟಿ ಮುಗಿಸಲಾಯಿತು. ಹಂಗೇರಿಯನ್ ವಾಸ್ತುಶಿಲ್ಪಿ ಇಮ್ರೆ ಸ್ಟೆಂಡಿಲ್ ಅವರು ವಿನ್ಯಾಸಗೊಳಿಸಿದ್ದಾರೆ. ಈ ಕಟ್ಟಡದ ಗುಂಭಗಳನ್ನು ನಿರ್ಮಾಣ ಮಾಡಲು 17 ವರ್ಷ ತೆಗೆದುಕೊಳ್ಳಲಾಯಿತು. ಇದನ್ನು ನಿಯೋ ಗೋಥಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜತೆಗೆ ಜಗತ್ತಿನಲ್ಲೇ ಮೂರನೇ ಅತೀದೊಡ್ಡ ಪಾರ್ಲಿಮೆಂಟ್ ಹೌಸ್ ಎಂಬ ಖ್ಯಾತಿಗೂ ಇದು ಒಳಗಾಗಿದೆ. ಇದರಲ್ಲಿ 691 ರೂಂಗಳಿವೆ. 10 ಕಂಟ್ರಿಯಾರ್ಡ್‌ಗಳು, ಹಂಗೇರಿ ಆಳಿದ ರಾಜರ 88 ಪ್ರತಿಮೆಗಳು, 12.5 ಮೈಲು ಉದ್ದದ ಸ್ಟೇರ್‌ಕೇಸ್‌ಗಳು, 28 ಪ್ರವೇಶ ದ್ವಾರಗಳಿವೆ.