“ನಾವೆಲ್’ ಎಂಬ ಇಂಗ್ಲಿಷ್ ಪದಕ್ಕೆ, ಹಿಂದಿಯಲ್ಲಿ “ಉಪನ್ಯಾಸ’ ಎಂಬ ಅರ್ಥ ನೀಡಲಾಯಿತು.
ಕಾದಂಬರಿಗೆ ಇಂಗ್ಲೀಷಿನಲ್ಲಿ ನಾವೆಲ್ ಅನ್ನುತ್ತಾರೆ. ಆದರೆ, ಅದು ಇಂಗ್ಲಿಷ್‌ನ ಪದವಲ್ಲ. ನಾವೆಲ್ ಎಂಬುದರ ಮೂಲ, ಫ್ರೆಂಚ್‌ನದ್ದು. “ಹೊಸದು’ ಎಂಬ ಅರ್ಥ ಕೊಡುವ ಲ್ಯಾಟಿನ್ ಪದ “ನೊವೆಲ್ಲಸ್’, ಇಂಗ್ಲಿಷ್‌ಗೆ ಬಂದಾಗ ನಾವೆಲ್ ಆಗಿದೆ. ನೊವೆಲ್ಲಸ್ ಅಂದರೆ, ಹೊಸ ಮಾದರಿಯ ಕಥೆ ಎಂದಷ್ಟೇ ಅರ್ಥ. ಯುರೋಪ್‌ನಲ್ಲಿ ತುಂಬಾ ಹಿಂದೆಯೇ, ಹಳೆಗಾಲದ ಕಾಲ್ಪನಿಕ ರೊಮ್ಯಾನ್ಸ್ ಕಥೆಗಳು ಸಾಕಷ್ಟಿದ್ದವು. ನಂತರದ ದಿನಗಳಲ್ಲಿ, ಅವುಗಳಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಯಾಯಿತು. ಅದನ್ನು, “ನವೀನ ಕಥೆಗಳು’ ಎಂಬ ಅರ್ಥದಲ್ಲಿ “ನಾವೆಲ್’ ಎಂದು ಕರೆಯಲಾಯಿತು.
“ನಾವೆಲ್’ಗೆ ಇತರೆ ಭಾರತೀಯ ಭಾಷೆಗಳಲ್ಲಿ “ಕಾದಂಬರಿ’ ಎಂಬ ಹೆಸರಿಲ್ಲ. ಹಿಂದಿಯಲ್ಲಿ ಅದಕ್ಕೆ “ಉಪನ್ಯಾಸ’ ಎಂಬ ಹೆಸರಿದೆ. ಕನ್ನಡದ ಅರ್ಥದಲ್ಲಿ, ಉಪನ್ಯಾಸ ಎಂದರೆ ಭಾಷಣ ಎಂದು ಅರ್ಥ. ಆದರೆ, ಹಿಂದಿಯವರು “ನ್ಯಾಸ’ ಶಬ್ದಕ್ಕಿರುವ ರಚನೆ, ರೀತಿ ಎಂಬ ಅರ್ಥವನ್ನು ಅನುಸರಿಸಿ, ನಾವೆಲ್ ಎಂಬುದಕ್ಕೆ “ಉಪನ್ಯಾಸ’ ಎಂಬುದೇ ಸರಿಯಾದ ಅರ್ಥ ಎಂದು ಭಾವಿಸಿದರು. ಹಿಂದಿಯಲ್ಲಿ ಇರುವುದೇ ನಮಗೂ ಒಪ್ಪಿತ ಎಂದು ಬೆಂಗಾಲಿಯವರೂ ಹೇಳಿದರು.
ಪರಿಣಾಮ- ಹಿಂದಿ ಮತ್ತು¸ ಬೆಂಗಾಲಿಯಲ್ಲಿ, ಕಾದಂಬರಿಗೆ ಉಪನ್ಯಾಸ ಎಂದೇ ಕರೆಯಲಾಯಿತು. ಸುದೀರ್ಘ ವಿವರಣೆಯ ಬರಹಕ್ಕೆ, ಕನ್ನಡದಲ್ಲಿ ಏನೆಂದು ಕರೆಯಬೇಕು ಎಂಬ ಪ್ರಶ್ನೆ ಎದುರಾದಾಗ, ನಾವೆಲ್ ಮತ್ತು ಉಪನ್ಯಾಸ ಎಂಬ ಎರಡೂ ಪದಗಳಿಂದ ಅರ್ಧರ್ಧ ಎತ್ತಿಕೊಂಡು “ನವನ್ಯಾಸ’ ಎಂಬ ಹೆಸರು ಸೃಷ್ಟಿಸಿದ್ದೂ ಆಯ್ತು. ಆದರೆ, ಮುಂದೆ ಗಳಗನಾಥರು, ಮರಾಠಿಯನ್ನು ಅನುಸರಿಸಿ, ಸುದೀರ್ಘ ವಿವರಣೆಯ ಗದ್ಯ ಬರಹವನ್ನು- “ಕಾದಂಬರಿ’ ಎಂದೇ ಕರೆದರು. ಮುಂದೆ, ಅದೇ ಹೆಸರು ಜನಪ್ರಿಯವಾಯಿತು.
(ಆಧಾರ- ಪಾವೆಂ ಪುಸ್ತಕ )