Advertisement

ಲೋನ್‌ ಕೊಡುವವರ ಲೆಕ್ಕಾಚಾರ ಹೇಗಿರುತ್ತೆ ಗೊತ್ತಾ?

06:00 AM Aug 27, 2018 | |

ಕಟ್ಟಿಸುತ್ತಿರುವ ಮನೆಯನ್ನೇ ಬ್ಯಾಂಕಿಗೆ ಆಧಾರವಾಗಿ ನೀಡುತ್ತಿದ್ದೇವೆ,  ಸೆಕ್ಯುರಿಟಿ ಇದೆಯೆಲ್ಲಾ ಇನ್ನೇನು?  ಬ್ಯಾಂಕಿನವರು ಸಾಲ ಸುಲಭವಾಗಿ ನೀಡಬಹುದಲ್ಲಾ? ಎಂಬುದು ಬಹುತೇಕ ಮನೆ ಕಟ್ಟುವವರ ಆಲೋಚನೆ. ಆದರೆ ಇದು ತಪ್ಪು. ಅದಕ್ಕಿಂತ ಮುಂಚಿತವಾಗಿ ನೀವು ಪಡೆದ ಸಾಲವನ್ನು ಹೇಗೆ ತೀರಿಸುತ್ತೀರಿ, ನಿಮಗೆ ಸಾಲದ ಕಂತುಗಳನ್ನು ಕಟ್ಟಲು ಸಾಕಷ್ಟು ವರಮಾನವಿದೆಯೇ ಎಂಬುದರ ಮೇಲೆಯೇ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಅದು ಹೇಗೆ? ಇಲ್ಲಿದೆ ಮಾಹಿತಿ.

Advertisement

ಜೀವನದಲ್ಲಿ ಪ್ರತಿಯೊಬ್ಬನ ಕನಸೆಂದರೆ ಉಳಿಯಲೊಂದು ಸ್ವಂತ ಸೂರೊಂದಿರಲಿ ಎನ್ನುವುದು.ಅದಕ್ಕಾಗಿಯೇ ತನ್ನ ದುಡಿಮೆಯಲ್ಲಿ ಅಲ್ಪಸ್ವಲ್ಪ ಉಳಿಸುತ್ತಲೇ ಇರುತ್ತಾನೆ.  ಹಾಗೆಯೇ, ಮನೆ ಕಟ್ಟಿಸಬೇಕೆಂಬ ಜನರ ಕನಸುಗಳನ್ನು ನನಸು ಮಾಡುವ ಸದಾಶಯ ನಮ್ಮದು ಎಂಬ ಘೋಷಣೆಯೊಂದಿಗೆ, ಕನಸಿಗೆ ಸಾಲ ನೀಡಲು ಬ್ಯಾಂಕುಗಳು ತುದಿಗಾಲಲ್ಲಿ ನಿಂತಿವೆ. ಇದ್ದುದರಲ್ಲಿ, ಮನೆ ಸಾಲದ ಬಡ್ಡಿಯೇ ಅಗ್ಗವಾದುದ್ದು. ಹಾಗಂತ ಮನೆ ಕಟ್ಟುವವರೆಲ್ಲರಿಗೂ ಬ್ಯಾಂಕಿನಿಂದ ಸಾಲ ಸಿಕ್ಕಿಬಿಡುವುದಿಲ್ಲ. ಅದಕ್ಕೆ ಬಹಳಷ್ಟು ನಿಬಂಧನೆಗಳುಂಟು. ನಿಜ, ನೀವು ಕಟ್ಟಿಸುತ್ತಿರುವ ಮನೆಯನ್ನೇ ಬ್ಯಾಂಕಿಗೆ ಆಧಾರವಾಗಿ ನೀಡುತ್ತೀರಿ, ಸೆಕ್ಯುರಿಟಿ ಇದೆಯೆಲ್ಲಾ ಇನ್ನೇನು?  ಬ್ಯಾಂಕಿನವರು ಸಾಲ ಸುಲಭವಾಗಿ ನೀಡಬಹುದಲ್ಲಾ? ಎಂಬುದು ನಿಮ್ಮ ಆಲೋಚನೆಯಾಗಿದ್ದಲ್ಲಿ ಅದು ತಪ್ಪು. ಅದಕ್ಕಿಂತ ಮುಂಚಿತವಾಗಿ ನೀವು ಪಡೆದ ಸಾಲವನ್ನು ಹೇಗೆ ತೀರಿಸುತ್ತೀರಿ, ನಿಮಗೆ ಸಾಲದ ಕಂತುಗಳನ್ನು ಕಟ್ಟಲು ಸಾಕಷ್ಟು ವರಮಾನವಿದೆಯೇ ಎಂಬುದರ ಮೇಲೆ ಹಾಗೂ ನೀವು ಕಟ್ಟುವ ಅಥವಾ ಖರೀದಿಸುವ ಮನೆಗೆ ತಗಲುವ ವೆಚ್ಚದ ಆಧಾರದ ಮೇಲೆ ನಿಮ್ಮ ಮನೆಸಾಲದ ಲಭ್ಯತೆ, ಎಷ್ಟು ಸಾಲ ಪಡೆಯಲು ನೀವು ಅರ್ಹರು ಎನ್ನುವುದು ನಿರ್ಧಾರವಾಗುತ್ತದೆ. ಹಾಗಾದರೆ, ನಿಮ್ಮ ವರಮಾನವನ್ನು ನಿರ್ಧರಿಸುವ ಬಗೆ ಹೇಗೆ? ಅನ್ನೋದನ್ನು ನೋಡೋಣ.
 
ಬ್ಯಾಂಕಿಗೆ ನೀಡಬೇಕಾದ ವರಮಾನದ ದೃಢೀಕರಣಗಳು:
ಸಂಬಳದಾರರಿಗೆ ನೀವು ತಿಂಗಳ ಸಂಬಳಪಡೆಯುವವರಾಗಿದ್ದಲ್ಲಿ ನಿಮ್ಮ ಮೂರು ತಿಂಗಳಿನ ಅಧಿಕೃತ ಸಂಬಳ ಪಟ್ಟಿಯನ್ನು ಬ್ಯಾಂಕಿಗೆ ನೀಡಬೇಕು. ಜೊತೆಯಲ್ಲಿ ನೀವು ವರಮಾನ ತೆರಿಗೆ ಪಾವತಿ ಮಾಡುವವರಾಗಿದ್ದರೆ ಎರಡು ವರ್ಷದ ಐಟಿ ರಿಟರ್‌° ಅಥವಾ ನಿಮ್ಮ ಉದ್ಯೋಗದ ಮುಖ್ಯಸ್ಥರು ಪ್ರತಿ ವರ್ಷ ನೀಡುವ ಫಾರಂ 16 ಅನ್ನು ನೀಡಬೇಕು. ಉದ್ಯೋಗ ಎಂದಾಕ್ಷಣ ನೀವು ಅಂಗಡಿ, ಹೋಟೆಲ್ಲುಗಳಲ್ಲಿ ಸಣ್ಣಪುಟ್ಟ ನೌಕರಿ ಮಾಡುತ್ತಿದ್ದರೆ ಸಾಲ ಸಿಗಲಾರದು. ಅವರಿಗೆ ಸರ್ಕಾರದ ವಿವಿಧ ಯೋಜನೆಗಳ ಅನುಸಾರ ಮನೆ ಸಾಲ ಸರ್ಕಾರದ ಎಲ್ಲಾ ಕಾಯ್ದೆಗಳನ್ನು ಅನುಸರಿಸಿ ಸ್ಥಾಪಿತವಾದ( ರೆಪ್ಯೂಟೆಡ್‌) ಸಂಸ್ಥೆಯ ನೌಕರರಾಗಿರಬೇಕು. 

ನಿಮ್ಮ ಪಗಾರ (ಸಂಬಳ)ಪ್ರತಿ ತಿಂಗಳು ಬ್ಯಾಂಕಿನ ನಿಮ್ಮ ಖಾತೆಗೆ ಜಮೆಯಾಗುತ್ತಿರಬೇಕು.

ಸ್ವಂತ ಉದ್ಯೋಗಿಗಳ ಪಾಡೇನು?
ವ್ಯವಹಾರಸ್ಥರು, ಸ್ವಂತ ಉದ್ಯೋಗಿಗಳು ವರಮಾನ ದೃಢೀಕರಣಕ್ಕೆ ಮೂರು ವರ್ಷಗಳ ಐಟಿ ರಿಟರ್ನ್ ನೀಡಬೇಕು. ಇತ್ತೀಚಿನ ವರಮಾನವನ್ನು ಮನೆಸಾಲದ ಕಂತುಗಳ ನಿರ್ಧಾರಕ್ಕೆ ಬಳಸುವುದಾದರೂ ಮೂರು ವರ್ಷದ ಐಟಿ ರಿಟರ್ನ್ ಏಕೆ ಎನ್ನುವುದು ಹಲವರ ಪ್ರಶ್ನೆ. ಮೂರು ವರ್ಷದ ಐಟಿ ರಿಟರ್ನ್ ಕೇಳಲು ಕಾರಣ, ನಮ್ಮ ಜನ ಬುದ್ಧಿವಂತರು. ಸಾಲ ಬೇಕೆಂದಾಗ ಬ್ಯಾಂಕಿನವರಿಗೆ ಸಾಲ ನೀಡಲು ಬೇಕಾಗುವಷ್ಟು ವರಮಾನವನ್ನು ಆ ವರ್ಷ ಮಾತ್ರ ತೋರಿಸಿ ಐಟಿ ರಿಟರ್ನ್ ಸಲ್ಲಿಸಿ ಸಾಲ ಪಡೆದ ನಂತರ ವರಮಾನ ಇಲಾಖೆಯ ಕಡೆ ಮುಖವನ್ನೇ ಹಾಕುವುದಿಲ್ಲ. ಇನ್ನೂ ಕೆಲವರು, ಮೂರು ವರ್ಷದ ಐಟಿ ರಿಟರ್ನ್ ಅನ್ನು ಏಕಗಂಟಿನಲ್ಲಿ ಮಾಡಿಸಿ, ಬ್ಯಾಂಕಿಗೆ ಒಪ್ಪಿಸಿ ನಂತರ ಅದರ ಗೊಡವೆಗೆ ಹೋಗುವುದಿಲ್ಲ. ಅದಕ್ಕಾಗಿ ಹೆಚ್ಚಿನ ಬ್ಯಾಂಕಿನವರು ಏಕಗಂಟಿನಲ್ಲಿ ಸಲ್ಲಿಸಿದ ಐಟಿ ರಿಟರ್ನ್ ಅನ್ನು ಮಾನ್ಯ ಮಾಡುವುದಿಲ್ಲ. ಜೊತೆಗೆ ಪ್ರತಿ ವರ್ಷದ ನಿಮ್ಮ ವರಮಾನದ ಏರುಗತಿಯನ್ನು ಬ್ಯಾಂಕಿನವರು ಸ್ಟಡಿ ಮಾಡುತ್ತಾರೆ.  ಇಷ್ಟು ವರ್ಷ ಕನಿಷ್ಠ ವರಮಾನ ತೋರಿಸಿ ಸಾಲ ಪಡೆಯುವ ವರ್ಷ ಯಥೇತ್ಛ ವರಮಾನ ತೋರಿಸಿಬಿಡುವುದು, ನಂತರ ಮತ್ತೆ ಕನಿಷ್ಠಕ್ಕೆ ಇಳಿಯುವುದು. ಇವನ್ನೆಲ್ಲಾ ಬ್ಯಾಂಕಿನ ಪರಿಭಾಷೆಯಲ್ಲಿ ಅಕಾಮಡೇಷನ್‌ ಎನ್ನುತ್ತಾರೆ. ಬುದ್ಧಿವಂತ ಬ್ಯಾಂಕ್‌ ಅಧಿಕಾರಿ, ಇಂತಹ ಸಾಲದ ಅರ್ಜಿಯನ್ನು ಮಾನ್ಯಮಾಡುವುದಿಲ್ಲ. ಕಂತು ಕಟ್ಟಲಾಗದೇ ಮನೆಸಾಲ ಸುಸ್ತಿಯಾದರೆ ಈಗಿನ ಬ್ಯಾಂಕಿನ ನಿಯಮಗಳ ಪ್ರಕಾರ ಸಾಲ ಮಂಜೂರು ಮಾಡಿದ ಆಧಿಕಾರಿ ತಲೆ ಕೊಡಬೇಕಾಗುತ್ತದೆ.

ಕೃಷಿಕರಿಗೆ ಮನೆ ಸಾಲ?
ಕೃಷಿಮಾಡುವ ವ್ಯಕ್ತಿಯ ವರಮಾನವನ್ನು ಬ್ಯಾಂಕ್‌ ಅಧಿಕಾರಿಗಳೇ ನಿರ್ಧರಿಸಬೇಕು. ಆತನು ಹೊಂದಿರುವ ಜಮೀನು, ಅದರಲ್ಲಿ ಬೆಳೆಯುತ್ತಿರುವ ಬೆಳೆ, ಅದರ ಉತ್ಪನ್ನ, ಅದರ ಮಾರುಕಟ್ಟೆಯ ಬೆಲೆ, ಕೃಷಿಮಾಡಲು ತಗಲುವ ವೆಚ್ಚ, ಜೀವನ ನಿರ್ವಹಣೆಗೆ ತಗಲುವ ವೆಚ್ಚ ಇವುಗಳನ್ನೆಲ್ಲಾ ಲೆಕ್ಕ ಹಾಕಿ, ನಿವ್ವಳ ಉತ್ಪನ್ನ ಎಷ್ಟು ಸಿಗಬಹುದು ಎಂಬ ಆಧಾರದಲ್ಲಿ ಮನೆ ಸಾಲವಾಗಿ ಎಷ್ಟು ಹಣ ಕೊಡಬಹುದು ಎಂದು ನಿರ್ಧರಿಸಲಾಗುತ್ತದೆ. ಇಂದು ಕೃಷಿಗೆ ನಿರ್ಧಿಷ್ಟ ಆದಾಯವನ್ನು ನಿರೀಕ್ಷಿಸಲಾರದ ಸ್ಥಿತಿಯಲ್ಲಿ ಇರುವುದರಿಂದ ಈ ಕ್ಷೇತ್ರದವರಿಗೆ ಸಾಲ ನೀಡಲು ಬ್ಯಾಂಕಿನವರು ಮುಂದೆಬರುತ್ತಿಲ್ಲ.

Advertisement

ಹೆಚ್ಚಿನ ವರಮಾನ-ಹೆಚ್ಚಿನ ಸಾಲ
ನಮ್ಮ ವರಮಾನ ನಾವು ಕಟ್ಟಿಸುವ ಕನಸಿನ ಮನೆಗೆ ಬ್ಯಾಂಕಿನ ಸಾಲ ಪಡೆಯಲು ಸಾಕಾಗುವುದಿಲ್ಲ ಎಂದು ಚಿಂತಿಸಬೇಡಿ ಅಥವಾ ಜಾಗ ನನ್ನ ಹೆಸರಿನಲ್ಲಿದೆ, ಆದರೆ ನನಗೆ ನಿರ್ದಿಷ್ಟ ವರಮಾನವಿಲ್ಲ. ಹೀಗಾಗಿ ಇನ್ನು ಮನೆಯಕಟ್ಟಿಸುವುದು ಹೇಗೆ? ಅಂತಲೂ ನಿರಾಶರಾಗುವುದು ಬೇಡ. ನಿಮ್ಮ ಗಂಡ ಅಥವಾ ಹೆಂಡತಿ, ಮಕ್ಕಳು, ಅಣ್ಣ ತಂಗಿಯರು ಇವರ ವರಮಾನವನ್ನೂ ಮನೆಸಾಲ ಪಡೆಯಲು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಹಾಗೆ, ಅವರ ವರಮಾನವನ್ನು ಲೆಕ್ಕಿಸುವುದಾದರೆ ಅವರ ಮನೆ ಸಾಲಕ್ಕೆ ಅವರು ಸಹ ಸಾಲಗಾರರಾಗಿ ಅಥವಾ ಜಾಮೀನುದಾರರಾಗಿ ನಿಲ್ಲಬೇಕಾಗುತ್ತದೆ. ಸಾಲದ ಕಂತುಗಳನ್ನು ಕಟ್ಟಲು ಅವರೂ ಭಾದ್ಯಸ್ಥರಾಗುತ್ತಾರೆ. ಹಾಗೆ ಒಂದು ಸಾಲಕ್ಕೆ ಗರಿಷ್ಠ ಮೂರು ಜನರು ಸೇರಿಕೊಳ್ಳಬಹುದು.

ಮನೆಸಾಲದ ಕಂತುಗಳ ಅವಧಿ ಹಾಗೂ ನಿಮ್ಮ ವರಮಾನ- ಇದು ಪರಸ್ಪರ ಅವಲಂಭಿತ ಸಂಗತಿ. ನೀವು ಮನೆ ಸಾಲವನ್ನು ಬೇಗ ತೀರಿಸಬೇಕೆಂದು ಬಯಸುತ್ತೀರಿ. ಆದರೆ ನಿಮ್ಮ ವರಮಾನ ಬೇಗ ತೀರಿಸುವ ಕಂತುಗಳನ್ನು ನಿರ್ಧರಿಸಲು ಸಾಕಾಗುವುದಿಲ್ಲ. ಹೆಚ್ಚಿನ ಅವಧಿಯ ಕಂತುಗಳನ್ನು ಪಡೆದಲ್ಲಿ ಮಾತ್ರ ನಿಮಗೆ ಪ್ರತಿ ತಿಂಗಳ ಕಂತಿನ ಮೊತ್ತ ಕಡಿಮೆಯಾಗುತ್ತದೆ. ಹಾಗಾಗಿ, ಬ್ಯಾಂಕಿನವರು ನಿಮಗೆ ಗರಿಷ್ಠ 30 ವರ್ಷಗಳ ಕಂತನ್ನು ನೀಡುತ್ತಾರೆ. ಆದರೆ ನೆನಪಿರಲಿ, ನಿಮ್ಮ ವಯಸ್ಸು ಪೂರ್ತಿಕಂತು ತೀರಿಸುವ ಹೊತ್ತಿಗೆ 70 ಮೀರಬಾರದು. ಅಂದರೆ, ನೀವು ನಲವತ್ತಕ್ಕಿಂತ ಕಡಿಮೆ ಪ್ರಾಯವಾದಲ್ಲಿ ಮಾತ್ರ. 30 ವರ್ಷದಲ್ಲಿ ತೀರಿಸಬಹುದಾದ ಕಂತಿನಲ್ಲಿ ಸಾಲ ಪಡೆಯಲು ಅರ್ಹರು. ಇಲ್ಲದಿದ್ದಲ್ಲಿ ನಿಮಗೆ 70 ವಯಸ್ಸಾಗಲು ಇನ್ನು ಎಷ್ಟು ವರ್ಷ ಸುಗುತ್ತದೆಯೋ ಅಷ್ಟು ವರ್ಷದ ಕಂತು ಸಿಗುತ್ತದೆ. ನಿಮಗೆ ವಯಸ್ಸಾಗಿದೆ ಎಂದಾದಲ್ಲಿ, ವರಮಾನ ನಿರ್ಧರಿಸುವ ಸಲುವಾಗಿ ನಿಮ್ಮ ಜೊತೆ ಸಹ ಸಾಲಗಾರರಾಗಿ ಇರುವ ನಿಮ್ಮ ಮಕ್ಕಳು 50 ವರ್ಷಕ್ಕಿಂತ ಕಡಿಮೆಯವರಾಗಿದ್ದಲಿ,É ಅವರ ವಯಸ್ಸನ್ನೂ ಕಂತಿನ ಅವಧಿಗೆ ಪರಿಗಣಿಸುತ್ತಾರೆ. 

ವರಮಾನ ಹಾಗೂ ಕಂತಿನ ನಿರ್ಧಾರ
ಇರುವ ವರಮಾನದಲ್ಲಿ, ನನಗೆ ಎಷ್ಟು ಸಾಲ ಸಿಗುತ್ತದೆ ಎನ್ನುವ ಲೆಕ್ಕಾಚಾರ ಗೊತ್ತಾದರೆ ಕನಸಿನ ಮನೆ ಹೊಂದಲು ಪ್ರಯತ್ನಪಡಬಹುದು. ದುಡ್ಡಿಲ್ಲದೇ ಅರ್ಧಮನೆ ಮಾಡಿ ನಗೆಪಾಟಿಲಿಗೆ ಈಡಾದರೆ ಏನು ಪ್ರಯೋಜನ?ಇದು ಅನೇಕ ಪ್ರಶ್ನೆ. ಆದರೆ, ನಿಮ್ಮ ವರಮಾನವನ್ನೆಲ್ಲಾ ಬ್ಯಾಂಕಿನ ಸಾಲದ ಕಂತುಗಳಿಗೆ ತೆಗೆದುಕೊಳ್ಳಲು ಬರುವುದಿಲ್ಲ. ನಿಮ್ಮ ದೈನಂದಿನ ಜೀವನಕ್ಕೆ ಸ್ವಲ್ಪ ಹಣ ಬೇಕಲ್ಲ? ಅದಕ್ಕಾಗಿ ನಿಮ್ಮ ನಿವ್ವಳ ವರಮಾನ ಹಾಗೂ ಅದರ ಶೇಕಡ ಎಷ್ಟು ಭಾಗ ಕಂತುಗಳಿಗೆ ಪಡೆಯಬಹುದು ಎಂಬುದಕ್ಕೆ ಕೆಳಗೆ ಕೋಷ್ಟಕವೊಂದಿದೆ ನೋಡಿ.

ಉದಾಹರಣೆಗೆ, ನಿಮ್ಮ ವಾರ್ಷಿಕ ವರಮಾನ ಒಂದು ಲಕ್ಷ ಇಪ್ಪತ್ತು ಸಾವಿರ ರೂ. ಎಂದಿಟ್ಟುಕೊಳ್ಳಿ. ಅಂದರೆ, ನಿಮ್ಮ ತಿಂಗಳ ವರಮಾನ ಹತ್ತು ಸಾವಿರ ರೂಪಾಯಿಯಾಗುತ್ತದೆ. ಈ ವರಮಾನದವರಿಗೆ ಮೇಲಿನ ಕೋಷ್ಟಕದ ಪ್ರಕಾರ ಇದರ ಶೇ. ಇಪ್ಪತ್ತು ಅಂದರೆ ಎರಡು ಸಾವಿರವನ್ನು ಪ್ರತಿ ತಿಂಗಳ ಕಂತಿಗೆ ಪರಿಗಣಿಸಬಹುದು. ಇನ್ನುಳಿದ ಎಂಟು ಸಾವಿರ ಅವರ ಜೀವನ ನಿರ್ವಹಣೆಗೆ ಬಿಡಬೇಕು.

ಒಂದೊಮ್ಮೆ ನಿಮ್ಮ ವಾರ್ಷಿಕ ವರಮಾನ ಹನ್ನೆರೆಡು ಲಕ್ಷ ಎಂದುಕೊಳ್ಳಿ. ತಿಂಗಳ ವರಮಾನ ಒಂದು ಲಕ್ಷವಾಗುತ್ತದೆ. ಮೇಲಿನ ಕೋಷ್ಟಕದ ಪ್ರಕಾರ ಅದರ ಶೇ. ಎಪ್ಪತ್ತು ಎಂದರೆ ಎಪ್ಪತ್ತು ಸಾವಿರ ರೂಪಾಯಿಯನ್ನು ಕಂತಿಗೆ ಪಡೆಯಬಹುದು.
ಏಕೆ ಈ ವ್ಯತ್ಯಾಸವೆಂದರೆ ಒಂದು ಲಕ್ಷದ ವರಮಾನದವರಿಗೆ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ಅವರ ಅಂತಸ್ತಿಗೆ ಜೀವನ ನಿರ್ವಹಣೆಗೆ ಸಾಕಾಗುತ್ತದೆ. ಅಲ್ಲವೇ?

ಇದು ಕೇವಲ ಮನೆಸಾಲಕ್ಕೆ ನಿಮ್ಮ ವರಮಾನ ಪರಿಗಣಿಸುವ ಲೆಕ್ಕಾಚಾರವಾಯಿತು. ಇದರ ಹೊರತಾಗಿ ನಿಮ್ಮ ಮನೆಯ ಪೂರ್ತಿವೆಚ್ಚವನ್ನು ಬ್ಯಾಂಕಿನವರು ಸಾಲದ ರೂಪದಲ್ಲಿ ನೀಡುವುದಿಲ್ಲ. ನಿಮಗೆ ಎಷ್ಟೇ ವರಮಾನವಿದ್ದರೂ ನೀವು ಕಟ್ಟುವ ಅಥವಾ ಕೊಳ್ಳುವ ಮನೆಯ ಪೂರ್ತಿ ವೆಚ್ಚದ ಕೆಲವು ಅಂಶದ ಹಣವನ್ನು ನೀವು ಭರಿಸಬೇಕು. ಮೂವತ್ತು ಲಕ್ಷದವರೆಗಿನ ಬ್ಯಾಂಕಿನ ಸಾಲದ ಶೇ. ಹತ್ತರಷ್ಟು ನೀವು ಭರಿಸಬೇಕು. ಶೇ.90 ನಿಮಗೆ ಸಾಲ ಸಿಗುತ್ತದೆ.  ಎಪ್ಪತ್ತೈದು ಲಕ್ಷದವರೆಗಿನ ಸಾಲಕ್ಕೆ ಮನೆ ನಿರ್ಮಾಣದ ವೆಚ್ಚದ ಶೇ.80 ಹಾಗೂ ಎಪ್ಪತ್ತೈದು ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ, ಮನೆ ನಿರ್ಮಾಣದ ವೆಚ್ಚದ ಶೇ.75 ಸಾಲ ದೊರೆಯುತ್ತದೆ.

ಇಷ್ಟು ಮೊತ್ತಕ್ಕೆ ಇಷ್ಟು ಕಂತು
ನಿವ್ವಳ ವಾರ್ಷಿಕ ವರಮಾನ ತಿಂಗಳ ಕಂತು/ತಿಂಗಳ ನಿವ್ವಳ ವರಮಾನ
1.20 ಲಕ್ಷ                                 20%
1.20 ಲಕ್ಷ -3 ಲಕ್ಷ                       30%
3 ಲಕ್ಷ – 5 ಲಕ್ಷ                           55%
5 ಲಕ್ಷ – 8 ಲಕ್ಷ                           60%
8 ಲಕ್ಷ – 10 ಲಕ್ಷ                         65%
10 ಲಕ್ಷ ನಂತರ                         70%

– ರಾಮಸ್ವಾಮಿ ಕಳಸವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next