Advertisement
ನಿದ್ರಾಹೀನತೆ ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿಯೇ ನಿದ್ರಾಹೀನತೆ ಸಮಸ್ಯೆ ಹೊಂದಿದವರಿಗೆ ನಿದ್ರೆ ಮಾತ್ರೆ ನೀಡುವುದರ ಮೂಲಕ ನಿದ್ರೆ ಬರುವಂತೆ ಮಾಡಲಾಗುತ್ತದೆ. ನಮಗೆ ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ದೆ ಬೇಕೇ ಬೇಕು. ಒಬ್ಬ ವ್ಯಕ್ತಿ ಸರಿಸುಮಾರು ಒಂದು ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ಕಾಲ ಆರೋಗ್ಯಕರವಾದ ನಿದ್ರೆ ಮಾಡಲೇಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನವಿಡೀ ಚೈತನ್ಯ ಶೀಲರಾಗಿ ಕೆಲಸ ಮಾಡಲು ಗುಣಮಟ್ಟದ ನಿದ್ರೆಯನ್ನು ಹೊಂದಿರಬೇಕು.
Related Articles
Advertisement
ನಿದ್ರಾ ಹೀನತೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿತ್ಯವೂ ಗುಣಮಟ್ಟದ ನಿದ್ರೆಗೆ ಒಳಗಾಗದೆ ಇದ್ದರೆ ಖಿನ್ನತೆ, ಆತಂಕ, ತಲೆನೋವು ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳು ಕಾಡುತ್ತವೆ. ಆರೋಗ್ಯಕರ ನಿದ್ರೆಯ ಅಭ್ಯಾಸವು ವ್ಯಕ್ತಿಗೆ ಒಳ್ಳೆಯ ಆರೋಗ್ಯ ನೀಡುತ್ತದೆ. ಅದೇ ನಿರಂತರವಾಗಿ ನಿದ್ರೆಯಲ್ಲಿ ಸಮಸ್ಯೆ ಉಂಟಾದರೆ ಅಥವಾ ನಿದ್ರಾ ಹೀನತೆ ಅನುಭವಿಸುತ್ತಿದ್ದರೆ ನಿತ್ಯವೂ ಒಂದೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಇರಬೇಕಾಗುತ್ತದೆ.
ನಿದ್ರಾ ಹೀನತೆಯ ಬಗೆ:
ಸಾಮಾನ್ಯವಾಗಿ ನಿದ್ರಾ ಹೀನತೆಯಲ್ಲಿ ಮೂರು ವಿಧಗಳು ಇವೆ. ದೀರ್ಘ ಕಾಲದ ನಿದ್ರಾ ಹೀನತೆ, ಅಲ್ಪ ಕಾಲದ ನಿದ್ರಾ ಹೀನತೆ ಮತ್ತು ಅಸಮರ್ಪಕ ನಿದ್ರೆ.
ದೀರ್ಘಾವಧಿಯಲ್ಲಿ ನಿದ್ರೆಯ ಅವಧಿ ಕಡಿಮೆ ಆಗುವುದಕ್ಕೆ ದೀರ್ಘಕಾಲದ ನಿದ್ರಾ ಹೀನತೆ ಎನ್ನುತ್ತಾರೆ. ಇದರಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಪ್ರಚೋದನೆ ಪಡೆದುಕೊಳ್ಳುತ್ತವೆ.
ನಿಗದಿತ ಸಮಯದಲ್ಲಿ ಅಥವಾ ಸ್ವಲ್ಪ ದಿನಗಳಲ್ಲಿ ಮಾತ್ರ ನಿದ್ರಾ ಹೀನತೆಯನ್ನು ಅನುಭವಿಸುವುದಕ್ಕೆ ಅಲ್ಪಾವಧಿಯ ನಿದ್ರಾ ಹೀನತೆ ಎಂದು ಕರೆಯುವರು. ಇದು ಅನಿರೀಕ್ಷಿತವಾಗಿ ಅಪರೂಪದ ಸಮಯದಲ್ಲಿ ಸಂಭವಿಸುವುದು. ಅಂತಹ ಸಮಯದಲ್ಲಿ ತಲೆ ನೋವು, ಪಿತ್ತ, ಆಮ್ಲೀಯತೆಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಚೆನ್ನಾಗಿ ನಿದ್ರೆ ಮಾಡಿದ್ದು, ನಿದ್ರೆಯ ಮಧ್ಯದಲ್ಲಿ ಕನಸುಗಳಿಂದ ಅಥವಾ ಇನ್ಯಾವುದೋ ಕಾರಣಕ್ಕೆ ಎಚ್ಚೆತ್ತುಕೊಳ್ಳುವುದು. ನಂತರ ಪುನಃ ನಿದ್ರೆಗೆ ಜಾರಲು ಕಷ್ಟವಾಗುವುದು. ಹೀಗೆ ನಿದ್ರೆಯಲ್ಲಿ ಪದೇ ಪದೇ ಅಡೆ ತಡೆಗಳು ಉಂಟಾಗುವುದಕ್ಕೆ ಅಸಮರ್ಪಕ ನಿದ್ರೆ ಎಂದು ಕರೆಯಲಾಗುತ್ತದೆ.
ಆಯಾಸ ಭಾವನೆ:
ವ್ಯಕ್ತಿ ದಿನದಲ್ಲಿ ಸೂಕ್ತ ನಿದ್ರೆಯನ್ನು ಹೊಂದದೆ ಇದ್ದಾಗ ಆಯಾಸವಾಗಿರುವುದು ಸಾಮಾನ್ಯ. ಬೆಳಿಗ್ಗೆ ಎದ್ದೇಳುತ್ತಲೇ ಒಂದು ಬಗೆಯ ಆಯಾಸ ಹಾಗೂ ದಣಿದ ಭಾವನೆಯನ್ನು ಹೊಂದಿರುತ್ತಾರೆ. ಅವರು ನಂತರ ನಿತ್ಯದ ದಿನಚರಿ ಅನುಸರಿಸುವ ಬದಲು ಪುನಃ ನಿದ್ರೆ ಮಾಡಲು ಬಯಸುವರು. ಇದರಿಂದಾಗಿ ಒಂದು ಬಗೆಯ ಜಡತ್ವವನ್ನು ಅನುಭವಿಸುತ್ತಾರೆ.
ಅಸಮರ್ಪಕ ಗಮನ:
ಸೂಕ್ತ ಪ್ರಮಾಣದ ನಿದ್ರೆಯನ್ನು ಹೊಂದದೆ ಇದ್ದಾಗ ನಮ್ಮಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಒಂದು ಬಗೆಯ ಕಿರಿಕಿರಿ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಯಾವುದೇ ವಿಷಯ ಅಥವಾ ಕೆಲಸಗಳ ಮೇಲೆ ಸರಿಯಾಗಿ ಗಮನಹರಿಸಲು ಕಷ್ಟವಾಗುತ್ತದೆ. ಅದರ ಜೊತೆಗೆ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಥವಾ ವಿಷಯಗಳನ್ನು ಸ್ಮರಣೆ ಮಾಡಿಕೊಳ್ಳಲು ಕಷ್ಟ.
ತೂಕದಲ್ಲಿ ವ್ಯತ್ಯಾಸ:
ಅಸಮರ್ಪಕ ನಿದ್ರೆಯಿಂದ ಹಸಿವಿನಲ್ಲೂ ವ್ಯತ್ಯಾಸ ಉಂಟಾಗುವುದು. ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಸಾಕಷ್ಟು ನಿದ್ರೆಯ ಅವಶ್ಯಕತೆ ಇರುತ್ತದೆ. ನಿದ್ರಾ ಹೀನತೆ ಮತ್ತು ಹಸಿವಿನಲ್ಲಿ ಆಗುವ ವ್ಯತ್ಯಾಸದಿಂದ ದೇಹದ ತೂಕ ಅತಿಯಾಗಿ ಹೆಚ್ಚುವುದು ಅಥವಾ ಅತಿಯಾಗಿ ಇಳಿಯುವ ಸಾಧ್ಯತೆಗಳು ಇರುತ್ತವೆ. ಇದರಿಂದಾಗಿ ಟೈಪ್ 2 ನಂತಹ ಮಧುಮೇಹ ಹೆಚ್ಚುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತದೆ.
ಇದಲ್ಲದೇ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಉದಾಹರಣೆಗೆ ರಕ್ತದ ಒತ್ತಡದಲ್ಲಿ ಏರುಪೇರಾಗುವುದು, ಮಧುಮೇಹ ಸಮಸ್ಯೆ ನಿಯಂತ್ರಣ ತಪ್ಪುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಾಗಾಗಿ ಆರೋಗ್ಯಕರ ಗುಣಮಟ್ಟವಾದ ನಿದ್ರೆಯನ್ನು ಅಭ್ಯಾಸ ಮಾಡಿಕೊಳ್ಳವುದು ಉತ್ತಮ.
ರಾತ್ರಿ ಹೊತ್ತು ಒಳ್ಳೆಯ ನಿದ್ರೆ ಮಾಡುವುದರಿಂದ ಆರೋಗ್ಯಕ್ಕೆ ಏನು ಲಾಭವಿದೆ ಎಂದು ತಿಳಿಯಬೇಕೆ.. ಮುಂದೆ ಓದಿ..
ಅತ್ಯುತ್ತಮ ಗುಣಮಟ್ಟ ಹೊಂದಿರುವ ಸುಮಾರು 8 ಗಂಟೆಗಳ ನಿದ್ರೆ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿಮ್ಮ ದೇಹದಲ್ಲಿ ಹಾರ್ಮೋನುಗಳ ಸಮತೋಲನ ಕಳೆದುಕೊಳ್ಳುದ ಹಾಗೆ ಮಾಡಿ ನಿಮ್ಮ ಹೊಟ್ಟೆ ಹಸಿವಿನ ನಿಯಂತ್ರಣವನ್ನು ನೋಡಿಕೊಳ್ಳುತ್ತದೆ. ಉತ್ತಮವಾದ ನಿದ್ರೆ ನಿಮ್ಮ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣ ಮಾಡಲು ಸಹಕಾರಿಯಾಗಲಿದೆ. ರಾತ್ರಿ ಸಮಯದಲ್ಲಿ ಆರೋಗ್ಯಕರವಾದ ನಿದ್ರೆ ಮಾಡುವುದರಿಂದ ಬೆಳಗಿನ ಸಮಯದಲ್ಲಿ ತುಂಬಾ ಆರಾಮದಾಯಕವಾಗಿ ಎಲ್ಲ ಬಗೆಯ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ. ಅತಿಯಾದ ದೇಹದ ತೂಕ ನಿಯಂತ್ರಣ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ದೂರ ಮಾಡುತ್ತದೆ.