Advertisement
ನೀವು ಇದನ್ನು ನಂಬುತ್ತೀರಾ? ಕೆಲವರನ್ನು ನೋಡಿದಾಗ ಇದು ನಿಜ ಅಂತ ನಂಬಲೇಬೇಕಾಗುತ್ತದೆ. ಹಾಗೆಯೇ ಇದು ಖಂಡಿತವಾಗಿಯೂ ನಿಜ. ನಮ್ಮನ್ನು ಸುಂದರಗೊಳಿಸುವುದು ಬ್ಯೂಟಿ ಪಾರ್ಲರ್‌ಗಳಲ್ಲ. ನಮ್ಮ ಅಂತರಂಗದ ಶುದ್ಧಿ ನಮ್ಮನ್ನು ತುಂಬಾ ಸುಂದರವಾಗಿ ಕಾಣುವಂತೆ ಮಾಡುತ್ತದೆ.
Related Articles
Advertisement
ದೈವಿಕ ಸೌಂದರ್ಯ ನಿಮ್ಮಲ್ಲಿದೆಯೇ?: ಬ್ಯೂಟಿಪಾರ್ಲರ್‌ಗೆ ಹೋಗಿ ಅನೇಕ ಮಹಿಳೆಯರೂ ಪುರುಷರೂ ತಮ್ಮನ್ನು ತಾವು ಸುಂದರವಾಗಿ ಕಾಣಿಸಿಕೊಳ್ಳುವಂತೆ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಅದೆಲ್ಲ ತಾತ್ಕಾಲಿಕವಾಗಿ ಆಕರ್ಷಣೆ ನೀಡು ವಂಥದ್ದು. ಆಧ್ಯಾತ್ಮದ ಅರಿವು ಮಾತ್ರ ನಮ್ಮನ್ನು ನಿರಂತರವಾಗಿ ಬ್ಯೂಟಿಫುಲ್ ಮಾಡುತ್ತದೆ.
ಪ್ರಪಂಚದಲ್ಲಿ ಎಷ್ಟೇ ಆರ್ಥಿಕ ಹಿನ್ನಡೆ ಆದರೂ ಬ್ಯೂಟಿ ಪಾರ್ಲರ್ ಬಿಸಿನೆಸ್‌ಗೆ ಮಾತ್ರ ಯಾವುದೇ ಕುಸಿತವಿಲ್ಲ. ನಾನು ಅನೇಕ ಕಾರಾಗೃಹಗಳಲ್ಲಿ ಕೈದಿಗಳಿಗೆ ಸಾಂಸ್ಕೃತಿಕ ಚಟುವಟಿಕೆ ಗಳನ್ನು ನಡೆಸುತ್ತಿದ್ದೆ. ಕೈದಿಗಳು ಅಲ್ಲಿಯೂ ಬ್ಯೂಟಿಷಿಯನ್ ಗಳನ್ನು ಕರೆಸಿ ತಮ್ಮ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯ ಕೊಡುವುದನ್ನು ಕಂಡು ಆಶ್ಚರ್ಯವಾಗಿತ್ತು.
ಕೆಲವರಿಗೆ ಬ್ಯೂಟಿಪಾರ್ಲರ್ ಹುಚ್ಚು ಎಷ್ಟು ಹಿಡಿದಿದೆ ಅಂದರೆ ಮನೆಯಲ್ಲಿ ಹಿರಿಯರ ತಿಥಿ/ ವೈಕುಂಠ ಸಮಾರಾಧನೆ ಇದ್ದರೂ ಪಾರ್ಲರ್‌ಗೆ ಹೋಗಿ ಐಬ್ರೋಸ್ ಮಾಡಿಸಿಕೊಂಡು ಬರುತ್ತಾರೆ. ಸಂಬಂಧ, ಸಂಕಟ, ನೋವು, ಬಾಂಧವ್ಯಕ್ಕಿಂತ ಮನುಷ್ಯ ಬಾಹ್ಯ ಸೌಂದರ್ಯಕ್ಕೆ ಒತ್ತು ನೀಡುತ್ತಿದ್ದಾನೆ. ಏಕೆಂದರೆ ಅವನು ಆಂತರಿಕ ಸೌಂದರ್ಯದ ರುಚಿಯನ್ನು ಕಂಡುಕೊಂಡಿಲ್ಲ.
ಪಾರ್ಲರ್‌ಗೆ ಬರುವ ದೆವ್ವ!: ಒಂದು ಬ್ಯೂಟಿಪಾರ್ಲರ್‌ನಲ್ಲಿ ತಮಾಷೆ ನಡೆಯಿತು. ಒಬ್ಬ ಹೆಂಗಸಿನ ಮೈಮೇಲೆ ಯಾವಾಗಲೂ ದೆವ್ವ ಬರುತ್ತಿತ್ತಂತೆ. ಆ ಪ್ರೇತಾತ್ಮಕ್ಕೆ ಶಾಂತಿ ಸಿಕ್ಕಿರಲಿಲ್ಲವಂತೆ, ಯಾಕೆ ಅಂದರೆ ಆ ಹೆಣ್ಣುಮಗಳು ಬದುಕಿದ್ದಾಗ ಅವಳ ಮನೆಯವರು ಅವಳನ್ನು ಬ್ಯೂಟಿಪಾರ್ಲರ್‌ಗೆ ಕಳಿಸುತ್ತಿರಲಿಲ್ಲವಂತೆ. ಆಕೆ ಸತ್ತ ಬಳಿಕ ಆಕೆಯ ಆತ್ಮ ದೆವ್ವವಾಗಿ ತನ್ನ ಆಸೆ ನೆರವೇರಿಸಿಕೊಳ್ಳಲು ಬೇರೆಯವರ ಮೈಮೇಲೆ ಬಂದು ಗಲಾಟೆ ಮಾಡಿ ಐಬ್ರೋಸ್, ಫೇಷಿಯಲ್, ವ್ಯಾಕ್ಸ್ ಎಲ್ಲ ಮಾಡಿಸಿಕೊಳ್ಳುತ್ತಿತ್ತಂತೆ. ದೆವ್ವ ಪಾರ್ಲರ್‌ಗೆ ಬರುವ ದಿನ ಬೇರೆಯವರಿಗೆ ಪಾರ್ಲರ್ ಮುಚ್ಚಿರು ತ್ತಿತ್ತು. ನಾವು ಯಾಕೆ ಅಂತ ಕೇಳಿದರೆ ಇವತ್ತು ದೆವ್ವ ಬರುತ್ತೆ ಅಂದರು! ನಾನು ಚಿಂತೆಗೆ ಬಿದ್ದೆ. ದೆವ್ವಕ್ಕೆ ಕೈಕಾಲು ಇರುತ್ತಾ? ಅದು ಹೇಗೆ ವ್ಯಾಕ್ಸ್ ಮಾಡಿಸಿಕೊಳ್ಳುತ್ತದೆ? ಮಾಡಿಸಿಕೊಂಡರೂ ಯಾರಿಗೆ ತೋರಿಸುತ್ತದೆ. ಸತ್ತು ದೆವ್ವ ಆದಮೇಲೂ ನಾವು ಹೇಗೆ ಹೊರಗಡೆಯಿಂದ ಬ್ಯೂಟಿಫುಲ್ಲಾಗಿ ಕಾಣಲಿಕ್ಕೆ ಸಾಧ್ಯ?
ಈ ವಿಚಾರದಲ್ಲಿ ಹುಡುಗರೇನೂ ಕಡಿಮೆ ಇಲ್ಲ. ಚೆನ್ನಾಗಿ ಕಾಣಿಸಬೇಕು ಅಂತ ಹುಡುಗರೂ ಏನೇನೋ ಸಾಹಸ ಮಾಡು ತ್ತಾರೆ. ಇವತ್ತಿನ ದಿನ ಎಲ್ಲ ಲೋಪಗಳಿಗೂ ಪರಿಹಾರ ಇದೆ. ಚಿಕ್ಕವಯಸ್ಸಿಗೆ ಕೂದಲು ಕಳೆದುಕೊಂಡರೆ ಹೊಸ ಕೂದಲು ಹಾಕಿಸಿಕೊಳ್ಳುತ್ತಾರೆ. ಮೂಗು ಚಿಕ್ಕದಾಗಿದ್ದರೆ ಉದ್ದ ಮಾಡಿಸಿ ಕೊಳ್ಳುತ್ತಾರೆ. ತುಟಿ ಸರಿಪಡಿಸಿಕೊಳ್ಳುತ್ತಾರೆ. ಮೈಕಟ್ಟು ಸಣ್ಣ ಮಾಡಿ ಸಿಕೊಳ್ಳುತ್ತಾರೆ. ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದಷ್ಟು ಮುಖವನ್ನು ಬದಲಾಯಿಸಿಕೊಳ್ಳುತ್ತಾರೆ.
ಕೆಲ ಹುಡುಗರು ನಮ್ಮ ದೇಶದಲ್ಲಿ ಸರಿಯಾಗಿ ಮಾಡುವುದಿಲ್ಲ ಅಂತ ಬೇರೆ ದೇಶ ಗಳಿಗೆ ಬ್ಯೂಟಿ ಟ್ರೀಟ್‌ಮೆಂಟ್‌ಗಾಗಿಯೇ ಹೋಗುತ್ತಾರೆ.
ಇದೆಲ್ಲ ತಪ್ಪು ಎಂದಲ್ಲ. ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಹೊರಗಿನ ಸೌಂದರ್ಯವನ್ನು ಸರಿಪಡಿಸಿಕೊಳ್ಳಲು ಎಷ್ಟೆಲ್ಲ ಖರ್ಚು ಮಾಡುವ ಜನರು ಒಳಗಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನು ಮಾಡುತ್ತಾರೆ? ಒಳಗಿನಿಂದ ನಮ್ಮ ನಿಜವಾದ ಕಾಂತಿ ಹೊರಹೊಮ್ಮದೆ ಹೊರಗಿನಿಂದ ಎಷ್ಟೇ ಮಾಡಿಸಿಕೊಂಡರೂ ಅದು ಕೃತಕವಾಗಿ ಕಾಣಿಸುತ್ತದೆ. ನಾವು ಮನಸ್ಸಿನಲ್ಲಿ ಕೆಟ್ಟದ್ದನ್ನೇ ಗುಣಿಸುತ್ತಿದ್ದರೆ ನಮ್ಮ ಮುಖ ಆಕರ್ಷಕವಾಗಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಒಳಗೆ ಹೇಗೆ ಇರುತ್ತೇವೋ ಅದರ ಛಾಯೆ ನಮ್ಮ ಮುಖದಲ್ಲಿ ಎದ್ದು ತೋರುತ್ತದೆ.
ಠಕ್ಕ ಸನ್ಯಾಸಿಗಳನ್ನು ಪತ್ತೆ ಹಚ್ಚಿ: ಕೆಲವು ಕಳ್ಳ ಸ್ವಾಮಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ತತ್‌ಕ್ಷಣವೇ ಹೇಳಬಹುದು. ಅವರು ಸಾತ್ವಿಕರಲ್ಲ ಎಂದು, ಸದ್ಯದಲ್ಲೇ ಅವರದ್ದೊಂದು ರಾಸಲೀಲೆ ಸೀಡಿ ಹೊರಬರಬಹುದು ಎಂಬುದು ಆ ಕೂಡಲೇ ಗೊತ್ತಾಗುತ್ತದೆ! ಅವರ ಕಣ್ಣಲ್ಲೇ ಚಾಂಚಲ್ಯ ಎದ್ದು ಕುಣಿಯುತ್ತಿರುತ್ತದೆ. ಆತ ನಿಜವಾದ ದೈವಿಕ ಶಕ್ತಿಯನ್ನು ಹೊಂದಿಲ್ಲ ಎಂಬುದು ಒಂದೇ ನೋಟದಿಂದ ಸಾಬೀತಾಗುತ್ತದೆ. ಸಾತ್ವಿಕತೆಯ ಮುಖಲಕ್ಷಣವೇ ಬೇರೆ, ವೇಷಭೂಷಣ ಧರಿಸಿದ ನಾಟಕೀಯ ಸಿಂಗಾರವೇ ಬೇರೆ. ಏಕೆಂದರೆ ಅವರು ಯಾವತ್ತೂ ಕುಳಿತು ಶ್ರದ್ಧೆಯಿಂದ ಧ್ಯಾನ ಮಾಡಿರುವುದೇ ಇಲ್ಲ.
ಯಾವುದೇ ಮಂತ್ರ ಹೇಳಿ, ಎಲ್ಲ ಮಂತ್ರಗಳಿಗೂ ಒಂದು ಶಕ್ತಿ ಇದೆ. ಮಂತ್ರಗಳು ಗೊತ್ತಿಲ್ಲದಿದ್ದರೆ ಏಕಾಕ್ಷರ ಓಂ ಹೇಳಿಕೊಂಡರೂ ಸಾಕು. ಓಂಕಾರ ಪರಮಾತ್ಮ ನಾರಾಯಣ ಈ ಜಗತ್ತನ್ನು ಸೃಷ್ಟಿ ಮಾಡುವಾಗ ಅವನ ಬಾಯಿಯಿಂದ ಹೇಳಿದ ಮೊದಲ ಅಕ್Ò/ಮಂತ್ರ. ಯಾವ ಮಂತ್ರಗಳಿಗೂ ಯಾವುದೇ ಜಾತಿ ಭೇದವಿಲ್ಲ. ಮಂತ್ರಗಳು ನಮ್ಮೆಲ್ಲರ ಸ್ವತ್ತು. ಯಾರು ಬೇಕಾದರೂ ಅದರ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬಹುದು.
ಬ್ಯೂಟಿಪಾರ್ಲರ್ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವವರು ಅದರಲ್ಲರ್ಧ ಸಮಯವನ್ನು ಆಂತರಿಕ ಸೌಂದರ್ಯದ ಬಗ್ಗೆ ಚಿಂತಿಸಲು ಮೀಸಲಿಟ್ಟರೂ ಸಾಕು, ನಾವೆಲ್ಲ ಸರ್ವಾಂಗ ಸುಂದರರಾಗುತ್ತೇವೆ!
– ರೂಪಾ ಅಯ್ಯರ್