Advertisement

ಬಾವಲಿ ಬಗ್ಗೆ ನಿಮ್ಗೆ ಗೊತ್ತಾ?

10:09 AM Jan 24, 2020 | mahesh |

ಇತ್ತೀಚಿಗೆ ನಿಫಾ ರೋಗಾಣು ಜಗತ್ತಿನ ಹಲವೆಡೆ ಹಬ್ಬಿದಾಗ, ಎಲ್ಲರ ಕಣ್ಣು ಬಿದ್ದದ್ದು ಬಾವಲಿಗಳ ಮೇಲೆ. ಎಷ್ಟೋ ಜನ ದುಷ್ಟ ಶಕ್ತಿಯ ರೂಪ ಅನ್ನೋ ರೀತಿ ನೋಡಿದರು. ಆದರೆ, ನಿಜಕ್ಕೂ ಈ ಬಾವಲಿಗಳು ಅಷ್ಟೊಂದು ಅಪಾಯಕಾರಿಗಳೇ? ಇಲ್ಲ.

Advertisement

ಮರದ ಮೇಲೋ, ಕಂಬಿಗಳ ಮೇಲೋ ದೇಹವನ್ನು ಹಾಸಿ, ನೇತಾಡುವ ಬಾವಲಿಗಳು ಬಹಳ ಶಕ್ತಿಶಾಲಿ ಜೀವಿಗಳು. ಅವುಗಳಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ, ಶಬ್ದದ ಮೂಲಕವೇ ಜಗತ್ತನ್ನು ನೋಡುವ ಬಾವಲಿಯ ಬದುಕು ಕೌತುಕದ್ದು.

“ಕೈರಾಪ್ಟರಾ’ ಎಂಬ ಗುಂಪಿಗೆ ಸೇರಿರುವ ಬಾವಲಿಗಳಲ್ಲಿ , ವಿಶ್ವದಾದ್ಯಂತ ಸಾವಿರದ ಒಂದುನೂರು ಉಪಪ್ರಭೇದಗಳನ್ನು ಗುರುತಿಸಲಾಗಿದೆ. ಹಾರುವ ಸಸ್ತನಿಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಬಾವಲಿಗಳನ್ನು ದೊಡ್ಡಬಾವಲಿ ಮತ್ತು ಪುಟ್ಟಬಾವಲಿ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಹಣ್ಣುಗಳನ್ನು ತಿನ್ನುವ ಮತ್ತು ಗಾತ್ರದಲ್ಲಿ ಹಿರಿದಾಗಿರುವ ದೊಡ್ಡಬಾವಲಿಗಳು ಮೂವತ್ತೂಂದು ಮಿಲಿಯನ್‌ ವರ್ಷಗಳ ಹಿಂದೆ ಹುಟ್ಟಿದವಂತೆ. ದೊಡ್ಡಬಾವಲಿಗಳ ದೃಷ್ಟಿ ಮಾನವನಷ್ಟೇ ಶಕ್ತಿಶಾಲಿಯಾಗಿದ್ದು, ಇವುಗಳು ಕತ್ತಲಿನಲ್ಲೂ ವಸ್ತುಗಳನ್ನು ನೋಡಬಲ್ಲವು. ನಾಲ್ಕರಿಂದ ಹದಿನಾರು ಸೆಂ.ಮೀ.ನಷ್ಟು ಉದ್ದವಿರುವ ಪುಟ್ಟಬಾವಲಿಗಳು ಕೀಟ, ಕಪ್ಪೆ , ಸರೀಸೃಪ, ಮೀನುಗಳನ್ನು ಬೇಟೆಯಾಡುತ್ತವೆ. ಅಮೆರಿಕಾದಲ್ಲಷ್ಟೇ ಕಾಣಸಿಗುವ ರಕ್ತಪಿಶಾಚಿ (ವ್ಯಾಂಪೈರ್‌ ಬ್ಯಾಟ್‌) ಬಾವಲಿಗಳು ರಕ್ತ ಕುಡಿದು ಬದುಕುತ್ತವೆ ಎಂಬ ನಂಬಿಕೆಯಿದೆ. ಪುಟ್ಟಬಾವಲಿಗಳ ದೃಷ್ಟಿ ಮಂದವಾಗಿರುತ್ತವೆ. ಅವು ಕಡಿಮೆ ಬೆಳಕಿನಲ್ಲಷ್ಟೇ ನೋಡಬಲ್ಲವು. ಹಾಗಾಗಿ ಧ್ವನಿಪ್ರತಿಫ‌ಲನದ ಮೂಲಕ ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಗ್ರಹಿಸುತ್ತವೆ.

ಹೃದಯ ಬಡಿತ ಹೆಚ್ಚು
ದೊಡ್ಡಬಾವಲಿಗಳನ್ನು ಖಾದ್ಯವಾಗಿ ಬಳಸುವುದುಂಟು. ಅರಣ್ಯನಾಶ, ವಿದ್ಯುತ್‌ ತಂತಿ ಸ್ಪರ್ಶ ಹಾಗೂ ಖಾದ್ಯ ಬಳಕೆಯಿಂದಾಗಿ ಇವುಗಳ ಸಂತತಿ ಕಡಿಮೆಯಾಗಿದೆ. ಯಾವ ಮಟ್ಟಿಗೆ ಎಂದರೆ, ದೊಡ್ಡಬಾವಲಿಗಳ ಉಪಪ್ರಭೇಧ ಶೇಕಡಾ ಇಪ್ಪತ್ತರಷ್ಟು ಈಗಾಗಲೇ ಕಣ್ಮರೆಯಾಗಿವೆಯಂತೆ. ದೊಡ್ಡಕಣ್ಣು ,ಪುಟ್ಟಕಿವಿ, ನಾಯಿಯಂಥ ಉದ್ದಮೂತಿ ಹೊಂದಿರುವ ಕಾರಣದಿಂದ ದೊಡ್ಡಬಾವಲಿಗಳಿಗೆ ಹಾರುವ ತೋಳಗಳೆಂಬ ಹೆಸರೂ ಉಂಟು. ವಿರಾಮದ ಸಮಯದಲ್ಲಿ ಮರಕ್ಕೋ, ತಂತಿಗೋ ತಗಲಾಕಿಕೊಂಡು ತಲೆಕೆಳಗಾಗಿ ನೇತಾಡುವುದು ಇವುಗಳ ಶೈಲಿ. ಹಾರಾಟಕ್ಕೆ ಇವುಗಳಿಗೆ ಹೆಚ್ಚು ಶಕ್ತಿ ಬೇಕಾಗುವ ಕಾರಣಕ್ಕೆ, ಬಾವಲಿಗಳ ಹೃದಯ ಮತ್ತು ಪಪ್ಪುಸ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹಾರಾಡುವಾಗ ಬಾವಲಿಯ ಹೃದಯ ನಿಮಿಷಕ್ಕೆ ಒಂದು ಸಾವಿರದಷ್ಟು ಬಾರಿ ಮಿಡಿಯಬಲ್ಲದು.

ಈ ಸಮಯದಲ್ಲಿ ಆಮ್ಲಜನಕ ಬೇಕಿರುವುದರಿಂದ ಇವುಗಳು ಹೆಚ್ಚು ಎತ್ತರದಲ್ಲಿ ಹಾರಾಡಲಾರವು. ಹಾರಾಟಕ್ಕೆ ಬೇಕಾದ ಶಕ್ತಿಯನ್ನು ಉಳಿಸಲು ಬಾವಲಿಗಳು ಯಾವತ್ತೂ ತಮ್ಮ ತೂಕವನ್ನು ಹಗುರಾಗಿಸಿಕೊಂಡಿರುತ್ತವೆ. ಇದಕ್ಕಾಗಿ ಇವುಗಳು ಆಹಾರ ಸೇವಿಸಿದ ಒಂದು ಘಂಟೆಯ ಒಳಗೆ, ತ್ಯಾಜ್ಯವನ್ನು ವಿಸರ್ಜನೆ ಮಾಡುತ್ತವೆ.

Advertisement

ಕಣ್ಣು ಕಾಣಲ್ಲ
ಪುಟ್ಟಬಾವಲಿಗಳ ಧ್ವನಿಪ್ರತಿಫ‌ಲನದ ವ್ಯವಸ್ಥೆ ಅಪರೂಪದ್ದು. ಅರವತ್ತರಿಂದ ನೂರನಲವತ್ತು ಡೆಸಿಬಲ್‌ ಹಾಗೂ ಹದಿನಾಲ್ಕು ಸಾವಿರದಿಂದ ಒಂದುಲಕ್ಷ ಆವರ್ತನದ ತರಂಗಗಳನ್ನು ಹೊರಹೊಮ್ಮಿಸಬಲ್ಲ ಶಕ್ತಿ ಧ್ವನಿಪೆಟ್ಟಿಗೆಯನ್ನು ಪುಟ್ಟಬಾವಲಿಗಳು ಹೊಂದಿವೆ. ವಿಶೇಷ ಏನೆಂದರೆ, ಬಾವಲಿಗಳು ಈ ಧ್ವನಿಯನ್ನು ಹೊರಡಿಸುವಾಗ ಅವುಗಳ ಕಿವಿಗಳು ತನ್ನಿಂದ ತಾನೆ ಮುಚ್ಚಿಕೊಳ್ಳುತ್ತವೆ. ಏಕೆಂದರೆ, ಈ ಶಕ್ತಿಶಾಲಿ ಧ್ವನಿತರಂಗಗಳಿಂದ ಕಿವಿಗಳಿಗಾಗಬಲ್ಲ ತೊಂದರೆಯಿಂದ ದೂರ ಉಳಿಯುವುದಕ್ಕೆ. ಧ್ವನಿ ಹೊರಡಿಸಿದ ನಂತರ ತೆಗೆದುಕೊಳ್ಳುವ ಪುಟ್ಟಬಾವಲಿಗಳ ಕಿವಿಗಳು ಪ್ರತಿಫ‌ಲಿಸಿ ಬಂದ ಧ್ವನಿಯನ್ನು ಗ್ರಹಿಸಿ ಮೆದುಳಿನಲ್ಲಿ ಅದನ್ನು ಸಂಸ್ಕರಿಸಿ ಸುತ್ತಮುತ್ತಲಿನ ಚಿತ್ರಣವನ್ನು ಅರ್ಥೈಸಿಕೊಳ್ಳುತ್ತವೆ. ಈ ವ್ಯವಸ್ಥೆ ಎಷ್ಟು ಕರಾರುವಕ್ಕಾಗಿರುತ್ತದೆಯೆಂದರೆ, ಕೇವಲ ಇದರ ಸಹಾಯದಿಂದಲೇ ಬಾವಲಿಗಳು ತಮ್ಮ ಆಹಾರವನ್ನು ಬೇಟೆಯಾಡುತ್ತವೆ. ಆದರೆ, ಅದಕ್ಕೆ ಅಪವಾದಗಳೂ ಇವೆ. ಕೆಲವೊಂದು ಜಾತಿಯ ಚಿಟ್ಟೆಗಳು ಬಾವಲಿಯ ಧ್ವನಿ ತರಂಗಗಳಿಗೆ ವಿರುದ್ಧವಾಗಿ ಕೆಲವೊಂದು ಧ್ವನಿಗಳನ್ನು ಹೊರಡಿಸಿ ಬಾವಲಿಗಳನ್ನೇ ಗೊಂದಲಕ್ಕೀಡುಮಾಡಿ, ಹುಚ್ಚುಹುಚ್ಚಾಗಿ ಹಾರಾಡಿಸುವ ಉದಾಹರಣೆಗಳು ಇವೆ.

ರಾತ್ರಿ ಪ್ರಯಾಣ ಏಕೆ?
ಪುಟ್ಟಬಾವಲಿಗಳು ವಲಸೆ ಹೋಗುತ್ತವೆ. ತಮ್ಮ ದೇಹದ ಉಷ್ಣಾಂಶವನ್ನು ಸರಿತೂಗಿಸಲು ಇವುಗಳು ಪ್ರಯಾಣಕ್ಕಾಗಿ ರಾತ್ರಿಯನ್ನೇ ಆಯ್ದುಕೊಳ್ಳುತ್ತವೆ. ಆದರೆ, ದೊಡ್ಡಬಾವಲಿಗಳು ಸಾಮಾನ್ಯವಾಗಿ ವಲಸೆ ಹೋಗದೇ ಗುಹೆಯಂಥ ಪ್ರದೇಶದಲ್ಲಿ ಅಜ್ಞಾತವಾಗಿರುತ್ತವೆ. ಮೂವತ್ತರಿಂದ ನಲವತ್ತು ವರ್ಷಗಳ ಕಾಲ ಬಾವಲಿಗಳು ಬದುಕುತ್ತವೆ. ನಿಶಾಚರಿಗಳಾದ ಇವುಗಳನ್ನು ನಮ್ಮಲ್ಲಿ ಹೆಚ್ಚಿನ ಕಡೆ ಮಾಟ, ಮಂತ್ರದ ಜೊತೆಗೆ ತಾಳೆ ಹಾಕುತ್ತಾರೆ. ಚೀನಾದಲ್ಲಿ ಇವು ಖುಷಿ ಮತ್ತು ನೆಮ್ಮದಿಯ ಸಂಕೇತಗಳು. ಸಸ್ತನಿಗಳ ವರ್ಗಗಳಲ್ಲಿ ಶೇಕಡಾ ಇಪ್ಪತ್ತರಷ್ಟು ವರ್ಗಗಳು ಬಾವಲಿಗಳದ್ದೇ. ದೊಡ್ಡಬಾವಲಿಗಳ ಗುಂಪಿಗೆ ಸೇರಿದ ಮೆಕ್ಸಿಕನ್‌ ಫ್ರೀ ಟೈಲ್ಡ್‌ ಜಾಯಿ ಎಂಬ ಬಾವಲಿ ಘಂಟೆಗೆ 100 ಮೈಲಿಯಷ್ಟು ವೇಗದಲ್ಲಿ ಹಾರಬಲ್ಲದು. ಹಿಮ್ಮಡಿ , ಬೆನ್ನು ಮತ್ತು ಬೆರಳುಗಳಿಗೆ ಕೂಡಿಕೊಂಡಿರುವ ತೆಳು ಚರ್ಮದ ಪದರವೇ ಅವುಗಳ ರೆಕ್ಕೆ. ಇದು ಜೀವಿತಾವಧಿಯಲ್ಲಿ ಹಲವು ಬಾರಿ ಹರಿದು ಪುನಃ ಬೆಳೆಯುತ್ತದೆ.ಬಾವಲಿಗಳ ಹಿಕ್ಕೆಯು ಪೊಟ್ಯಾಷಿಯಂ ನೈಟ್ರೇಟ್‌ನಿಂದ ಕೂಡಿರುತ್ತದೆ. ಹೀಗಾಗಿ, ಸಾವಯವಗೊಬ್ಬರವಾಗಿ ಬಳಸಲಾಗುತ್ತದೆ.

– ಸುನೀಲ್‌ ಬಾರ್ಕೂರ್‌

Advertisement

Udayavani is now on Telegram. Click here to join our channel and stay updated with the latest news.

Next