ಮೈಸೂರು: ಟಿಪ್ಪುಸುಲ್ತಾನ್ ಬಗ್ಗೆ ಬ್ರಿಟಿಷರು ಹಾಡಿ ಹೊಗಳಿದ್ದಾರೆ. ರಾಜಮನೆತನದವರು ಟಿಪ್ಪು ಹುತಾತ್ಮರಾದ ಮೇಲೆ ಹೇಳಿರುವ ಮಾತುಗಳು ಇತಿಹಾಸದಲ್ಲಿ ದಾಖಲಾಗಿದ್ದರೂ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಟಿಪ್ಪು ಬಗ್ಗೆ ಏನು ಅರಿಯದೆ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ. ಅವರ ಕಾಲದಲ್ಲಿ ನಡೆದಿರುವ ಕ್ರಾಂತಿಕಾರಕ ಯೋಜನೆಗಳು, ಅಭಿವೃದ್ಧಿ, ಹೋರಾಡಿದನ್ನು ಬ್ರಿಟಿಷರು ಹೇಳಿಕೊಂಡಿದ್ದಾರೆ. ಅದೇ ರೀತಿ ರಾಜರು ಕೊಂಡಾಡಿದ್ದಾರೆ ಎಂದರು.
ನಂಜನಗೂಡು, ಶೃಂಗೇರಿಯಲ್ಲಿ ಟಿಪ್ಪು ಸುಲ್ತಾನ್ ನೀಡಿರುವ ವಜ್ರ, ಆಯುಧಗಳಿಗೆ ಪೂಜೆ ಮಾಡಿದ ಮೇಲೆ ಮುಂದಿನ ಕೆಲಸ ಕಾರ್ಯಗಳು ನಡೆಯಲಿವೆ. ಈಗಲೂ ನಂಜನಗೂಡು, ಶ್ರೀರಂಗಪಟ್ಟಣ ದೇವಸ್ಥಾನದಲ್ಲಿ ಟಿಪ್ಪು ಕೊಟ್ಟಿರುವ ವಜ್ರಕ್ಕೆ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎಂಬುದನ್ನು ಅರಿಯಬೇಕು ಎಂದು ಕಿಡಿಕಾರಿದರು.
ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯ ಆರೋಪ: ಕಾಲಿನ ಶಸ್ತ್ರ ಚಿಕಿತ್ಸೆಯ ಬಳಿಕ ಯುವ ಫುಟ್ಬಾಲ್ ಆಟಗಾರ್ತಿ ಸಾವು
ಟಿಪ್ಪು ನೈಜ ಕನಸುಗಳು ಕೃತಿ ಕುರಿತು ಮಾತನಾಡಿದ ಇಬ್ರಾಹಿಂ, ಇತಿಹಾಸವನ್ನು ಮರೆಮಾಚುವುದು ಬಿಜೆಪಿಯವರ ಕೆಲಸವಾಗಿದೆ. ಇಂತಹವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ಕೆಡವಿಹಾಕುತ್ತೇನೆಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ನಡವಳಿಕೆ ಖಂಡನೀಯ. ಮೈಸೂರು ಅರಮನೆಯಲ್ಲಿರುವ ಗೋಪುರ ಗುಂಬಜ್ ಮಾದರಿಯಲ್ಲಿರುವುದರಿಂದ ಕೆಡವಲು ತಾಕತ್ ಇದೆಯೇ ಎಂದು ಪ್ರಶ್ನಿಸಿದರು.