Advertisement
ಇಷ್ಟೆಲ್ಲ ಅನುಕೂಲಗಳ ಜೊತೆ ಮೊಬೈಲ್ ಫೋನಿನಿಂದಾಗಿ ಹಲವು ಹೊಸ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಅಂತಹ ಕೆಲ ಸಮಸ್ಯೆಗಳು ನಾವು ನಿರೀಕ್ಷಿಸಿಯೇ ಇರದ ಮಟ್ಟಕ್ಕೂ ಬೆಳೆಯುತ್ತಿವೆ.
Related Articles
Advertisement
ಮೇಲೆ ಹೇಳಿದ ಎರಡೂ ಘಟನೆಗಳು ಇಂತಹವೇ ಅತಿಬಳಕೆಯ ಉದಾಹರಣೆಗಳು. ಟಿಕ್‌ಟಾಕ್‌ನಂಥ ಆ್ಯಪ್‌ಗ್ಳಿರಲಿ, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳೇ ಇರಲಿ, ಯಾವಾಗಲೂ ಹೊಸತನ್ನೇನಾದರೂ ಹಂಚಿಕೊಳ್ಳುವ- ನಮಗೆ ಪರಿಚಯವೇ ಇಲ್ಲದವರನ್ನು ಮೆಚ್ಚಿಸುವ ಹಪಾಹಪಿಯನ್ನು ಅವು ಅನೇಕ ಬಳಕೆದಾರರಲ್ಲಿ ಬೆಳೆಸುತ್ತಿವೆ. ಬೇರೆಯವರು ನನಗಿಂತ ಭಿನ್ನವಾಗಿ ಏನೋ ಮಾಡುತ್ತಿದ್ದಾರೆ ಹಾಗೂ ಕೊಂಚ ಹೊತ್ತು ನಾನು ಈ ಲೋಕದಿಂದ ದೂರವಿದ್ದರೆ ಅದನ್ನೆಲ್ಲ ತಿಳಿಯುವ ಅವಕಾಶ ಕಳೆದುಕೊಳ್ಳುತ್ತೇನೆ ಎಂಬ ಭೀತಿಯನ್ನೂ ಬಿತ್ತುತ್ತಿವೆ.
ಈ ಭೀತಿಯ ಪರಿಣಾಮವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಮೀಟಿಂಗಿನಲ್ಲಿ ಕುಳಿತಾಗ, ಊಟಕ್ಕೆ ಹೋದಾಗ, ಕಡೆಗೆ ಟೀವಿ ನೋಡುವಾಗಲೂ ಮೊಬೈಲನ್ನು ಜೊತೆಗಿಟ್ಟುಕೊಳ್ಳುವುದು ಅನೇಕರಿಗೆ ಅಭ್ಯಾಸವಾಗಿಬಿಟ್ಟಿದೆ. ಒಂದೊಮ್ಮೆ ಎತ್ತಿ ಬದಿಗಿಟ್ಟರೂ ಥಟ್ಟನೆ ಬರುವ ಯಾವುದೋ ಒಂದು ನೋಟಿಫಿಕೇಶನ್ ಅದನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಕೆಲಸಮಯ ಯಾವುದೇ ನೋಟಿಫಿಕೇಶನ್ ಬಾರದಿದ್ದರೆ ಯಾಕೋ ಏನೂ ಬರಲೇ ಇಲ್ಲವಲ್ಲ ಎಂದು ನೋಡಲಾದರೂ ಅವರು ಮೊಬೈಲನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಇನ್ನು ಅದರ ಬ್ಯಾಟರಿ ಮುಗಿದುಹೋಯಿತು ಅಥವಾ ಮೊಬೈಲ್ ಜಾಲದ ಸಂಪರ್ಕ ತಪ್ಪಿತು ಎಂದರಂತೂ ಚಡಪಡಿಕೆಯೇ ಶುರುವಾಗಿಬಿಡುತ್ತದೆ.
ಈ ಪರಿಸ್ಥಿತಿಯನ್ನು ತಜ್ಞರು ಫಿಯರ್ ಆಫ್ ಮಿಸ್ಸಿಂಗ್ ಔಟ್ (ಫೋಮೋ), ಅರ್ಥಾತ್ ಹೊರಗುಳಿಯುವ ಭೀತಿ ಎಂದು ಗುರುತಿಸುತ್ತಾರೆ. ಈ ಭೀತಿಗೆ ಕಾರಣ- ಕೊಂಚ ಹೊತ್ತು ಮೊಬೈಲು ಕೈಯಲ್ಲಿಲ್ಲದಿದ್ದರೆ, ವಾಟ್ಸಾಪ್‌ನಲ್ಲಿ ಇಣುಕದಿದ್ದರೆ, ಸಮಾಜಜಾಲಗಳಲ್ಲಿ ಅಡ್ಡಾಡದಿದ್ದರೆ ಅಲ್ಲಿನ ವಿದ್ಯಮಾನಗಳು ನಮಗೆ ತಿಳಿಯುವುದಿಲ್ಲ ಎನ್ನುವ ಅನಿಸಿಕೆ. ಎಲ್ಲರೊಡನೆಯೂ ಯಾವಾಗಲೂ ಸಂಪರ್ಕದಲ್ಲಿರಬೇಕು, ಆನ್‌ಲೈನ್ ಲೋಕದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು, ಸಂದೇಶ ಕಳಿಸಿದವರಿಗೆ ಥಟ್ಟನೆ ಉತ್ತರಿಸಬೇಕು ಎನ್ನುವ ಬಯಕೆಯೂ ಇದಕ್ಕೆ ಕಾರಣವಾಗಬಹುದು. ಸಮಾಜಜಾಲದಲ್ಲಿ ಹಾಕಿದ ಪೋಸ್ಟಿಗೆ ಏನು ಪ್ರತಿಕ್ರಿಯೆ ಬಂದಿದೆಯೆಂದು ಪದೇಪದೇ ನೋಡುವುದು, ಕೈಗೆ ಸಿಕ್ಕ ಮಾಹಿತಿಯನ್ನು ಅದೇ ಕ್ಷಣದಲ್ಲಿ ಸಿಕ್ಕವರಿಗೆಲ್ಲ ಕಳಿಸಿಬಿಡುವುದು ಕೂಡ ಈ ಭೀತಿಯದೇ ಇನ್ನಿತರ ರೂಪಗಳು.
ಟಿಕ್‌ಟಾಕ್ ದುರಂತಗಳ ಹಿನ್ನೆಲೆಯಲ್ಲಿರುವುದೂ ಇದೇ ಭೀತಿ. ನಾನು ಏನಾದರೂ ಹೊಸತು ಮಾಡದಿದ್ದರೆ ಬೇರೆಯವರು ನನ್ನನ್ನು ಮೆಚ್ಚುವುದಿಲ್ಲ ಎಂದೋ, ಕೊಂಚಹೊತ್ತು ಏನನ್ನೂ ಹಂಚಿಕೊಳ್ಳದಿದ್ದರೆ – ಬೇರೆಯವರು ಹಂಚಿಕೊಂಡಿದ್ದನ್ನು ನೋಡದಿದ್ದರೆ ಏನೋ ಕಳೆದುಕೊಳ್ಳುತ್ತೇನೆ ಎಂದೋ ಭಾವಿಸುವ ಬಳಕೆದಾರರು ಸದಾಕಾಲ ಅದರಲ್ಲೇ ಮುಳುಗಿರಲು ಶುರುಮಾಡಿದ್ದಾರೆ. ಅದರಿಂದ ಅಪಾಯಗಳನ್ನೂ ತಂದುಕೊಳ್ಳುತ್ತಿದ್ದಾರೆ.
ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? ಮೊಬೈಲಿನ ಬಳಕೆಯನ್ನೇ ನಿಲ್ಲಿಸಿಬಿಡಬೇಕೇ?
ಹಾಗೇನೂ ಇಲ್ಲ. ಮೊಬೈಲ್ ಅತಿಬಳಕೆ ತಂದೊಡ್ಡುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಹಲವು ಮಾರ್ಗಗಳಿವೆ. ಆ ಪೈಕಿ ಮೊದಲನೆಯದು ಸ್ವಯಂನಿಯಂತ್ರಣ. ಅಗತ್ಯಬಿದ್ದಾಗ ಅಗತ್ಯವಿದ್ದಷ್ಟೇ ಹೊತ್ತು ಮೊಬೈಲ್ ಬಳಸುತ್ತೇನೆ ಎಂದು ತೀರ್ಮಾನ ಮಾಡಿ ಅದಕ್ಕೆ ಬದ್ಧರಾಗಿರುವ ಮೂಲಕ ನಾವು ಮೊಬೈಲ್ ಚಟಕ್ಕೆ ದಾಸರಾಗುವುದನ್ನು ತಪ್ಪಿಸಿಕೊಳ್ಳಬಹುದು. ಇದು ಸುಲಭವಲ್ಲ ಎನ್ನುವವರು ಅದೇ ಮೊಬೈಲಿನಲ್ಲಿರುವ ಕೆಲವು ಸಾಧ್ಯತೆಗಳನ್ನು ಬಳಸಿಕೊಳ್ಳಬಹುದು: ಲ್ಯಾಪಾrಪ್-ಮೊಬೈಲ್ ಎರಡೂ ಬಳಸುವವರು ಕನಿಷ್ಟ ಒಂದು ಸಾಧನದಲ್ಲಾದರೂ ಫೇಸ್‌ಬುಕ್ ಬಳಸದಿರುವುದು, ಅತಿರೇಕವೆನಿಸುವಷ್ಟು ಚಟುವಟಿಕೆಯಿರುವ ವಾಟ್ಸಾಪ್ ಗುಂಪುಗಳನ್ನು ಮ್ಯೂಟ್ ಮಾಡಿಟ್ಟು ನಮ್ಮ ಬಿಡುವಿನ ವೇಳೆಯಲ್ಲಷ್ಟೇ ಅವನ್ನು ಗಮನಿಸುವುದು, ಪರೀಕ್ಷೆಯಂತಹ ಮಹತ್ವದ ಸಂದರ್ಭಗಳಲ್ಲಿ ಒಂದಷ್ಟು ದಿನ ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ದೂರವಿರುವುದು – ಇವೆಲ್ಲ ಅವರಿಗೆ ಲಭ್ಯವಿರುವ ಕೆಲ ಆಯ್ಕೆಗಳು. ಮೊಬೈಲಿನ ಅತಿಬಳಕೆಯನ್ನು ಏಕಾಏಕಿ ನಿಲ್ಲಿಸುವ ಬದಲು ಕೆಲದಿನಗಳ ಅವಧಿಯಲ್ಲಿ ಕೊಂಚಕೊಂಚವಾಗಿ ಕಡಿಮೆಮಾಡಿದರೆ ಅದರಿಂದ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳಿಂದಲೂ ಪಾರಾಗಬಹುದು.
ಆದರೆ, ಇದನ್ನೆಲ್ಲ ತಾವೇ ಮಾಡುವುದು ಎಲ್ಲರಿಗೂ ಸಾಧ್ಯವಾಗದಿರಬಹುದು. ಟಿಕ್‌ಟಾಕ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಂಥ ಆ್ಯಪ್‌ಗ್ಳನ್ನು ತೆರೆದು ನೋಡುತ್ತ ಕುಳಿತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಎನ್ನುವವರು ಅದನ್ನು ಸ್ವತಃ ನಿಯಂತ್ರಿಸಿಕೊಳ್ಳುವುದು ಕಷ್ಟವೇ. ಆದರೆ, ಮೊಬೈಲಿನಾಚೆಗೂ ಜೀವನವಿದೆಯಲ್ಲ!
-ಟಿ.ಜಿ.ಶ್ರೀನಿಧಿ