Advertisement

ರೈತರಿಗೆ ಸೂಕ್ತ ವ್ಯವಸ್ಥೆ ಇದೆಯೇ: ಸರಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

10:05 AM Apr 04, 2020 | Sriram |

ಬೆಂಗಳೂರು: ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಕಲ್ಪಿಸಲಾಗಿರುವ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶ ನೀಡಿದೆ.

Advertisement

ಈ ಕುರಿತು ಸಲ್ಲಿಕೆಯಾಗಿರುವ ಪಿಐಎಲ್‌ಗ‌ಳನ್ನು ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಬೆಳೆಗಳನ್ನು ಮಾರುಕಟ್ಟೆಗೆ ತರಲು ರೈತರಿಗೆ, ಕೃಷಿ ಕಾರ್ಮಿಕರಿಗೆ ಅಗತ್ಯ ಪಾಸ್‌ಗಳನ್ನು ನೀಡಲಾಗಿದೆಯೇ? ಎಪಿಎಂಸಿಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆಯೇ? ರೈತರ ಹೊಲಗಳಿಂದ ಬೆಳೆಗಳನ್ನು ಸಾಗಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿ ವಿಚಾರಣೆಯನ್ನು ಎ.7ಕ್ಕೆ ಮುಂದೂಡಿತು.

ಆಹಾರ ಭದ್ರತೆ ಒದಗಿಸಿ
ಅಂಗನವಾಡಿಗಳಿಗೆ ಆಹಾರಧಾನ್ಯ, ಮಕ್ಕಳಿಗೆ, ಬಾಣಂತಿಯರಿಗೆ ಹಾಲು ಮತ್ತು ಇತರ ಆಹಾರ ಸಾಮಗ್ರಿಗಳನ್ನು ಪೂರೈಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ ನ್ಯಾಯಪೀಠ, ಕಟ್ಟಡ, ಕೂಲಿ, ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ ಒದಗಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು. ಸಂಕಷ್ಟದಲ್ಲಿರುವ ಎಲ್ಲರಿಗೂ ಅಹಾರ ಭದ್ರತೆ ಒದಗಿಸುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಸರಕಾರಕ್ಕೆ ಪೂರಕ ಸಹಕಾರ ನೀಡಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತು.

ತೊಂದರೆ ಕೊಡಬೇಡಿ
ಲಾಕ್‌ಡೌನ್‌ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಆದರೆ ಅಗತ್ಯ ವಸ್ತುಗಳ ಖರೀದಿಗೆ ಹೊರಬರುವ ಜನರಿಗೆ ಪೋಲಿಸರು ತೊಂದರೆ ಕೊಡಬಾರದು. ಈ ನಿಟ್ಟಿನಲ್ಲಿ ಎಲ್ಲ ಪೊಲೀಸ್‌ ಠಾಣೆಗಳಿಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಪೋಲಿಸ್‌ ಮಹಾ ನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶ ನೀಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next