Advertisement
ಕಳೆದ ವರ್ಷ ನಗರದಲ್ಲಿ ಸುರಿದ ಭಾರಿ ಮಳೆಗೆ ಕೆಲ ಭಾಗಗಳು ಜಾಲಾವೃತಗೊಂಡು ಹಲವು ಭಾಗಗಳಲ್ಲಿನ ಜನರು ತೊಂದರೆ ಅನುಭವಿಸುವಂತಾಗಿತ್ತು. ಆ ಹಿನ್ನೆಲೆಯಲ್ಲಿ ನಗರದ ಎಲ್ಲ ಭಾಗಗಳಲ್ಲಿ ಆಗಿರುವ ರಾಜಕಾಲುವೆ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಿ ಎಂದು ಮುಖ್ಯಮಂತ್ರಿಗಳು ಆದೇಶಿಸಿ, ನಾಲ್ಕು ತಿಂಗಳೊಳಗೆ ಎಲ್ಲ ಕಾರ್ಯಾಚರಣೆ ಪೂರ್ಣಗೊಳಿಸಬೇಕು ಎಂದು ವರ್ಷದ ಹಿಂದೆ ಸೂಚಿಸಿದ್ದರು.
Related Articles
Advertisement
ಸರ್ವೇಯರ್ ಕೊರತೆ ನೆಪ: ರಾಜಕಾಲುವೆ ಒತ್ತುವರಿ ಪ್ರಭಾವಿಗಳ ಹೆಸರು ಕೇಳಿಬಂದ ಕೂಡಲೇ ಸರ್ವೇಯರ್‌ಗಳ ಕೊರತೆ ಇದೆ ಎಂಬ ಕಾರಣ ನೀಡಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಪಾಲಿಕೆ ಅಧಿಕಾರಿಗಳು, ಇದೀಗ ಅದೇ ನೆಪವನ್ನಿಟ್ಟುಕೊಂಡು ಇಡೀ ಕಾರ್ಯಾಚರಣೆಯನ್ನೇ ನಿಲ್ಲಿಸಿದ್ದಾರೆ. ಒತ್ತುವರಿ ತೆರವುಗೊಳಿಸಬೇಕಾದ 728 ಸ್ಥಳಗಳಲ್ಲಿ ಒತ್ತುವರಿಯಾಗಿರುವ ಜಾಗ ಗುರುತು ಮಾಡಲು ಸರ್ವೇಯರ್‌ಗಳ ಅಗತ್ಯವಿದ್ದು, ಕಂದಾಯ ಇಲಾಖೆಯಗೆ ಸರ್ವೇಯರ್‌ಗಳನ್ನು ನೀಡುವಂತೆ ಪಾಲಿಕೆಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆಯಿಂದ ಸರ್ವೇಯರ್‌ಗಳನ್ನು ಪಾಲಿಕೆಗೆ ನೀಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಿಂತಿದೆ ಎಂಬುದು ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಸ್ಥಗಿತಗೊಂಡಿರುವುದಕ್ಕೆ ನೀಡುತ್ತಿರುವ ಸಮಜಾಯಿಸಿ.
ಮನೆ ಒಡೆದ ನಂತರ ಸರ್ವೆ ಸರಿಯಿಲ್ಲ ಎಂದ ಅಧಿಕಾರಿಗಳು: ಯಲಹಂಕ ವಲಯದ ದೊಡ್ಡಬೊಮ್ಮಸಂದ್ರದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂದು ನೂರಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ನಂತರ ಪಾಲಿಕೆಯ ಅಧಿಕಾರಿಗಳು ಕಾಲುವೆ ನಿರ್ಮಿಸಲು ಸ್ಥಳಕ್ಕೆ ತೆರಳಿದ್ದರು. ಆದರೆ, ಈ ಹಿಂದೆ ನಡೆಸಿದ ಸರ್ವೇ ಕಾರ್ಯ ಸಮರ್ಪಕವಾಗಿಲ್ಲದ ಕಾರಣ ಮರು ಸರ್ವೇ ನಡೆಸಬೇಕು ಎಂದು ಕಂದಾಯ ಇಲಾಖೆಯ ಭೂ ದಾಖಲೆಗಳ ಮಾಪನ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ, ಅಷ್ಟರೊಳಗೆ ಅಧಿಕಾರಿಗಳಿಂದಾಗಿ ನೂರಾರು ಕುಟುಂಬಗಳು ಮನೆ ಕಳೆದುಕೊಂಡಿವೆ.
ಅನಿವಾರ್ಯವಾಗಿ ಮತ್ತು ತುರ್ತಾಗಿ ಒತ್ತುವರಿ ತೆರವುಗೊಳಿಸಬೇಕಾದ ಭಾಗಗಳಲ್ಲಿ ಈಗಾಗಲೇ ತೆರವುಗೊಳಿಸಿರುವುದರಿಂದ ಮಳೆ ಬಂದಾಗ ಈಗ ತೊಂದರೆಯಾಗುತ್ತಿಲ್ಲ. ಉಳಿದ 728 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲು ಪಾಲಿಕೆಯ ಅಧಿಕಾರಿಗಳು ಸಿದ್ಧವಿದ್ದಾರೆ. ಆದರೆ, ಗುರುತು ಮಾಡಿಕೊಡಲು ಕಂದಾಯ ಇಲಾಖೆಯಿಂದ ಸರ್ವೇ ಸಿಬ್ಬಂದಿ ಲಭ್ಯವಾಗುತ್ತಿಲ್ಲ.-ಸಿದ್ದೇಗೌಡ, ಬಿಬಿಎಂಪಿ ಮಳೆ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್ * 1953- ನಗರದಾದ್ಯಂತ ರಾಜಕಾಲುವೆ ಒತ್ತುವರಿಯಾಗಿರುವ ಕುರಿತು ಪಾಲಿಕೆ ಪಟ್ಟಿಮಾಡಿಕೊಂಡಿರುವ ಪ್ರದೇಶಗಳು * 820- ಕಳೆದ ವರ್ಷ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವುದಕ್ಕೂ ಮೊದಲೇ ತೆರವಾಗಿದ್ದ ಭಾಗಗಳು * 405- ಒತ್ತುವರಿ ತೆರವು ಮಾಡುವಂತೆ ಸಿಎಂ ಅದೇಶ ನೀಡಿದ ನಂತರ ತೆರವಾದ ಭಾಗಗಳು * 728- ಇನ್ನೂ ತೆರವಾಗಬೇಕಿರುವ ಭಾಗಳು * ವೆಂ.ಸುನೀಲ್ ಕುಮಾರ್