Advertisement

ಮೋದಿಗೆ ರಾವಣನಂತೆ 100 ತಲೆಗಳಿವೆಯೇ?: ರಾಜಕೀಯ ಗದ್ದಲಕ್ಕೆ ಕಾರಣವಾಯ್ತು ಖರ್ಗೆ ಹೇಳಿಕೆ

04:50 PM Nov 29, 2022 | Team Udayavani |

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಕರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುಜರಾತ್ ಚುನಾವಣಾ ಪ್ರಚಾರದ ಮಧ್ಯೆ ರಾಜಕೀಯ ಗದ್ದಲಕ್ಕೆ ಕಾರಣರಾಗಿದ್ದಾರೆ.

Advertisement

ಗುಜರಾತ್‌ ನ ಪುತ್ರನನ್ನು ಖರ್ಗೆ ಅವರು ಪದೇ ಪದೇ ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಅಹಮದಾಬಾದ್‌ ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

“ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ, ಆದರೆ, ಅವರು ತಮ್ಮ ಕೆಲಸವನ್ನು ಮರೆತು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ, ಎಂಪಿ ಚುನಾವಣೆಗಳಲ್ಲಿ, ಎಲ್ಲೆಡೆ ಪ್ರಚಾರ ಮಾಡುತ್ತಾರೆ. ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ‘ನೀವು ಬೇರೆ ಯಾರನ್ನೂ ನೋಡಬೇಕಾಗಿಲ್ಲ, ಮೋದಿಯನ್ನು ನೋಡಿ ಮತ ನೀಡಿ’ ಎನ್ನುತ್ತಾರೆ. ನಾವು ನಿಮ್ಮ ಮುಖವನ್ನು ಎಷ್ಟು ಬಾರಿ ನೋಡಬಹುದು? ನಿಮಗೆ ಎಷ್ಟು ರೂಪಗಳಿವೆ? ನಿಮಗೆ ರಾವಣನಂತೆ 100 ತಲೆಗಳಿವೆಯೇ?” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಾರೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

Advertisement

ಇದನ್ನೂ ಓದಿ:ಉತ್ತರ ಪ್ರದೇಶದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಲಕ್ಷ್ಮೀ ಸಿಂಗ್ ನೇಮಕ

‘’ಮೋದಿಜಿ ಹೆಸರಿನಲ್ಲಿ ಮತ ಕೇಳುವುದನ್ನು ನಾನು ನೋಡಿದ್ದೇನೆ, ಅದು ಪಾಲಿಕೆ ಚುನಾವಣೆ, ಪಾಲಿಕೆ ಚುನಾವಣೆ ಅಥವಾ ರಾಜ್ಯ ಚುನಾವಣೆಗಳು ಯಾವುದೇ ಇರಲಿ ಅಭ್ಯರ್ಥಿಯ ಹೆಸರಿನಲ್ಲಿ ಮತ ಕೇಳಿ. ಮೋದಿ ಅವರು ಪುರಸಭೆಗೆ ಬಂದು ಕೆಲಸ ಮಾಡುತ್ತಾರೆಯೇ? ನಿಮ್ಮ ಕಷ್ಟದ ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆಯೇ”ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಕೇಳಿದರು.

ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಗುಜರಾತ್ ನ ಪುತ್ರನನ್ನು ಅವಮಾನ ಮಾಡುವುದನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದಿದ್ದಾರೆ. ಟ್ವೀಟ್ ಮಾಡಿರುವ ಅಮಿತ್ ಮಾಳವಿಯಾ, “ಗುಜರಾತ್ ಚುನಾವಣೆಯ ಬಿಸಿ ತಾಳಲಾರದೆ, ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. “ಮೌತ್ ಕಾ ಸೌದಾಗರ್” ನಿಂದ “ರಾವಣ” ವರೆಗೆ ಕಾಂಗ್ರೆಸ್ ಗುಜರಾತ್ ಮತ್ತು ಅದರ ಮಗನನ್ನು ಅವಮಾನಿಸುತ್ತಲೇ ಇದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next