ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ 870 ಎಂಜಿನಿಯರ್‌ಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಆಯ್ಕೆ ಪ್ರಕ್ರಿಯೆ ಕೈಬಿಟ್ಟು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವೂಲಕ ನೇಮಕಾತಿಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಬಿಜೆಪಿ, ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಮೂವರು ಸದಸ್ಯರನ್ನು ನೇಮಿಸಿದ್ದು, ಅಲ್ಲಿಯೇ ವ್ಯಾಪಾರ ಮಾಡುತ್ತಾರೆಯೇ ಎಂದು ಮಾಜಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ/ ಕಿರಿಯ ಎಂಜಿನಿಯರ್ ಹುದ್ದೆ ಖಾಲಿಯಿತ್ತು. ಇಲಾಖೆ ವತಿಯಿಂದ ಸಾವಿರಾರು ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳಬೇಕಾದ ಕಾರಣ ಕೆಇಎ ಮೂಲಕ ನೇಮಕಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಈ ಉದ್ದೇಶ ಹೊರತುಪಡಿಸಿ ಬೇರೆ ಕಾರಣವಿಲ್ಲ ಎಂದರು.
ಅನ್ಯಾಯವಾಗುತ್ತೆ: ಕೆಇಎ ವತಿಯಿಂದ ಲಿಖೀತ ಪರೀಕ್ಷೆ ನಡೆಸಿ ನಂತರ ಆಯ್ಕೆ ಸಮಿತಿ ಸಂದರ್ಶನದ ಮೂಲಕ ಎಂಜಿನಿಯರ್‌ಗಳ ನೇಮಕಾತಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ಶಿಫಾರಸು ಮಾಡಿತ್ತು. ನಂತರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಅನುಮೋದನೆ ಮೇರೆಗೆ ಆರ್ಥಿಕ ಇಲಾಖೆ ಸಹಮತ ಪಡೆದ ನಂತರ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಅದರಂತೆ 64,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶ ಪ್ರಕಟಣೆ ಬಾಕಿ ಇದೆ. ಕೆಇಎ ನೇಮಕ ಪ್ರಕ್ರಿಯೆ ಹಿನ್ನೆಲೆಯಲ್ಲಿ 1.99 ಕೋಟಿ ರೂ. ಹಣವನ್ನು ಲೋಕೋಪಯೋಗಿ ಇಲಾಖೆ ಭರಿಸಬೇಕಿದೆ. ಈ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿದರೆ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಅನಗತ್ಯ ಆರೋಪ: ಕೆಇಎ ನೇಮಕಾತಿಯಲ್ಲಿ ನಾವು ಏನು ಮಾಡಲು ಸಾಧ್ಯ? ಬ್ರಹ್ಮನೇ ಬಂದರೂ ಒಬ್ಬರನ್ನೂ ಪಾಸ್ ಮಾಡಲು ಆಗಲ್ಲ. ಹಾಗಿದ್ದರೂ ಕೆಪಿಎಸ್‌ಸಿಗೆ ವಹಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಆದರೆ, ಕೆಪಿಎಸ್‌ಸಿ ಎಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಗಳೇ ಕೆಪಿಎಸ್‌ಸಿ ಅಧ್ಯಕ್ಷರು, ಮೂವರು ಸದಸ್ಯರನ್ನು ನೇಮಿಸಿದ್ದು, ಅಲ್ಲಿ ಏನು ಬೇಕಾದರೂ ಮಾಡಬಹುದು. ಹೀಗಿರುವಾಗ ನನ್ನ ಮೇಲೆ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಗೌರವ ಹಾಳು ಮಾಡಬೇಡಿ: ಕೆಇಎ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರೆ ಆ ಬಗ್ಗೆ ಸಿಬಿಐ ತನಿಖೆ ಬೇಕಾದರೆ ನಡೆಸಲಿ. ಅನಗತ್ಯವಾಗಿ ನನ್ನ ಮೇಲೆ ಆರೋಪ ಮಾಡಬಾರದು. ಹಾಗೆಯೇ ಸರ್ಕಾರದ ಸಂಸ್ಥೆಯೇ ಆದ ಕೆಇಎ ಗೌರವವನ್ನು ಹಾಳು ಮಾಡಬಾರದು ಎಂದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಉಪಸ್ಥಿತರಿದ್ದರು.
ರಿಪೇರಿ ಮಾಡುವುದು ಗೊತ್ತಿದೆ!: ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯಲ್ಲೇ ಕೆಎಂಎಫ್ಗೆ ಸಂಬಂಧಪಟ್ಟಂತೆ ಆದೇಶ ಹೊರಡಿಸಿದ್ದಾರೆ. ದಾಖಲೆ ಹೇಗೆ ತೆಗೆಯಬೇಕು ಎಂಬುದು ನಮಗೂ ಗೊತ್ತಿದೆ ಎಂದು ರೇವಣ್ಣ ಟಾಂಗ್ ನೀಡಿದರು. ಸರ್ಕಾರದ 100 ದಿನದ ಆಡಳಿತದಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಜನರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ. ಹಿಂದೆ ದಾಖಲೆ ಪಡೆಯುವ ಕೀ ಇತ್ತು. ಈಗ ಇಲ್ಲ. ಕೀ ಮಾಡಿಸಬೇಕಿದ್ದು, ಹುಡುಕುತ್ತಿದ್ದೇನೆ. ನಾನು ಐದು ಬಾರಿ ಶಾಸಕನಾದವನು. ಇಂಥದ್ದನ್ನೆಲ್ಲಾ ಎದುರಿಸಿಕೊಂಡೇ ಇಲ್ಲಿವರೆಗೆ ಬಂದಿದ್ದೇನೆ ಎಂದರು.