ಯಾದಗಿರಿ: ರೋಗ ನಿರೋಧಕ ಶಕ್ತಿ ವೃದ್ಧಿಸಲು ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಯೋಗದಿಂದ ರೋಗ ಓಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ|ರಾಗಪ್ರಿಯಾ ಹೇಳಿದರು. ನಗರದ ಲುಂಬಿನಿ ವನದಲ್ಲಿ ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ, ಆಯುಷ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಪತಾಂಜಲಿ ಯೋಗ ಸಮಿತಿ ಸಹಯೋಗದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ದೇಹದ ಆರೋಗ್ಯ ಮತ್ತು ಸದೃಢತೆ ಬಹಳ ಮುಖ್ಯವಾಗಿದೆ. ನಾವು ಆರೋಗ್ಯವಂತರಾಗಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಕೋವಿಡ್ ಮಹಾಮಾರಿ ಮುಖ್ಯ ಪಾಠ ಕಲಿಸಿದೆ. ಕೋವಿಡ್ ಮಾತ್ರವಲ್ಲ, ಯಾವುದೇ ವೈರಸ್ ಬಂದರೂ ರೋಗ ನಿರೋಧಕ ಶಕ್ತಿಯಿದ್ದರೆ ಎದುರಿಸಲು ಸಾಧ್ಯ ಎಂದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾತನಾಡಿ, ಯೋಗವನ್ನು ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯ. ಯೋಗವನ್ನು ನೀವು ಮಾಡುವುದಲ್ಲದೇ ನಿಮ್ಮ ಕುಟುಂಬದವರನ್ನು ಮತ್ತು ನೆರೆಹೊರೆಯವರಿಗೂ ಯೋಗದ ಉಪಯುಕ್ತತೆ ತಿಳಿಸಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಮುಖ್ಯಸ್ಥ ಅನಿಲ್ ಗುರೂಜಿ ಒಂದು ಗಂಟೆಗಳ ಕಾಲಯೋಗಾಭ್ಯಾಸ ಮಾಡಿಸಿದರು. ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಆಯುಷ್ ಜಿಲ್ಲಾಧಿಕಾರಿ ಡಾ| ವಂದನಾ ಜೆ. ಗಾಳಿಯವರು ಯಾದಗಿರಿ ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಜಿಲ್ಲಾ ಆಯುಷ್ ಅಧಿಕಾರಿ ಡಾ| ವಂದನಾ ಜೆ ಗಾಳಿಯವರ್, ಆಯುಷ್ ವೈದ್ಯಾಧಿಕಾರಿ ಡಾ| ಶಿವಲಿಂಗಪ್ಪ ಪಾಟೀಲ್, ಸಂಗಮೇಶ ಕೆಂಭಾವಿ ಇನ್ನಿತರರಿದ್ದರು.