ಹೊಸದಿಲ್ಲಿ: “ಪ್ರಪಂಚದಾದ್ಯಂತ, 35% ರಷ್ಟು ಮಹಿಳೆಯರ ಕೊಲೆಗಳು ಲಿವ್-ಇನ್ ಸಂಬಂಧಗಳ ಕಾರಣದಿಂದ ನಡೆಯುತ್ತಿವೆ. ಅದೇ ಕಾರಣಕ್ಕೆ ಭಾರತದಲ್ಲಿ ಲಿವ್-ಇನ್ ಸಂಬಂಧವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದೇನೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಅಜಯ್ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಅಜಯ್ ಪ್ರತಾಪ್ ಸಿಂಹ ಬುಧವಾರ ರಾಜ್ಯಸಭೆಯಲ್ಲಿ ಲಿವ್-ಇನ್ ಸಂಬಂಧವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಲಿವ್-ಇನ್ ಸಂಬಂಧವು ಅನೈತಿಕವಾಗಿದೆ ಆದರೆ ಕಾನೂನುಬಾಹಿರವಲ್ಲ ಎಂದು 1978 ರಲ್ಲಿ ನ್ಯಾಯಾಲಯವು ಹೇಳಿದೆ. ಒಂದು ರೀತಿಯಲ್ಲಿ ನ್ಯಾಯಾಲಯವು ಅದನ್ನು ಗುರುತಿಸಿದೆ. ಲಿವ್-ಇನ್ ಸಂಬಂಧಗಳ ಹೆಚ್ಚಳಕ್ಕೆ, ಅಂತಹ ಸಂಬಂಧದಲ್ಲಿ ಮಹಿಳೆ ಸಂಗಾತಿಯು ಎಲ್ಲಾ ಹಕ್ಕುಗಳನ್ನು ಪಡೆಯುತ್ತಾಳೆ ಎಂದು ನ್ಯಾಯಾಲಯ ಹೇಳಿದೆ, ಈ ನಿರ್ಧಾರದ ಹಿಂದಿನ ಉದ್ದೇಶವು ಈ ಸಂಬಂಧಗಳಿಂದ ಹುಟ್ಟುವ ಮಕ್ಕಳ ಭವಿಷ್ಯವನ್ನು ಭದ್ರಪಡಿಸುವುದಾಗಿದೆ. ಆದರೆ ಈ ಆದೇಶವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಅದಕ್ಕಾಗಿಯೇ ನಾನು ಈ ವಿಷಯವನ್ನು ಎತ್ತಿದ್ದೇನೆ ಎಂದರು.
”ಸಮಾಜ ಯಾವ ರೀತಿಯ ರಾಷ್ಟ್ರ ಬೇಕು, ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ನಾವು ಮುಂದುವರಿಯಬೇಕೇ ಅಥವಾ ನಮ್ಮ ರಾಷ್ಟ್ರವನ್ನು ಅಮೆರಿಕ ಅಥವಾ ಮೆಕ್ಸಿಕೋ ಮಾಡಬೇಕೇ ಎಂದು ನಿರ್ಧರಿಸಬೇಕು” ಎಂದು ಹೇಳಿದರು.