Advertisement

ದಾಳಿಗೆ ತೆರಳುವ ಯೋಧರು ಕ್ಯಾಮೆರಾ ಒಯ್ಯುತ್ತಾರೆಯೇ?

06:00 AM Nov 27, 2018 | Team Udayavani |

ಹೊಸದಿಲ್ಲಿ: ಡಿಸೆಂಬರ್‌ 7ರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ ಪ್ರಚಾರದ ಕಾವು ಹೆಚ್ಚುತ್ತಿದ್ದು, ಕಾಂಗ್ರೆಸ್‌-ಬಿಜೆಪಿ ಸತತ ಪ್ರಚಾರ ಸಭೆಗಳನ್ನು ನಡೆಸುತ್ತಾ ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿವೆ. ಪ್ರಧಾನಿ ಮೋದಿ ಅವರೂ ಸರಣಿ ರ್ಯಾಲಿಗಳನ್ನು ನಡೆಸುತ್ತಿದ್ದು, ಕಾಂಗ್ರೆಸ್‌ ವಿರುದ್ಧದ ವಾಗ್ಧಾಳಿಯನ್ನು ತೀವ್ರಗೋಳಿಸಿದ್ದಾರೆ.

Advertisement

ಸೋಮವಾರ ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸರ್ಜಿಕಲ್‌ ದಾಳಿಯ ಬಗ್ಗೆ ಪ್ರಶ್ನಿಸಿದ್ದ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. “26/11ರ ಮುಂಬೈ ದಾಳಿ ನಡೆದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌. ಹೀಗಿದ್ದರೂ, ನಾವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್‌ ದಾಳಿ ನಡೆಸಿದಾಗ ಅದಕ್ಕೆ ಸಾಕ್ಷ್ಯವೇನು ಎಂದು ಕಾಂಗ್ರೆಸ್‌ನವರು ಪ್ರಶ್ನಿಸುತ್ತಾರೆ. ದಾಳಿ ನಡೆಸಲು ಹೋಗುವ ಕಮಾಂಡೋಗಳು ಕ್ಯಾಮೆರಾ ಹಿಡಿದುಕೊಂಡು ಹೋಗಿರುತ್ತಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಪಾಕ್‌ ಗಡಿಗೆ ತೆರಳಿದ ಯೋಧರು ತಮ್ಮ ಜೀವ ವನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗಿದ್ದರೇ ವಿನಾ ವಿಡಿಯೋ ಕ್ಯಾಮೆರಾವನ್ನಲ್ಲ. ನಮ್ಮ ಸರಕಾರವು ನಕ್ಸಲರು ಹಾಗೂ ಉಗ್ರರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯು ತ್ತರ ನೀಡಿದೆ ಎಂದಿದ್ದಾರೆ ಮೋದಿ. ಇದೇ ವೇಳೆ, ಕೋಟಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಡೆಯುತ್ತಿದ್ದ ಲೂಟಿಯನ್ನು ತಡೆಯಿತು. ಆದರೆ, ದೆಹಲಿಯ ಎಸಿ ರೂಂಗಳಲ್ಲಿ ಕುಳಿತಿರುವ ವ್ಯಕ್ತಿಗಳು ನಮ್ಮ ಪಕ್ಷವನ್ನು ನಿರ್ಮೂಲನೆ ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಲ ಮನ್ನಾ: ಸೋಮವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕೇವಲ 10 ದಿನಗಳೊಳಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ. ನಾನು ಕರ್ನಾಟಕ ಮತ್ತು ಪಂಜಾಬ್‌ನಲ್ಲೂ ಇದೇ ಘೋಷಣೆ ಮಾಡಿದ್ದೆ. ಅದರಂತೆ, ಅಲ್ಲಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಸುಳ್ಳು ಭರವಸೆಗಳನ್ನು ನೀಡುವ ಅಭ್ಯಾಸ ನನಗಿಲ್ಲ ಎಂದೂ ಹೇಳಿದ್ದಾರೆ. ಇದಕ್ಕೂ ಮುನ್ನ, ರಾಹುಲ್‌ ಅವರು 13ನೇ ಶತಮಾನದ ಐತಿ ಹಾಸಿಕ ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ ದರ್ಗಾಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ನಂತರ, ಪುಷ್ಕರ್‌ನಲ್ಲಿ ಜಗತ್‌ಪೀಠ ಬ್ರಹ್ಮ ದೇಗುಲ ದಲ್ಲೂ ಪೂಜೆ ಸಲ್ಲಿಸಿದರು.

ಶಾ ವಾಗ್ಧಾಳಿ: ಮಧ್ಯಪ್ರದೇಶದ ಕುಕ್ಷಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ನಾಯಕರು ಭಾರತ್‌ ಮಾತಾ ಕೀ ಜೈ ಎಂದು ಹೇಳಲೂ ನಾಚಿಕೆ ಪಡು ತ್ತಾರೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಹೊರಟಾಗ, ಆತನನ್ನು ತಡೆದು, ಸೋನಿಯಾ ಗಾಂಧಿ ಕೀ ಜೈ ಎಂದು ಘೋಷಿಸುವಂತೆ ಸೂಚಿಸಲಾಯಿತು. ಕಾಂಗ್ರೆಸ್‌ಗೆ ಯಾವುದು ಹೆಚ್ಚು ಮುಖ್ಯ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದಿದ್ದಾರೆ ಶಾ.

ನಾಳೆ ಮಿಜೋರಾಂ ಮತದಾನ; ಪ್ರಚಾರಕ್ಕೆ ತೆರೆ
40 ಸದಸ್ಯಬಲದ ಮಿಜೋರಾಂ ವಿಧಾನಸಭೆಗೆ 28ರಂದು(ಬುಧವಾರ) ಮತದಾನ ನಡೆಯಲಿದ್ದು, ಸೋಮವಾರ ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮಿಜೋರಾಂ ಈಶಾನ್ಯದಲ್ಲಿ ಕಾಂಗ್ರೆಸ್‌ ಆಡಳಿತವಿರುವ ಕಟ್ಟಕಡೆಯ ರಾಜ್ಯವಾಗಿದೆ. 2008ರಿಂದಲೂ ಇಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಸತತ 3ನೇ ಅವಧಿಗೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. 2013ರಲ್ಲಿ ಕಾಂಗ್ರೆಸ್‌ 34 ಸೀಟುಗಳಲ್ಲಿ ಗೆದ್ದರೆ, ಮಿಜೋ ನ್ಯಾಷನಲ್‌ ಫ್ರಂಟ್‌ 5ರಲ್ಲಿ, ಮಿಜೋರಾಂ ಪೀಪಲ್ಸ್‌ ಕಾನ್ಫರೆನ್ಸ್‌ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. ಈ ಬಾರಿ ಬಿಜೆಪಿ ಇಲ್ಲಿ 39 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗಿಳಿದಿದೆ.

Advertisement

ಪಂಚರಾಜ್ಯಗಳಿಗೆ 78 ಸಾವಿರ ಅರೆಸೇನಾ ಸಿಬ್ಬಂದಿ ನಿಯೋಜನೆ
ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಭದ್ರತೆಗಾಗಿ ಸುಮಾರು 78 ಸಾವಿರ ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸುವ ಕೆಲಸವನ್ನು ಕೇಂದ್ರ ಗೃಹ ಇಲಾಖೆ ಮಾಡಿದೆ. ಚುನಾವಣಾ ಆಯೋಗ ಮತ್ತು ಗೃಹ ಇಲಾಖೆ ನಡುವೆ ಹಲವು ಸುತ್ತುಗಳ ಮಾತುಕತೆ ನಡೆದಿದ್ದು, ಸೂಕ್ತ ಭದ್ರತೆ ಕಲ್ಪಿಸಲು ಸಾಕಷ್ಟು ಸೇನಾ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ಆಯೋಗ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತಲಾ 100 ಸಿಬ್ಬಂದಿಯಿರುವ ಅರೆಸೇನಾ ಪಡೆಯ 785 ಕಂಪನಿಗಳನ್ನು ನಿಯೋಜಿಸಲಾಯಿತು ಎಂದು ಇಲಾಖೆ ತಿಳಿಸಿದೆ. ಛತ್ತೀಸ್‌ಗಡದಲ್ಲಿ 40 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲಿ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳು ತ್ತಿದ್ದಾರೆ. ಬಿಜೆಪಿ ಸರ್ಕಾರದ ವೈಫ‌ಲ್ಯ ದಿಂದಾಗಿ ಗಡಿಯಲ್ಲಿ ಆತಂಕದ ಸ್ಥಿತಿಯಿದೆ. ಕಳೆದ 54 ತಿಂಗಳಲ್ಲಿ 16 ಪ್ರಮುಖ ಭಯೋತ್ಪಾದಕ ದಾಳಿಗಳು ನಡೆದಿವೆ.
 ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

ಯಾವ ಕ್ಷೇತ್ರದಲ್ಲಿ ರಾಹುಲ್‌ ಸಭೆ ನಡೆಸುತ್ತಾರೋ, ಅಲ್ಲಿ ಕಾಂಗ್ರೆಸ್‌ ಸೋಲುವುದು ಖಚಿತ. ಹಾಗಾಗಿ, ಕಾಂಗ್ರೆಸ್‌ ಅಭ್ಯರ್ಥಿಗಳೆಲ್ಲ ರಾಹುಲ್‌ ತಮ್ಮ ಕ್ಷೇತ್ರದಲ್ಲಿ ಸಭೆ ನಡೆಸದಿರಲಿ ಎಂದು ಪ್ರಾರ್ಥಿಸುತ್ತಾರೆ.
ಯೋಗಿ ಆದಿತ್ಯನಾಥ್‌, ಉ.ಪ್ರದೇಶ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next