ಧಾರವಾಡ: ಸರ್ಕಾರದ ಅಬಕಾರಿ ಕಾಯ್ದೆಯನ್ವಯ ಶಾಲೆ-ಕಾಲೇಜು, ದೇವಾಲಯ, ಪ್ರಾರ್ಥನಾ ಮಂದಿರಗಳಿಂದ 100 ಮೀಟರ್ ಅಂತರದೊಳಗೆ ಯಾವುದೇ ಬಾರ್ ಮತ್ತು ಮದ್ಯ ಮಾರಾಟದ ಅಂಗಡಿಗಳ ಸ್ಥಾಪನೆಗೆ ಅವಕಾಶವಿಲ್ಲ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಕಾರ್ಯಾಚರಣೆ ನಡೆಸಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೂಡಲೇ ಶಾಲೆ, ದೇವಾಲಯ, ಪ್ರಾರ್ಥನಾ ಮಂದಿರಗಳ ಸಮೀಪ ಇರುವ ಎಲ್ಲ ಬಾರ್‌ಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಲೆ ಅಥವಾ ಮಂದಿರ, ಮಸೀದಿ ಸ್ಥಾಪನೆಗೆ ಮುನ್ನವೇ ಆ ಸ್ಥಳದಲ್ಲಿ ವೈನ್‌ಶಾಪ್, ಬಾರ್ ಇದ್ದರೆ 50 ಮೀಟರ್ ಅಂತರದೊಳಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಅಧಿಕಾರ ಅಬಕಾರಿ ಆಯುಕ್ತರಿಗೆ ಇದೆ. ಆದರೆ ಇದಕ್ಕೆ ಹೆಚ್ಚು ಅವಕಾಶಗಳನ್ನು ನೀಡಬಾರದು. ನಿಗದಿತ ಅವಧಿಗಿಂತ ಮೊದಲು ಮತ್ತು ನಂತರ ತೆರೆದಿರುವ ಮದ್ಯದಂಗಡಿಗಳ ಮೇಲೆ ಕ್ರಮ ಜರುಗಿಸಬೇಕು.
ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿ, ಮನೆಗಳಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಳ್ಳುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಹಾರ ಸುರಕ್ಷತಾ ಅಧಿಕಾರಿಗಳು ನಿರಂತರ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
ಸರ್ಕಾರದ ವಿವಿಧ ಇಲಾಖೆಗಳ ಹಾಸ್ಟೇಲ್‌ಗಳಲ್ಲಿನ ವಿದ್ಯಾರ್ಥಿಗಳು ಮಾಧಕ ವಸ್ತುಗಳ ಬಳಕೆಗೆ ಅವಕಾಶ ಸಿಗದಂತೆ ಎಚ್ಚರ ವಹಿಸಿ, ಸಿ.ಸಿ.ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು.ಮಂಡಳಿಯ ನಿರ್ದೇಶಕ ಶμ ಮುಧೋಳ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬಳಿ ಇರುವ ಅಕ್ರಮ ಮದ್ಯ ಮಾರಾಟಗಾರರನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಅಬಕಾರಿ ಇಲಾಖೆಯ ಅಧಿಕಾರಿಗಳಾದ ಆರ್.ವಿ. ಕ್ಯಾತಣ್ಣವರ, ದೀಪಾಲಿ, ಸ್ವಪ್ನಾ, ಡಿಎಚ್‌ಒ ಡಾ| ಆರ್.ಎಂ.ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಆರ್.ಟಿ. ಪಡಗಣ್ಣವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಇದ್ದರು.