ಮಹಾಲಿಂಗಪುರ: ಪತ್ರಕರ್ತರು ಸುದ್ದಿಯನ್ನು ಪ್ರಾಮಾಣಿಕತೆಯಿಂದ ಬರೆದು, ಯಾರಿಗೂ ಭಯಪಡದೇ ಅದನ್ನು ಓರೆಗೆ ಹಚ್ಚುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಪತ್ರಿಕೋದ್ಯಮಕ್ಕೆ ಬೆಲೆ ಎಂದು ಜಮಖಂಡಿಯ ಹಿರಿಯ ಪತ್ರಕರ್ತ ಡಾ| ಟಿ.ಪಿ. ಗಿರಡ್ಡಿ ಹೇಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ 2019ನೇ ಸಾಲಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಕರ್ತರು ಯಾವುದೇ ಭೇದ ಭಾವವಿಲ್ಲದೆ ಸಾಮಾಜಿಕ ಸಮಸ್ಯೆಗಳನ್ನು ಜನರ ಮುಂದಿಡುವ ಕಾರ್ಯ ಮಾಡಬೇಕು ಎಂದರು.
ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಅಂತರಂಗದ ಸ್ವಾತಂತ್ರ್ಯ ಮುಖ್ಯವಾಗಿದೆ. ಸಮಾಜದ ಹಿತಕ್ಕಾಗಿ ಯಾವುದೇ ಸುದ್ದಿಯನ್ನು ಅಂತರಂಗದಿಂದ ಗ್ರಹಿಸಬೇಕು. ಅಂತರಂಗದ ಸ್ವಾತಂತ್ರ್ಯ ಕಳೆದುಕೊಂಡರೆ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಪತ್ರಕರ್ತರು ವರದಿ ಮಾಡಲು ಒಳ ಮತ್ತು ಹೊರ ಜಗತ್ತು ತಿಳಿದಿರಬೇಕು. ಮುಂದಾಲೋಚನೆ, ಸುದ್ದಿ ಮೌಲ್ಯ, ಮಹತ್ವ ತಿಳಿದಿರಬೇಕು. ಅಂದಾಗ ಮಾತ್ರ ಯಶಸ್ವಿ ಪತ್ರಕರ್ತರಾಗಿ ಹೊರಹೊಮ್ಮಲು ಸಾಧ್ಯ ಎಂದರು. ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಪತ್ರಕರ್ತ ವೃತ್ತಿಯು ಹಣಗಳಿಕೆಯ ವೃತ್ತಿಯಲ್ಲ. ಇದೊಂದು ಸಮಾಜ ಸೇವಾ ವೃತ್ತಿ. ಈ ವೃತ್ತಿಗೆ ಸೇರ ಬಯಸುವವರಿಗೆ ಸಮಾಜದ ಬಗ್ಗೆ ಕಳಕಳಿ ಗೌರವ, ಸಮಸ್ಯೆಗಳ ಕುರಿತು ಅರಿವಿರಬೇಕು. ಹಾಗೆಯೇ ಭಾಷಾ ಜ್ಞಾನವೂ ಅಗತ್ಯ ಎಂದರು.
ಪ್ರಾಚಾರ್ಯ ಡಾ| ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ತ್ರಿವೇಣಿ ನಾಯಕ, ದೀಕ್ಷಾ ಮುಚಂಡಿ ಪತ್ರಿಕೋದ್ಯಮ ಬೆಳೆದು ಬಂದ ದಾರಿಯ ಕುರಿತು ಮಾತನಾಡಿದರು. ಕಾಲೇಜಿನ ಪಾಕ್ಷಿಕ ಪತ್ರಿಕೆ ಚನ್ನಗಿರಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪತ್ರಿಕಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಚರ್ಚಾ ಸ್ಪರ್ಧೆ ಮತ್ತು ಸುದ್ದಿವಾಚಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಆಯ್‌ಕ್ಯೂಎಸಿ ಸಂಯೋಜಕ ಡಾ| ಕೆ.ಎಂ.ಅವರಾದಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪೂಜಾ ಕಲ್ಯಾಣಶೆಟ್ಟಿ, ಉಪನ್ಯಾಸಕರಾದ ಅಶೋಕ ನರೋಡೆ, ಆಶಾರಾಣಿ ಚಿನಗುಂಡಿ, ವಿರೂಪಾಕ್ಷ ಅಡಹಳ್ಳಿ ಸೇರಿದಂತೆ ಹಲವರು ಇದ್ದರು.
ಐಶ್ವರ್ಯ ಹುದ್ದಾರ ಪ್ರಾರ್ಥಿಸಿದರು. ಜಯಶ್ರೀ ದೇಶನೂರ ಸ್ವಾಗತಿಸಿದರು. ಲಕ್ಷಿ ್ಮೕ ಘಂಟಿ ಪರಿಚಯಿಸಿದರು. ಮಾನಿಂಗ ಲಮಾಣಿ, ಮಹಾನಂದಾ ಬಿಜಾಪುರ ನಿರೂಪಿಸಿದರು. ರಾಜೇಂದ್ರ ನಾವಿ ವಂದಿಸಿದರು.