Advertisement

ಮನೆಯಲ್ಲೇ ಮಾಡಿ ಬಗೆ ಬಗೆಯ ಹೋಳಿಗೆ

10:31 PM Jan 17, 2020 | mahesh |

ಹೋಳಿಗೆಯನ್ನು ನಾವು ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುತ್ತೇವೆ. ಇದೊಂದು ಹೆಚ್ಚಾಗಿ ಸಿಹಿಯಾದ ಖಾದ್ಯವಾಗಿದ್ದು, ಕೆಲವೊಮ್ಮೆ ಖಾರದ ಹೋಳಿಗೆಯನ್ನೂ ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಹೋಳಿಗೆ ಬಳಸಲ್ಪಡುತ್ತದೆ. ಈ ಖಾದ್ಯವನ್ನು ಸವಿಯದವರು ಯಾರೂ ಇಲ್ಲವೆನ್ನಬಹುದು. ಅಂತಹ ಹೋಳಿಗೆಯನ್ನು ಬಗೆಬಗೆಯಲ್ಲಿ ಹೇಗೆ ಮಾಡಬಹುದೆನ್ನುವ ಕುರಿತು ಇಲ್ಲಿ ಕೆಲವೊಂದು ಮಾಹಿತಿಯನ್ನು ನಿಮಗಾಗಿ ವಿವರಿಸಲಾಗಿದೆ.

Advertisement

ಸಜ್ಜಕದ ಹೋಳಿಗೆ
ಮಾಡುವ ವಿಧಾನ:
ಎಣ್ಣೆ ಬಿಸಿ ಮಾಡಿ ಅದರಲ್ಲಿ ರವೆಯನ್ನು ಸ್ವಲ್ಪ ಕೆಂಪಗೆ ಹುರಿದಿಡಿ. ಬೆಲ್ಲಕ್ಕೆ ಸ್ವಲ್ಪ ನೀರು ಮತ್ತು ಏಲಕ್ಕಿ ಪುಡಿ ಹಾಕಿ ಒಂದು ಕುದಿ ಕುದಿಸಿ. ಅನಂತರ ಇದಕ್ಕೆ ರವೆ ಹಾಕಿ ಕುದಿಸಿ ಆರಲು ಬಿಡಿ. ಅನಂತರ ಮೈದಾ ಹಿಟ್ಟಿಗೆ ಗೋಧಿ ಹಿಟ್ಟು, ಉಪ್ಪು, ಅರಿಶಿನ ಹುಡಿ, ಎಣ್ಣೆ ಮತ್ತು ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಐದು ನಿಮಿಷ ನೆನೆಯಲು ಬಿಡಿ. ಅನಂತರ ಅದನ್ನು ಸಜ್ಜಕದ ಹೂರಣ ಹಾಕಿ ಲಟ್ಟಿಸಿ ಬೇಯಿಸಿದರೆ ರುಚಿ ರುಚಿಯಾದ ಸಜ್ಜಕದ ಹೋಳಿಗೆ ಸವಿಯಲು ಸಿದ್ಧ.

ಬೇಕಾಗುವ ಸಾಮಗ್ರಿಗಳು:
ಉಪ್ಪಿಟ್ಟು ರವೆ: 1ಕಪ್‌
ಬೆಲ್ಲ – ಒಂದೂವರೆ ಕಪ್‌
ಮೈದಾ ಹಿಟ್ಟು – ಅರ್ಧ ಕಪ್‌
ಗೋಧಿ ಹಿಟ್ಟು – 2 ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಅರಿಶಿನ -1 ಚಿಟಿಕೆ
ಎಣ್ಣೆ -1 ಚಮಚ

ಹಲಸಿನ ಬೀಜದ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದ ಹಲಸಿನ ಹಣ್ಣಿನ ಬೀಜ: 1 ದೊಡ್ಡ ಕಪ್‌
ಬೆಳ್ತಿಗೆ ಅಕ್ಕಿ –
ದೊಡ್ಡ ಕಪ್‌
ಬೆಲ್ಲ -1ಕಪ್‌
ತೆಂಗಿನಕಾಯಿ ತುರಿ- 1 ಸಣ್ಣ ಕಪ್‌
ಏಲಕ್ಕಿ ಪುಡಿ -1 ಚಿಟಿಕೆ
ಅರಿಶಿನ ಪುಡಿ- 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
l ತುಪ್ಪ -ಸ್ವಲ್ಪ

ಮಾಡುವ ವಿಧಾನ:
ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ಮೂರು ಗಂಟೆ ನೆನೆಸಿಟ್ಟು ಅನಂತರ ರುಬ್ಬಿ ಹಲಸಿನ ಬೀಜಕ್ಕೆ ಒಂದೂವರೆ ಲೋಟ ನೀರು ಹಾಕಿ ಚೆನ್ನಾಗಿ ಬೇಯಿಸಿ ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ ಬೆಲ್ಲ, ಉಪ್ಪು, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ, ಅರಿಶಿನ ಪುಡಿ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ, ಕೈಗೆ ಎಣ್ಣೆ ಸವರಿ ರುಬ್ಬಿದ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ ಎಣ್ಣೆ ಸವರಿದ ಬಾಳೆ ಎಲೆಯಲ್ಲಿಟ್ಟು ಕೈಯಲ್ಲೇ ತೆಳ್ಳಗೆ ತಟ್ಟಿ ರುಬ್ಬಿದ ಅಕ್ಕಿ ಹಿಟ್ಟಿನಲ್ಲಿ ಅದ್ದಿ ಕಾದ ತವಾದಲ್ಲಿ ಸ್ವಲ್ಪ ತುಪ್ಪ ಹಾಕಿ ಬೇಯಿಸಿಕೊಂಡರೆ ರುಚಿ ರುಚಿಯಾದ ಹಲಸಿನ ಬೀಜದ ಹೋಳಿಗೆ ಸವಿಯಲು ಸಿದ್ಧ.

Advertisement

ಎಲೆಕೋಸಿನ ಹೋಳಿಗೆ
ಬೇಕಾಗುವ ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಎಲೆಕೋಸು-1 ಬೌಲ್‌
ಪುಟಾಣಿ ಪುಡಿ -3ಚಮಚ
ಅರಶಿನ ಪುಡಿ – 1ಚಿಟಿಕೆ
ಏಲಕ್ಕಿ ಪುಡಿ -ಅರ್ಧ ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಎಣ್ಣೆ – 3 ಚಮಚ
ಮೈದಾ ಹಿಟ್ಟು – 1 ಬೌಲ್‌
ಬೆಲ್ಲ -1 ಬೌಲ್‌

ಮಾಡುವ ವಿಧಾನ:
ಮೈದಾ ಹಿಟ್ಟಿಗೆ ಉಪ್ಪು, ಅರಿಶಿನ ಪುಡಿ, ನೀರು ಹಾಕಿ ಕಲಸಿಡಿ. ಎಲೆಕೋಸನ್ನು ಒಂದು ಕುದಿ ಬೇಯಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲವನ್ನು ಕುದಿಯಲು ಇಡಿ. ಅದು ಕುದಿಯುತ್ತಿರುವಾಗ ರುಬ್ಬಿದ ಎಲೆಕೋಸು ಹಾಕಿ ತಿರುವಿ. ಪುಟಾಣಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಕುದಿಯುತ್ತಿರುವ ಎಲೆಕೋಸಿಗೆ ಹಾಕಿ ಚೆನ್ನಾಗಿ ತಿರುವಿ ಕೆಳಗಿಳಿಸಿ. ಈ ಮಿಶ್ರಣ ಆರಿದ ಅನಂತರ ಮೈದಾ ಹಿಟ್ಟಿನಿಂದ ಉಂಡೆ ಮಾಡಿ ಅದರೊಳಗೆ ಎಲೆಕೋಸಿನ ಹೂರಣ ತುಂಬಿಸಿ ಲಟ್ಟಿಸಿ ಕಾದ ತವಾದಲ್ಲಿ ಬೇಯಿಸಿ.

ಕ್ಯಾರೆಟ್‌ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್‌ – 2 ಬೌಲ್‌
ಸಕ್ಕರೆ -1 ಬೌಲ್‌
ರವೆ -2 ಚಮಚ
ಬಾದಾಮಿ ಪುಡಿ -2 ಚಮಚ
ತುಪ್ಪ -1 ಚಮಚ

ಏಲಕ್ಕಿ ಪುಡಿ -ಅರ್ಧ ಚಮಚ
ಮೈದಾ ಹಿಟ್ಟು -1 ಬೌಲ್‌
ಚಿರೋಟಿ ರವಾ – ಕಾಲು ಬೌಲ್‌
ಎಣ್ಣೆ – ಕಾಲು ಬೌಲ್‌

ಮಾಡುವ ವಿಧಾನ:
ಮೈದಾ ಹಿಟ್ಟಿಗೆ ರವೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ತೆಳ್ಳಗೆ ಕಲಸಿ ಎಣ್ಣೆ ಹಾಕಿ ಚೆನ್ನಾಗಿ ನಾದಿ ಉಳಿದ ಎಣ್ಣೆಯನ್ನು ಅದರ ಮೇಲೆ ಹಾಕಿ ಎರಡು ಗಂಟೆ ನೆನೆಯಲು ಬಿಡಿ. ಕ್ಯಾರೆಟ್‌ಅನ್ನು ತುರಿದು ಮಿಕ್ಸಿಯಲ್ಲಿ ಒಂದು ಸುತ್ತು ರುಬ್ಬಿ. ಒಂದು ಚಮಚ ತುಪ್ಪ ಬಿಸಿ ಮಾಡಿ ರುಬ್ಬಿದ ಕ್ಯಾರೆಟ್‌ ಹಾಕಿ ಸ್ವಲ್ಪ ಬಾಡಿಸಿ ಅನಂತರ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಗುಚಿರಿ. ಸಕ್ಕರೆ ಕರಗಿ ಗಟ್ಟಿಯಾದಾಗ ಹುರಿದ ರವೆ, ಬಾದಾಮಿ ಪುಡಿ ಸೇರಿಸಿ ಮಗುಚಿ. ಈ ಹೂರಣ ತಣ್ಣಗಾದ ಮೇಲೆ ಲಟ್ಟಿಸಿದ ಕಣಕದ ಒಳಗಿಟ್ಟು ಮುಚ್ಚಿ ಅನಂತರ ಲಟ್ಟಿಸಿ ಕಾದ ಕಾವಲಿ ಮೇಲೆ ಎಣ್ಣೆ ಹಾಕದೆ ಬೇಯಿಸಿ.

 ಪ್ರೀತಿ ಭಟ್‌ ಗುಣವಂತೆ
(ವಿವಿಧ ಮೂಲಗಳ ಸಂಗ್ರಹದಿಂದ)

Advertisement

Udayavani is now on Telegram. Click here to join our channel and stay updated with the latest news.

Next