Advertisement

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ: ನಿರಾಣಿ

03:56 PM Apr 22, 2022 | Team Udayavani |

ಬೆಳಗಾವಿ: ರಾಜ್ಯದ ಆರು ಕೋಟಿಗೂ ಅಧಿಕ ಜನಸಂಖ್ಯೆಯ ಸೇವೆ ಮಾಡುವುದಕ್ಕಾಗಿ ಆರು ಲಕ್ಷಕ್ಕೂ ಹೆಚ್ಚು ಸರಕಾರಿ ಸರ್ಕಾರಿ ನೌಕರರ ಅಗತ್ಯವಿದೆ. ಆದರೆ ಸದ್ಯಕ್ಕೆ ಇರುವ 5 ಲಕ್ಷ ನೌಕರರು ಶ್ರದ್ಧೆ, ಬದ್ಧತೆಯಿಂದ ಜನ ಸೇವೆ ಮಾಡುತ್ತಿದ್ದು, ಉಳಿದಂತೆ ಖಾಲಿ ಇರುವ 1 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಗಮನವನ್ನು ಸೆಳೆಯಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಹೇಳಿದರು.

Advertisement

ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಸಂಯಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಥಮ ವರ್ಷದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹಿರಿದಾಗಿದೆ. ಹೀಗಾಗಿ ಜವಾಬ್ದಾರಿಯುತ ಕಾರ್ಯವನ್ನು ಪ್ರತಿಯೊಂದು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಸರ್ಕಾರಿ ಕೆಲಸ ಸಮಾಜಮುಖೀ ಕೆಲಸವಾಗಿದೆ. ಸಮಾಜಮುಖೀ ಕೆಲಸ ಎಂದರೆ ಅದು ದೇವರ ಕೆಲಸ. ಹೀಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಾಜಮುಖೀ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌.ಎಚ್‌.ವಿ. ಮಾತನಾಡಿ, ಬಾಕಿ ಉಳಿದಿರುವ ಸರ್ಕಾರಿ ನೌಕರರ ವೈದ್ಯಕೀಯ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಸರ್ಕಾರಿ ಕೆಲಸ ದೊರಕುವುದು ತಂದೆ ತಾಯಿಯ ಪುಣ್ಯದ ಫಲ. ತಮಗೆ ದೊರೆತಿರುವ ಜವಾಬ್ದಾರಿಯುತ ಕೆಲಸವನ್ನು ಜನಸೇವೆಗಾಗಿ ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಹೇಳಿದರು.

Advertisement

ಅಧಿಕಾರಿಗಳು ಜನರೊಂದಿಗೆ ಸ್ನೇಹಮಯವಾಗಿ ವರ್ತಿಸಿ, ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕಿದೆ. ಇದೇ ರೀತಿ ಶಾಸಕರು, ಸಚಿವರು ಸಹ ಅಧಿಕಾರಿಗಳ ಜೊತೆ ಪ್ರೀತಿ, ನಂಬಿಕೆ, ಸೌಹಾರ್ದತೆಯಿಂದ ವರ್ತಿಸುವ ಮೂಲಕ ಜನರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉತ್ಕೃಷ್ಠ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ಇಲಾಖೆಗಳ 10 ಅಧಿಕಾರಿಗಳನ್ನು ಗುರುತಿಸಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಯೀದಾ ಆಫ್ರಿನ್ ಬಾನು ಎಸ್‌. ಬಳ್ಳಾರಿ, ಜಿಲ್ಲಾ ಪಂಚಾಯಿತಿ (ಅಭಿವೃದ್ಧಿ) ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದಾಮು ಭೀಮು ಚವ್ಹಾಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಹುಕ್ಕೇರಿ ತಹಶೀಲ್ದಾರ್‌, ದೊಡ್ಡಪ್ಪ ಹೂಗಾರ, ಬಿಮ್ಸ್‌ ಬೋಧಕ ರವಿ ಅಜೂರ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೇದಾರ ಎಂ.ಎ.ನದಾಫ, ಅಥಣಿ ತಾಲೂಕಾ ಪಂಚಾಯಿತಿ ಅಧೀಕ್ಷಕ ಉದಯಗೌಡ ಪಾಟೀಲ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೇದಾರ ಶಿವಾನಂದ ಖಾಡೆ, ಮಕ್ಕಳಗೇರಿ ಪಿಡಿಒ ನಾಗಪ್ಪ ಆಸೀಲಕರ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ರವಿ ಕರಿಲಿಂಗಣ್ಣವರ ಉಪಸ್ಥಿತರಿದ್ದರು. ಎಲ್‌.ಜಿ ಮೇತ್ರಿ ಪ್ರಾರ್ಥಿಸಿದರು, ಅಂಜನಾ ಮುರಗೋಡ ಹಾಗೂ ಚಂದ್ರಶೇಖರ ಕೋಲಕಾರ ನಿರೂಪಿಸಿದರು, ಅದೃಶ್ಯ ಹೈಬತ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next