Advertisement

Reservation: ಒಳಮೀಸಲು ನೀಡಲು ರಾಜ್ಯಗಳಿಗೆ ಅಧಿಕಾರವಿದೆಯಾ? 

09:50 PM Feb 06, 2024 | Team Udayavani |

ನವದೆಹಲಿ: ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯಡಿ, ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆಯನ್ನು; ಸರ್ವೋಚ್ಚ ನ್ಯಾಯಾಲಯದ 7 ಸದಸ್ಯರ ಪೀಠ ಆರಂಭಿಸಿದೆ. ಕರ್ನಾಟಕವೂ ಸೇರಿದಂತೆ ಇಡೀ ದೇಶದ ಮೇಲೆ ಪರಿಣಾಮ ಬೀರುವ ಅರ್ಜಿ ವಿಚಾರಣೆಯನ್ನು, ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ ಮಂಗಳವಾರದಿಂದ ಕೈಗೆತ್ತಿಕೊಂಡಿದೆ.

Advertisement

2020ರಲ್ಲಿ ಪಂಚಸದಸ್ಯರ ಪೀಠ, ಪ್ರಕರಣವನ್ನು ಸಪ್ತಸದಸ್ಯರ ಬೃಹತ್‌ ಪೀಠಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು. ಪಂಜಾಬ್‌ ಸರ್ಕಾರ, ತನ್ನ ಪರಿಶಿಷ್ಟ ಜಾತಿ-ಪಂಗಡಗಳ 2006ರ ಕಾಯ್ದೆಯಡಿ, ವಾಲ್ಮೀಕಿಗಳು ಮತ್ತು ಮಝಾಬಿ ಸಿಖ್ಖರಿಗೆ ಶೇ.50 ಒಳಮೀಸಲು ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಚಾರಣೆ ಶುರುವಾಗಿದೆ.

ಏನಿದು ಪ್ರಕರಣ?: ಪಂಜಾಬ್‌ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಕಾಯ್ದೆ 2006ರ ಅನ್ವಯ, ಪಂಜಾಬ್‌ ಸರ್ಕಾರ ವಾಲ್ಮೀಕಿ ಜನಾಂಗ ಮತ್ತು ಮಝಾಬಿ ಸಿಖ್ಖರಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.50 ಮೀಸಲಾತಿ ನೀಡಿತ್ತು. ಹಾಗೆಯೇ ಈ ವರ್ಗವನ್ನು ಉದ್ಯೋಗ ನೀಡುವಾಗ ಮೊದಲು ಪರಿಗಣಿಸಬೇಕೆಂದು ಹೇಳಿತ್ತು. ಇದರ ವಿರುದ್ಧ ಹಲವರು ಪಂಜಾಬ್‌ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಈ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಇದು ಅಸಾಂವಿಧಾನಿಕ, ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂ ಸುತ್ತದೆ. ಮಾತ್ರವಲ್ಲ 2004ರಲ್ಲಿ ಇ.ವಿ.ಚಿನ್ನಯ್ಯ ಮತ್ತು ಆಂಧ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು.

ಇದನ್ನು ಪ್ರಶ್ನಿಸಿ ಪಂಜಾಬ್‌ ಸರ್ಕಾರ, 2011ರಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಐವರು ಸದಸ್ಯರ ಸರ್ವೋಚ್ಚ ಪೀಠ, 7 ಸದಸ್ಯರ ವಿಸ್ತೃತಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿತ್ತು. “2004ರಲ್ಲಿ ಚಿನ್ನಯ್ಯ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂನ ಮೂವರು ಸದಸ್ಯರ ಪೀಠದ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ. ಅದನ್ನು ವಿಸ್ತೃತ ಪೀಠ ಪರಿಶೀಲಿಸಬೇಕಾದ ಅಗತ್ಯವಿದೆ’ ಪಂಚ ಸದಸ್ಯರ ಪೀಠ ಹೇಳಿತ್ತು.

ಮೀಸಲು ನಿಯಮವೇನಿದೆ?: ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಶೇ.22.5 ಹುದ್ದೆಗಳು ಪರಿಶಿಷ್ಟ ಜಾತಿಗೂ, ಶೇ.7.5 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೂ ಲಭ್ಯವಾಗಬೇಕೆಂದು ಪರಿಶಿಷ್ಟ ಜಾತಿ-ಪಂಗಡದ ನಿಯಮದಲ್ಲಿ ಹೇಳಲಾಗಿದೆ.

Advertisement

2004ರ ಸರ್ವೋಚ್ಚ ಪೀಠದ ತೀರ್ಪಿನಲ್ಲೇನಿದೆ?
ಸಂವಿಧಾನದ 341ನೇ ವಿಧಿಯಡಿ, ರಾಷ್ಟ್ರಪತಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯಡಿ ಸ್ಥಾನ ಪಡೆದಿರುವ ಜಾತಿಗಳನ್ನು, ಆ ಸ್ಥಾನದಿಂದ ಹೊರಗಿಡಲು ಕೇವಲ ಸಂಸತ್ತಿಗೆ ಅಧಿಕಾರವಿದೆ. ರಾಜ್ಯ ಸರ್ಕಾರಗಳಿಗೆ ಅಂತಹ ಅವಕಾಶವಿಲ್ಲ ಎಂದು 2004ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.

ಮಹತ್ವವೇನು?
-ಎಸ್‌ಸಿ-ಎಸ್‌ಎಸ್ಟಿ ಮೀಸಲಾತಿಯಡಿ ಒಳಮೀಸಲಾತಿ ನೀಡಲು ರಾಜ್ಯಗಳಿಗೆ ಅಧಿಕಾರವಿದೆಯಾ ಎಂಬುದರ ಪರಿಶೀಲನೆ
-ರಾಜ್ಯಗಳಿಗೆ ಅಧಿಕಾರವಿಲ್ಲ ಎಂಬ 2004 ಸರ್ವೋಚ್ಚ ಪೀಠದ ತೀರ್ಪಿನ ಮರುಪರಿಶೀಲನೆ
-ವಾಲ್ಮೀಕಿಗಳು, ಮಝಾಬಿಗಳಿಗೆ ಪಂಜಾಬ್‌ನಲ್ಲಿ ಶೇ.50 ಒಳಮೀಸಲು ನೀಡಿದ್ದ ಕಾಯ್ದೆಯೇ ಎಲ್ಲ ಬೆಳವಣಿಗೆಗೆ ಕಾರಣ

Advertisement

Udayavani is now on Telegram. Click here to join our channel and stay updated with the latest news.

Next