ಹೊಸರುಚಿ ತಯಾರಿಸುವ ಉತ್ಸಾಹ ಇರಬಹುದು, ಹೊಸದಾಗಿ ಫ್ಯಾಷನ್ ಮಾಡುವ/ ಸೀರೆ ಉಡುವ ಹುಮ್ಮಸ್ಸು ಇರಬಹುದು, ಹೊಸದೇನೋ ಪ್ರಯೋಗ ಮಾಡುವ ಸಂದರ್ಭವೂ ಆಗಿರಬಹುದು…ಆದರೆ, ಏನೋ ಮಾಡಲು ಹೋಗಿ ಮತ್ತೇನೋ ಆಗಿ, ತಮಾಷೆಗೋ, ನಗೆಗೆ ವಸ್ತುವೋ ಆಗಿಬಿಡುತ್ತದಲ್ಲ; ಅಂಥ ಸಂದರ್ಭಗಳಿಗೆ ಅಕ್ಷರ ರಂಗವಲ್ಲಿ- ಇನ್ನು ವಾರಕ್ಕೊಮ್ಮೆ. ನೀವೂ ಬರೆದು ಕಳುಹಿಸಿ…
ಬೆಲ್ಲಕ್ಕೆ ನೀರು ಹಾಕಿ ಒಲೆಯ ಮೇಲೆ ಕುದಿಯಲು ಬಿಟ್ಟು, ಕಾಯುತ್ತಾ ನಿಂತೆವು. ಆದರೆ ಎಷ್ಟು ಹೊತ್ತಾದರೂ ಕುದಿ ಬಾರದೆ ಬೇಸರವಾದ್ದರಿಂದ ಟಿವಿ ನೋಡಲು ಹೋದೆವು.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಪಿಜಿ ಒಂದರಲ್ಲಿ ಬದುಕಿಕೊಂಡಿದ್ದ ಕಾಲವದು. ರೂಮ್‌ಮೇಟ್ ಆಗಿದ್ದ ಆಂಧ್ರದ ಹುಡುಗಿಯೊಬ್ಬಳಿಗೆ ಕನ್ನಡ ಕಲಿಸುವ ಕಾರ್ಯಕ್ರಮ ಆಗಾಗ ನಡೆಯುತ್ತಿತ್ತು. ಹೀಗೆಯೇ ಒಂದು ಕನ್ನಡ ಕಲಿಕಾ ಸೆಷನ್‌ನಲ್ಲಿ, ತನ್ನದೊಂದು ಸಮಸ್ಯೆಯನ್ನು ನಮ್ಮ ಬಳಿ ಕನ್ನಡದಲ್ಲಿಯೇ ಹೇಳಿಕೊಂಡಳು. ತನಗೂ ಎಲ್ಲರಂತೆಯೇ ಸ್ಕರ್ಟ್‌ಗಳನ್ನು ಧರಿಸುವ ಆಸೆಯೆಂದೂ, ಆದರೆ ತನ್ನ ಕಾಲಿನ ಮೇಲಿರುವ ಕರಡಿ ಕೂದಲುಗಳು ತೊಂದರೆ ಕೊಡುತ್ತಿವೆಯೆಂದೂ, ಅಂಗಡಿ ಕ್ರೀಮುಗಳನ್ನು ಬಳಸಿದರೆ ಚರ್ಮಕ್ಕೆ ಅಲರ್ಜಿ ಆಗುತ್ತದೆಂದೂ ಅಲವತ್ತುಕೊಂಡಳು. ರೂಮಿನಲ್ಲಿದ್ದ ನಾವೇ ನಾಲ್ವರು, ಬೆಲ್ಲದ ಪಾಕ ತಯಾರಿಸಿ, ಅವಳ ಕಾಲುಗಳಿಗೆ ಬಳಿದು ರೋಮಮುಕ್ತಗೊಳಿಸುವ ಯೋಜನೆಯೊಂದನ್ನು ತಯಾರಿಸಿದೆವು. ಮಾರನೆಯ ದಿನ ನಮ್ಮ ಪಿಜಿ ಆಂಟಿ ಎಲ್ಲಿಗೋ ಹೋಗುವವರಿದ್ದರು. ಅವರು ರಾತ್ರಿ ಮರಳಿ ಬರುವುದರೊಳಗೆ ಇದನ್ನು ಕಾರ್ಯಗತಗೊಳಿಸಬೇಕಿತ್ತು.
ಸಂಜೆ ರೂಮಿಗೆ ಎಲ್ಲರೂ ಮರಳುತ್ತಿದ್ದಂತೆಯೇ ಅವಸರವಸರವಾಗಿ ಕಾರ್ಯಕ್ರಮಕ್ಕೆ ಸಿದ್ಧವಾದೆವು. ಸಮಸ್ಯೆಯೆಂದರೆ, ನಮಗ್ಯಾರಿಗೂ ಅದುವರೆಗೆ ಬೆಲ್ಲದ ಪಾಕ ಮಾಡಿ ಗೊತ್ತಿರಲಿಲ್ಲ. ಗಣೇಶ ಹಬ್ಬದ ಪಂಚಕಜ್ಜಾಯಕ್ಕೆ ಅಮ್ಮ ಬೆಲ್ಲದ ಪಾಕ ಮಾಡುವುದನ್ನು ನೋಡಿದ್ದ ನಾನೇ ಅವರೆಲ್ಲರಿಗೆ ಸೀನಿಯರ್! ಹಾಗಾಗಿ ನನ್ನ ನೇತೃತ್ವದಲ್ಲಿಯೇ ಯೋಜನೆ ಪ್ರಾರಂಭವಾಯಿತು. ಬೆಲ್ಲಕ್ಕೆ ನೀರು ಹಾಕಿ ಒಲೆಯ ಮೇಲೆ ಕುದಿಯಲು ಬಿಟ್ಟು, ಕಾಯುತ್ತಾ ನಿಂತೆವು. ಆದರೆ ಎಷ್ಟು ಹೊತ್ತಾದರೂ ಕುದಿ ಬಾರದೆ ಬೇಸರವಾದ್ದರಿಂದ ಟಿವಿ ನೋಡಲು ಹೋದೆವು. ಸುಮಾರು ಹೊತ್ತಿನ ಬಳಿಕ ಬೆಲ್ಲದ ಏರುಪಾಕದ ಪರಿಮಳ ಮೂಗಿಗೆ ಬಡಿಯುತ್ತಿದ್ದಂತೆಯೇ ಎಲ್ಲರಿಗೂ ಫಕ್ಕನೆ ನೆನಪಾಯಿತು. ಅಡುಗೆ ಮನೆಗೆ ದೌಡಾಯಿಸಿದರೆ ಬೆಲ್ಲದ ಪಾಕ ಗಟ್ಟಿಯಾಗಿ ಕೊತಕೊತ ಕುದಿಯುತ್ತಿದ್ದುದರ ಹೊರತು ಮತ್ತೇನೂ ಆದಂತೆ ಕಾಣಲಿಲ್ಲ. ಸ್ಟೌ ಆರಿಸಿ, ಮತ್ತೆ ಟಿವಿ ಮುಂದೆ ಕೂತೆವು, ಬಿಸಿ ಪಾಕ ಆರಬೇಕಲ್ಲ! ಮತ್ತೆ ಬೆಲ್ಲದ ಪಾಕ ನೆನಪಾಗುವಷ್ಟರಲ್ಲಿ ಒಂದು ತಾಸು ಕಳೆದಿತ್ತು. ಪಿಜಿ ಆಂಟಿ ಬರುವುದಕ್ಕೆ ಇನ್ನು ಸ್ವಲ್ಪವೇ ಹೊತ್ತು ಉಳಿದಿದ್ದರಿಂದ ಗಡಿಬಿಡಿಯಲ್ಲಿ ಪಾಕದ ಪಾತ್ರೆ ಹಿಡಿದು ಮೇಲಿನ ರೂಮಿಗೆ ಓಡಿದೆವು.
ಬೇಕಾದ ಉಳಿದೆಲ್ಲ ಸಲಕರಣೆಗಳನ್ನು ಸಿದ್ಧ ಮಾಡಿಕೊಂಡು, ಅವಳ ಕಾಲು ಹಿಡಿದು ಕೂತಿದ್ದೋದೇ ಬಂತು. ದರಿದ್ರ ಬೆಲ್ಲದ ಪಾಕಕ್ಕೆ ಅದೇನು ಮೋಹವೋ ಪಾತ್ರೆಯ ಮೇಲೆ! ಎಷ್ಟು ಒದ್ದಾಡಿದರೂ ಅದು ಪಾತ್ರೆಯನ್ನೂ ಬಿಡಲಿಲ್ಲ, ಜೊತೆಗಿದ್ದ ಸೌಟನ್ನೂ ಸಡಿಲಿಸಲಿಲ್ಲ. ಪಾತ್ರೆಯಿಂದ ಪಾಕ ಬಿಡಿಸಲು ಕೈಬಲವೊಂದೇ ಸಾಲದೆನಿಸಿ, ಪಾತ್ರೆಯನ್ನು ಕಾಲಲ್ಲಿ ಹಿಡಿದು ಸೌಟನ್ನು ಕೈಯಲ್ಲಿ ಜಗ್ಗಾಡಿದ್ದಾಯ್ತು. ಬ್ರಹ್ಮ ಜಿಗುಟು ಗೋಂದಿನಂತೆ ಗಟ್ಟಿಯಾಗಿ ಪಾತ್ರೆ, ಸೌಟುಗಳನ್ನು ಹಿಡಿದಿದ್ದ ಅದು ನಮ್ಮ ಬಾಹುಬಲಕ್ಕೆ ಸವಾಲೆಸೆಯುತ್ತಿತ್ತು. ಒಬ್ಬಳು ಪಾತ್ರೆಯನ್ನೂ ಇನ್ನೊಬ್ಬಳು ಸೌಟನ್ನೂ ಹಿಡಿದು ಸರ್ವಶಕ್ತಿಯನ್ನೂ ಪ್ರಯೋಗಿಸಿ ಎಳೆದಾಡಿದೆವು. ಊಹುಂ! ಪಾಕ ಕಮಕ್-ಕಿಮಕ್ ಎನ್ನಲಿಲ್ಲ. ಅವಳ ಕಾಲಿನ ಬಗ್ಗೆ ಈವರೆಗಿದ್ದ ಕರುಣೆಯೆಲ್ಲ ಮಾಯವಾಗಿ, ಕೋಪದಿಂದ ಪಾಕ ಬಿಡಿಸುವುದರ ಕಡೆಗೆ ಗಮನ ಕೇಂದ್ರೀಕರಿಸಿದೆವು. ಕಾಲಿನ ಮನೆ ಹಾಳಾಯ್ತು, ಈಗ ಆಂಟಿ ಬರುವುದರೊಳಗೆ ಮಾಡಿರುವ ಅವಾಂತರದ ತಿಪ್ಪೆ ಸಾರಿಸಬೇಕಲ್ಲ!
ಮುಂದಿನ ಕೆಲವು ನಿಮಿಷಗಳಲ್ಲಿ ಕೆಳಗಡೆ ಆಂಟಿಯ ಧ್ವನಿ ಕೇಳಿದಾಗಂತೂ ಎಲ್ಲರ ಎದೆಯಲ್ಲೂ ಗುಡುಗು-ಮಿಂಚು. ಮಾಡುವುದೇನು ಎಂಬುದು ತಿಳಿಯದೆ ಲಗುಬಗೆಯಲ್ಲಿ ನಮ್ಮಲ್ಲೊಬ್ಬಳು ಪಾತ್ರೆಯೊಂದಿಗೇ ಬಾತ್‌ರೂಮಿಗೆ ನುಗ್ಗಿದ್ದಳು. ಅಲ್ಲಾದರೂ ಎಷ್ಟೊತ್ತಿರಲು ಸಾಧ್ಯ? ಕಡೆಗೊಮ್ಮೆ ಹೊರಗೆ ಬರಲೇಬೇಕಲ್ಲ! ವಿಷಯ ತಿಳಿದು ಬೈಯ್ಯಬೇಕೊ ನಗಬೇಕೊ ತಿಳಿಯದ ಪಿಜಿ ಆಂಟಿ, ಪಾಕ ಗಟ್ಟಿಯಾದರೆ ನೀರು ಹಾಕಿ ಬಿಡಿಸಬಹುದು ಎಂಬ ಸರಳ ಸತ್ಯ ಮನವರಿಕೆ ಮಾಡಿಕೊಟ್ಟರು. ಹುಡುಗು ಬುದ್ಧಿ ನೆಗೆದುಬಿದ್ದಿ’ ಎಂಬ ಹಿರಿಯರ ಮಾತು ಅನುಭವದ್ದೇ ಇರಬೇಕು!
– ಅಲಕಾ ಕೆ.