Advertisement
ಹೆಸರು: “ರಿತೇಶ್ ನಂದಾ’, ವಯಸ್ಸು: 24, ವಿದ್ಯಾಭ್ಯಾಸ: ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್, ವೃತ್ತಿ: ಮುದ್ರಣ ಸಂಸ್ಥೆಯೊಂದರ ವ್ಯವಸ್ಥಾಪಕ, ಊರು: ತುಮಕೂರು, ವಾಸ: ಬೆಂಗಳೂರು. ಇದೇನಪ್ಪಾ ಕಾಣೆಯಾದವರ ಪ್ರಕಟಣೆ ಎಂದುಕೊಂಡಿರಾ? ಒಂದು ಲೆಕ್ಕದಲ್ಲಿ ಅದು ನಿಜವೇ. ಆದರೆ, ಇನ್ನೂ ಸರಿಯಾಗಿ ಹೇಳಬೇಕೆಂದರೆ ಇದು ಕಾಣೆಯಾಗುವವರ ಪ್ರಕಟಣೆ! ವರ್ಷಪೂರ್ತಿ ಕಂಪನಿ ಕೆಲಸ, ಫೋಟೋಗ್ರಫಿ ಕಾರ್ಯಾಗಾರ ಅಂತೆಲ್ಲಾ ಸೂಪರ್ ಬಿಝಿಯಾಗುವ ರಿತೇಶ್ ಒಂದಷ್ಟು ದಿನಗಳ ಕಾಲ ನಗರ ಜೀವನದಿಂದ ಕಾಣೆಯಾಗಲು ಬಿಡುವು ಮಾಡಿಕೊಳ್ಳುತ್ತಾರೆ. ಅವರು ಕಾಣೆಯಾಗಲು ಆರಿಸಿಕೊಂಡಿರುವ ಜಾಗ ಸಮುದ್ರ. ಅಂದಹಾಗೆ, ರಿತೇಶ್ ಒಬ್ಬ ಸರ್ಟಿಫೈಡ್ ಸ್ಕೂಬಾ ಡೈವರ್ ಮತ್ತು ಅಂಡರ್‌ವಾಟರ್ ಫೋಟೋಗ್ರಾಫರ್. ಜಗತ್ತಿನ ಪ್ರಖ್ಯಾತ ಡೈವಿಂಗ್ ಜಾಗಗಳಲ್ಲಿ ಡೈವ್ ಮಾಡಿರುವ ಇವರ ಕನಸು ಒಮ್ಮೆ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ನಲ್ಲಿ ಇಳಿಯಬೇಕೆಂಬುದು. ಇವರು ತೆಗೆದ ಛಾಯಾಚಿತ್ರಗಳು ಜಗತ್ತಿನ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಡುಬ್ಕಿ ಹಾಕುವುದರಲ್ಲೇ ಆಧ್ಯಾತ್ಮವನ್ನು ಕಂಡುಕೊಂಡಿರುವ ರಿತೇಶ್, ಜೋಶ್ ಜೊತೆ ತಮ್ಮ ಈ ರೋಮಾಂಚಕ ಹವ್ಯಾಸದ ಕುರಿತು ಹಂಚಿಕೊಂಡಿದ್ದಾರೆ.
ನನ್ನನ್ನು ತುಂಬಾ ಜನ ಸ್ಕೂಬಾ ಡೈವರ್ ಎಂದೇ ಗುರುತಿಸುತ್ತಾರೆ. ಆದರೆ, ಅದು ಸಂಪೂರ್ಣ ನಿಜ ಅಲ್ಲ. ಏಕೆಂದರೆ, ನಾನು ಸ್ಕೂಬಾ ಡೈವರ್ ಆಗಲು ಹೊರಟವನಲ್ಲ. ನಾನು ಒಬ್ಬ ಛಾಯಾಗ್ರಾಹಕ. ಮುಂಚಿನಿಂದಲೂ ಲ್ಯಾಂಡ್‌ಸ್ಕೇಪ್ ಫೋಟೋಗ್ರಫಿಯಲ್ಲಿ ಆಸಕ್ತಿ. ಭೂಮಿ ಮೇಲಿನ ಚಿತ್ರಗಳನ್ನು ಕ್ಯಾಮೆರಾ ಇದ್ದವರೆಲ್ಲರೂ ತೆಗೆಯುತ್ತಾರೆ. ಈ ಕಾರಣಕ್ಕೇ ಅದಕ್ಕೂ ಮಿಗಿಲಾದದ್ದು ಏನಾದರೂ ಮಾಡಬೇಕು ಅನ್ನಿಸಿತು. ಜೀವನದಲ್ಲಿ ಯಾವತ್ತೂ ಒಂದು ಹೆಜ್ಜೆ ಮುಂದಿಡಬೇಕು ಅನ್ನುತ್ತಾರಲ್ಲ, ಹಾಗೆ. ಈ ರೀತಿ ಅಂಡರ್‌ವಾಟರ್ ಫೋಟೋಗ್ರಫಿಯಲ್ಲಿ ನಾನು ತೊಡಗಿಕೊಂಡೆ. ಅದರಲ್ಲಿ ಪರಿಣತಿ ಸಾಧಿಸಲು ಸ್ಕೂಬಾ ಡೈವಿಂಗ್ ಕಲಿಯಲೇ ಬೇಕಿತ್ತು. ಹಾಗಾಗಿಯೇ ನಾನು ಡೈವಿಂಗ್ ಕಲಿತಿದ್ದು.
Related Articles
ಮೊತ್ತ ಮೊದಲು ನಾನು ಸ್ಕೂಬಾ ಡೈವಿಂಗ್ ಮಾಡಿದ್ದು ಮುಡೇìಶ್ವರದ ನೇತ್ರಾಣಿ ದ್ವೀಪದ ಬಳಿ. ಅದಾದ ಬಳಿಕ ನಾನು ಹಿಂತಿರುಗಿ ನೋಡಿದ್ದೇ ಇಲ್ಲ. ಅಷ್ಟರಮಟ್ಟಿಗೆ ಅಡಿಕ್ಟ್ ಆಗಿ ಹೋದೆ ಸ್ಕೂಬಾ ಡೈವಿಂಗಿಗೆ. ಆವಾಗ ನಾನಿನ್ನೂ ಪಿಯುಸಿ ವಿದ್ಯಾರ್ಥಿ. ಅದಾದ ಮೇಲಿಂದ ಮಾಲ್ಡೀವ್ಸ್, ಶ್ರೀಲಂಕಾ, ಅಂಡಮಾನ್, ಥಾಯ್ಲೆಂಡ್, ಇಂಡೋನೇಷ್ಯಾ ಮುಂತಾದ ಕಡೆಗಳಲ್ಲಿ ಡೈವ್ ಹೊಡೆದಿದ್ದೀನಿ. ಅವೆಲ್ಲದರ ಅನುಭವಗಳ ಕುರಿತು ಒಂದೇ ಮಾತಲ್ಲಿ ಹೇಳಬೇಕೆಂದರೆ “ಸ್ವರ್ಗಸದೃಶ’. ಸಹಪಾಠಿಗಳೆಲ್ಲಾ ಸಿನಿಮಾ, ಕಾಲೇಜ್ ಡೇ, ಸ್ಪರ್ಧೆ ಅಂತೆಲ್ಲಾ ಬಿಝಿಯಾಗಿದ್ದ ಸಮಯದಲ್ಲಿ ನಾನೊಬ್ಬ ಸ್ಕೂéಬಾ ಡೈವಿಂಗ್‌ನ ಹಿಂದೆ ಬಿದ್ದು ಅವರಿಗೆಲ್ಲಾ ವಿಶೇಷವಾಗಿ ಕಂಡಿದ್ದೆ.
Advertisement
ದೇವರು ರಚಿಸಿದ ಪೇಂಟಿಂಗ್‌ನ ಅರ್ಧಭಾಗ ಸಮುದ್ರದಡಿಯಿದೆ!ಸಮುದ್ರದಾಳದ ಪ್ರಪಂಚ ಬಹಳ ಕಲಾತ್ಮಕವಾದುದು. ಎಷ್ಟೋ ಸಲ ಅಂದುಕೊಳ್ಳುತ್ತೇನೆ ದೇವರು, ತಾನು ಬಿಡಿಸಿದ ಪೇಂಟಿಂಗ್‌ನ ಅರ್ಧವನ್ನು ಭೂಮಿ ಮೇಲೆ ಇಟ್ಟು ಉಳಿದರ್ಧವನ್ನು ಸಮುದ್ರದ ಕೆಳಗೆ ಬಚ್ಚಿಟ್ಟಿದ್ದಾನೆ ಅಂತ. ಭೂಮಿ ಮೇಲಿನ ದೇವರ ಸೃಷ್ಟಿಕ್ರಿಯೆಯೆಲ್ಲವೂ ಈಗ ಮುಂಚಿನಂತೆ ಉಳಿದಿಲ್ಲ ಎನ್ನುವುದನ್ನು ನಾವೆಲ್ಲರೂ ದುಃಖದಿಂದ ಒಪ್ಪಿಕೊಳ್ಳಲೇಬೇಕು. ನಾವು ಮನುಷ್ಯರು ನಮ್ಮ ಸ್ವಾರ್ಥಕ್ಕೆ, ನಮಗೆ ಬೇಕಾದ ಹಾಗೆ ದೇವರ ಸೃಷ್ಟಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಮೇಲಿನದಕ್ಕೆ ಹೋಲಿಸಿದರೆ ಸಮುದ್ರದಾಳದ ದೇವರ ಸೃಷ್ಟಿ ಹೆಚ್ಚಿನ ಬದಲಾವಣೆಗಳಿಲ್ಲದೆ ಉಳಿದುಕೊಂಡಿದೆ ಎನ್ನಬಹುದು. ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ಭೂಮಿ ಮೇಲೆ ಯಾವ ಯಾವ ಪ್ರಾಣಿಗಳಿವೆಯೋ ಆ ಪ್ರಾಣಿಗಳ ತದ್ರೂಪು ಸಮುದ್ರದಲ್ಲಿಯೂ ಇವೆ. ಹುಲಿ, ಸಿಂಹ, ಕುದುರೆ, ಝೀಬ್ರಾ, ಮುಳ್ಳುಹಂದಿ, ನವಿಲು ಇವೆಲ್ಲದರ ಒಂದೊಂದು ಕಾಪಿ, ಸಮುದ್ರದಲ್ಲಿವೆ. ಒಂಚೂರು ಮಾರ್ಪಾಡುಗಳೊಂದಿಗೆ. ಭಯಾನೇ ಆಗಲಿಲ್ಲ…
ಸಮುದ್ರದಲ್ಲಿ ಯಕಃಶ್ಚಿತ್ ಎನಿಸುವ ಚಿಕ್ಕಪುಟ್ಟ ಜೀವಿಗಳೇ ಮಾರಣಾಂತಿಕವಾದವು ಎಂಬ ಮಾತೊಂದಿದೆ. ಆದರೆ, ಯಾವ ಜೀವಿಯೂ ತಾವಾಗಿಯೇ ದಾಳಿ ಮಾಡುವುದಿಲ್ಲ. ಹೇಗೆ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲವೋ ಹಾಗೆ. ಆದರೆ, ಸ್ಕೂಬಾ ಡೈವ್ ಮಾಡುವಾಗ ನಾನು ನಿಯಮಗಳನ್ನು ಮೀರುತ್ತಿರಲಿಲ್ಲ. ಹೀಗಾಗಿಯೇ ನನಗೆ ಭಯ ಆಗಲೇ ಇಲ್ಲ. ಅಲ್ಲಿ ಡೈವರ್‌ಗಳು ಕಡ್ಡಾಯವಾಗಿ ಫಾಲೋ ಮಾಡುವ ಮೊದಲ ನಿಯಮ “ಏನನ್ನೂ ಮುಟ್ಟದಿರುವುದು’. ಸಮುದ್ರದಾಳದ ಪ್ರಪಂಚದ ಬಗ್ಗೆ ನಾವು ತಿಳಿದಿರುವುದು ಅತ್ಯಲ್ಪ. ಏನೋ ಸುಂದರವಾಗಿದೆಯಲ್ಲ, ಮುದ್ದಾಗಿಯೆಲ್ಲ ಎಂದು ಮುಟ್ಟಲು ಹೋದರೆ ಅಪಾಯ ಎಳೆದುಕೊಂಡಂತೆ. ಅವುಗಳನ್ನು ಅವುಗಳ ಪಾಡಿಗೆ ಬಿಡುವುದು ಒಳ್ಳೆಯದು. ನ್ಯಾಷನಲ್ ಜಿಯೋಗ್ರಫಿ ಎಫೆಕ್ಟ್
ಮನೆಯಲ್ಲಿ ನ್ಯಾಷನಲ್ ಜಿಯೋಗ್ರಫಿ ಚಾನೆಲ್‌ನ ಪ್ರೋಗ್ರಾಮುಗಳಲ್ಲಿ ಸಮುದ್ರದಾಳದ ದೃಶ್ಯಾವಳಿಗಳನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಅದೇ ನನಗೆ ಅಂಡರ್‌ವಾಟರ್ ಫೋಟೋಗ್ರಫಿ ಮಾಡಲು ಸ್ಫೂರ್ತಿಯಾಗಿದ್ದು. ಶಾರ್ಕ್ ಜೊತೆ ಈಜು!
ಶ್ರೀಲಂಕಾದ ಡೈವಿಂಗ್ ಲೊಕೇಶನ್ನುಗಳಲ್ಲಿ ಡೈವ್ ಹೊಡೆಯುವ ಕನಸು ತುಂಬಾ ಹಿಂದಿನದು. ಕಡೆಗೂ ನನ್ನ ಕನಸು ಸಾಕಾರಗೊಂಡಿತ್ತು. ಶ್ರೀಲಂಕಾದ ಪಿಜನ್ ದ್ವೀಪದಲ್ಲಿ ನಾನಿದ್ದೆ. ತರಬೇತುದಾರರಲ್ಲಿ ನಾನು ನನ್ನ ವರ್ಷಗಳ ಆಸೆಯೊಂದನ್ನು ಹೇಳಿಕೊಂಡೆ. ಅವರು ನಗುತ್ತಲೇ ಆಯ್ತಪ್ಪಾ ಎಂದು ಒಪ್ಪಿಕೊಂಡರು. ಅದೇನಪ್ಪಾ ಅಂಥಾ ದೊಡ್ಡ ಆಸೆ ಎಂದಿರಾ? ಚಿಕ್ಕಂದಿನಿಂದಲೂ ನನಗೆ ಸಮುದ್ರದಲ್ಲಿ ಸ್ವತ್ಛಂದವಾಗಿ ಈಜಾಡೋ ಶಾರ್ಕ್ ನೋಡಬೇಕೆಂಬ ಆಸೆ. ಅದಕ್ಕೇ ನಾನು ತರಬೇತುದಾರರ ಬಳಿ “ಒಂದೇ ಒಂದು ಶಾರ್ಕ್ ತೋರಿಸಿ’ ಎಂದು ಕೇಳಿಕೊಂಡಿದ್ದು. ಅದರಂತೆ ನನ್ನ ಕೋರಿಕೆಯನ್ನು ಮನ್ನಿಸಿದ ತರಬೇತುದಾರರು ನನ್ನನ್ನು ಸಮುದ್ರದಾಳದ ಒಂದು ಜಾಗಕ್ಕೆ ಕರೆದೊಯ್ದರು. ಅಲ್ಲಿ ನನಗೆ ಯಾವ ವಿಶೇಷವೂ ಕಾಣಲಿಲ್ಲ. ನಾನು ಬಹಳಷ್ಟು ಕಡೆಗಳಲ್ಲಿ ನೋಡಿದ್ದ ಸಮುದ್ರದಾಳದ ದೃಶ್ಯವೇ ನನ್ನ ಕಣ್ಣ ಮುಂದಿತ್ತು. ಅಷ್ಟರಲ್ಲೇ ಮುಂದೆ ಮೀನುಗಳ ದಂಡೊಂದು ನಾನಿದ್ದಲ್ಲಿಗೇ ಬಂತು. ಶಾರ್ಕ್ ಮೀನುಗಳ ದಂಡು! ಕಾಲ ಒಂದು ಕ್ಷಣ ನಿಂತು ಹೋಗಿ, ಜಗತ್ತು ಸ್ಲೋಮೋಷನ್ನಿನಲ್ಲಿ ಮುಂದುವರಿಯುತ್ತಿದೆ ಎಂದೆನಿಸಿತು. ನಾನು ಒಂದೇ ಒಂದು ಶಾರ್ಕ್ ಕಂಡರೂ ಸಾಕು ಅಂತಿದ್ದೆ. ಕೆಲವೇ ಸೆಕೆಂಡುಗಳಲ್ಲಿ ನಾನು ನೂರಾರು ಶಾರ್ಕ್‌ಗಳಿಂದ ಸುತ್ತುವರಿದಿದ್ದೆ! ಕಡು ನೀಲಿ ನೀರಿನಲ್ಲಿ ತಿಳಿ ಕಪ್ಪು ಮತ್ತು ಬಿಳಿಯ ಶಾರ್ಕ್‌ಗಳ ಸನಿಹದಲ್ಲೇ ನಾನು ತೇಲುತ್ತಿದ್ದೆ. ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣಗಳವು! ಹರ್ಷವರ್ಧನ್ ಸುಳ್ಯ