Advertisement

ಇದು ನಿಮಗೆ ಇಷ್ಟವಿಲ್ಲವೇ? “ನಗುವಾಗ ವಸಡು ತುಂಬಾ ಕಾಣುತ್ತಿದೆಯೇ? 

06:15 AM Apr 22, 2018 | |

ಕೆಲವರು ನಗುವಾಗ ವಸಡು ಕಾಣುವುದೇ ಇಲ್ಲ. ಮತ್ತೆ ಕೆಲವರು ನಗುವಾಗ ತುಂಬಾ ವಸಡು ಕಾಣುವುದು. ಎಷ್ಟು  ವಸಡು ಕಂಡರೆ ಅದೊಂದು ಉತ್ತಮ, ಸಹಜ ನಗು, ಅದೊಂದು ಮುಖದ ಚಂದಕ್ಕೆ ಕಳೆ ಕೊಡಬಹುದು? ಈ “”ವಸಡು ನಗು” (GUMMY SMILE) ಸರಿ ಮಾಡಿಸುವ ಅಗತ್ಯವಿದೆಯೆ? ಈ ವಸಡು ನಗುವಿಗೆ ಕಾರಣಗಳೇನು? ಚಿಕಿತ್ಸೆಯೇನು?

Advertisement

ನಗುವು ಒಂದು ಮನುಷ್ಯನ ಭಾವನೆಗಳನ್ನು ಪ್ರತಿಬಿಂಬಿಸುವ, ಹಲ್ಲು, ವಸಡು ಮತ್ತು ತುಟಿಗಳ ಒಟ್ಟಿನ ಕಾರ್ಯವೈಖರಿಯ ಚಳಕ ಎನ್ನಬಹುದು. ಚಂದದ ನಗುವಿಗೆ ಇತ್ತೀಚೆಗೆ ಪ್ರಾಮುಖ್ಯತೆ ಬಂದಿದ್ದಲ್ಲ, ಅನಾದಿಕಾಲದಿಂದಲೂ ಸುಂದರ ನಗುವಿಗೆ ಏನೆಲ್ಲಾ ಮಾಡಬಹುದು ಎಂದು ಚಿಕಿತ್ಸೆಯನ್ನು ಕಂಡು ಹಿಡಿದಿದ್ದಾರೆ.

ಸುಂದರ ನಗು – ವೈಜ್ಞಾನಿಕವಾಗಿ, ಹೇಳುವುದಾದರೆ, ಇಂತಹ ನಗುವಿಗೆ, ಯಾವುದರ ಒಟ್ಟುಗೂಡುವಿಕೆ ಅಗತ್ಯ. ಮೊದಲೇ ಹೇಳಿದ ಹಾಗೆ, ಹಲ್ಲುಗಳು ಸರಿಯಾಗಿ ಕ್ರಮದಲ್ಲಿ ನಗುವಾಗ ಕಾಣುವುದು, ವಸಡು ಅತಿಯಾಗಿ ಕಾಣದೆ, ಎದುರಿನ ಮೇಲಿನ ಹಲ್ಲಿನ ಸ್ವಲ್ಪವೇ ವಸಡು ಕಾಣುವುದು. ಎದುರಿನ ಹಲ್ಲಿನ ಪಂಕ್ತಿಯ ಮೊದಲ ಬಾಚಿ ಹಲ್ಲಿನ ಮತ್ತು ಕೋರೆ ಹಲ್ಲಿನ ವಸಡು ಒಂದೇ ಅಂತರದಲ್ಲಿದ್ದು, ಎರಡನೇ ಬಾಚು ಹಲ್ಲಿನ ಅಂತರ ಇವೆರಡರ ಒಂದು ಮಿಲಿಮೀಟರ್‌ನಷ್ಟು ಕಡಿಮೆಯಿರುವುದು. ಹೀಗೆ ಸ್ವಲ್ಪ ಅಂತರದಲ್ಲಿ ಹೆಚ್ಚು ಕಡಿಮೆಯಿರುವ ವಸಡು ನಮ್ಮ ತುಟಿಯ ಪರಿಮಿತಿ/ಗಡಿಗೆ ಸರಿಯಾಗಿದ್ದರೆ, ಆ ನಗು ಸುಂದರವಾಗಿ ಕಾಣುವುದು.

ನಗುವಾಗ ಅತಿಯಾದ ವಸಡು ಕಾಣುವುದು, ಅಥವಾ ವಸಡಿನ ನಗು (GUMMY SMILE), ನಲ್ಲಿ ಮೇಲಿನ ವಸಡು ನಗುವಾಗ ಅತಿಯಾಗಿ ಕಾಣುವುದಾಗಿರುತ್ತದೆ. ವಸಡು ಮೂರು ಮಿ.ಮೀ.ಗಳಿಗಿಂತ ಜಾಸ್ತಿಯಾಗಿ ನಗುವಾಗ ಕಂಡರೆ, ಅಷ್ಟೊಂದು ಚಂದ ಕಾಣುವುದಿಲ್ಲ. ಸಾಧಾರಣ 10% ಜನರಲ್ಲಿ ಇಂತಹ ವಸಡು ನಗು ಕಾಣಸಿಗುವುದು ಮತ್ತು ಸಾಧಾರಣ ಹೆಂಗಸರಲ್ಲಿ ಹೆಚ್ಚಾಗಿ ಕಾಣುವುದು ಕೂಡ. ಪ್ರಾಯ ಆದ ಹಾಗೇ, ನಿಮ್ಮ ತುಟಿಯ ಕಾರ್ಯಕ್ಕೆ ಎಡೆ ಮಾಡಿ ಕೂಡುವ ಮಾಂಸ ಖಂಡಗಳು ಸ್ವಲ್ಪ, ಸಡಿಲವಾಗುವುದರಿಂದ ಇಂತಹ ವಸಡು ನಗು ಕ್ರಮೇಣ ಕಡಿಮೆಯಾಗುವುದು.

ಇಂತಹ ವಸಡಿನ ನಗುವಿಗೆ ಕಾರಣಗಳೇನು?
ವಸಡು ಊತ ಕಾಣಿಸಿಕೊಂಡಾಗ (ಹಿಗ್ಗಿ ಕೊಂಡಾಗ) ವಸಡು ರೋಗ ಅಥವಾ ರಕ್ತದೊತ್ತಡ/ಮೂಛೆì ಕಾಯಿಲೆಗೆ ತೆಗೆದುಕೊಳ್ಳುವ ಕೆಲವು ಮಾತ್ರೆಗಳಿಂದ ವಸಡು ಹಿಗ್ಗಿ, ಹಲ್ಲನ್ನು ಆವರಿಸಿಕೊಳ್ಳುವುದು. ಇದರಿಂದಾಗಿ, ಹಲ್ಲು ಸ್ವಲ್ಪ ಮಾತ್ರವೇ ಕಂಡು ವಸಡು ಜಾಸ್ತಿ ಕಾಣುವುದು. ಇಂತಹ ಸ್ಥಿತಿಗೆ, ವಸಡು ಶಸ್ತ್ರಚಿಕಿತ್ಸೆ ಮಾಡಿ, ಹಲ್ಲಿನ ಸುತ್ತವಿರುವ ವಸಡನ್ನು ತೆಗೆದಾಗ, ಪುನಃ ನಗು ಸಹಜ ಸ್ಥಿತಿಗೆ ಬರುವುದು.

Advertisement

ಹಲ್ಲು ಹುಟ್ಟುವುದು ಮತ್ತು ಮೇಲಿನ ಹಲ್ಲು ಕೆಳಗಿನ ಹಲ್ಲುಗಳಿಗೆ ತಾಗಿ, ಒಂದಕ್ಕೊಂದು ಸರಿಯಾಗಿ ನಿಂತ ನಂತರ ನಮ್ಮ ವಸಡು ಸ್ವಲ್ಪ ಮಟ್ಟಿಗೆ, ಮೇಲೆ ಹೋಗುವುದು. ಇದು ಸಹಜ ಪ್ರಕ್ರಿಯೆ. ಆದರೆ ಕೆಲವರಲ್ಲಿ, ಹಲ್ಲು ಹುಟ್ಟಿ, ಕ್ರಮೇಣ, ಕೆಳಗಿನ ಹಲ್ಲುಗಳಿಗೆ ತಾಗಿದ ನಂತರವೂ, ವಸಡು ಮೇಲೆ ಹೋಗದೆ, ಹಲ್ಲನ್ನು ಆವರಿಸಿರುತ್ತದೆ. ಇದರಿಂದ ಹಲ್ಲು ಸ್ವಲ್ಪವೇ ಕಂಡು, ವಸಡು ಅತಿಯಾಗಿ ಕಾಣುವುದು.

ಕೆಲವರಲ್ಲಿ, ಬೆಳವಣಿಗೆ ಸಮಯದಲ್ಲಿ ಮೇಲಿನ ಮತ್ತು ಕೆಳಗಿನ ದವಡೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಸಮಯದಲ್ಲಿ ಮೇಲಿನ ದವಡೆಯು ಸ್ವಲ್ಪ  ಅತಿಯಾಗಿ/ಉದ್ದವಾಗಿ ಬೆಳೆದು, ವಸಡು ತುಂಬಾ ಕಾಣುವುದು, ಇದನ್ನು ದವಡೆ ಶಸ್ತ್ರಚಿಕಿತ್ಸೆಯ ಮೂಲಕ  (ORTHOGNATHIC SURGERY)ಸರಿಪಡಿಸಬಹುದು.

ಮತ್ತೆ ಕೆಲವರಲ್ಲಿ ಮೇಲಿನ ತುಟಿಯು ಸಣ್ಣದಾಗಿರುವುದರಿಂದ ಅಲ್ಲದೇ, ಮೇಲಿನ ತುಟಿಯ ಕಾರ್ಯ ನಿರ್ವಹಿಸುವ ಮಾಂಸಖಂಡಗಳು ತುಂಬಾ ಸಕ್ರಿಯವಾಗಿರುವುದರಿಂದ ವಸಡು ನಗುವಾಗ ತುಂಬಾ ಕಾಣುವುದು. ಇಂತಹ ತುಟಿಗಳ ಸ್ಥಿತಿಗೆ, ಬೇರೆ ಬೇರೆ ತರಹದ ಚಿಕಿತ್ಸೆಗಳು ಲಭ್ಯ. ಇತ್ತೀಚೆಗೆ ಚಾಲ್ತಿಯಲ್ಲಿರುವ ಬೋಟ್ಯುಲಿನಮ್‌ ಟೊಕ್ಸೆನ್‌, ಇಂಜೆಕ್ಷನ್‌ (BOTULINUM TAXIN) ಕೊಡುವುದರಿಂದ ಮತ್ತು ತುಟಿಯ ಸ್ಥಾನವನ್ನು ಸರಿ ಮಾಡುವ ( LIP REPOSITIONING) ಶಸ್ತ್ರಚಿಕಿತ್ಸೆಯನ್ನು ಮಾಡಿ ವಸಡು ಕಡಿಮೆ ಕಾಣುವ ಹಾಗೆ ಮಾಡುವರು. ಈ ಚಿಕಿತ್ಸೆಯಲ್ಲಿ ವಸಡು ಮತ್ತು ತುಟಿಯ ಮಧ್ಯೆ ಸ್ವಲ್ಪ ಮಾಂಸವನ್ನು  ತೆಗೆದು, ಈ ಮಾಂಸ ತೆಗೆದ ಜಾಗವನ್ನು ಹೊಲಿದು, ತುಟಿಯು ಹೊಸ ಜಾಗದಲ್ಲಿ ನಿಲ್ಲುವ ಹಾಗೆ ಮಾಡಬಹುದು.

ಹೀಗೆ “”ವಸಡು ನಗು”ವಿನಿಂದ ಮುಕ್ತಿ ಪಡೆಯಲು ನಿಮ್ಮ ದಂತ ವೈದ್ಯರನ್ನು ಸಂದರ್ಶಿಸಿ, ಇದಕ್ಕೆ ಸರಿಯಾದ ಕಾರಣವೇನು ಎಂದು ತಿಳಿದು, ಸೂಕ್ತ ಚಿಕಿತ್ಸೆ ಮಾಡಿಕೊಂಡರೆ ನಿಮ್ಮ ನಗುವು ಸುಂದರವಾಗುವುದು.

– ಡಾ| ಜಿ. ಸುಬ್ರಾಯ ಭಟ್‌ ,
ಅಸೋಸಿಯೇಟ್‌ ಡೀನ್‌ ಮತ್ತು ಪ್ರೊಫೆಸರ್‌, 
ಪೆರಿಯೊಡಾಂಟಿಕ್ಸ್‌  ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next