Advertisement

ಯೋಗ ವ್ಯಾಪಾರವಾಗದಂತೆ ನೋಡಿಕೊಳ್ಳಿ:ಡಾ|ಈಶ್ವರ

12:20 PM Feb 15, 2021 | Team Udayavani |

ಕಲಬುರಗಿ: ಮನುಷ್ಯನ ದೇಹ ಹಾಗೂ ಮನಸ್ಸು ಎರಡು ಒಂದರ ಮಾತನ್ನು ಒಂದು ಕೇಳುವುದಿಲ್ಲ. ಅವೆರಡನ್ನು ಒಂದುಗೂಡಿಸಿ ಸಮಸ್ಥಿತಿಗೆ ತಂದು ಆರೋಗ್ಯ ಪೂರ್ಣ ಜೀವನ ನಡೆಸಬೇಕಾದರೆ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕೆಂದು ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನಿರ್ದೇಶಕ ಡಾ| ಈಶ್ವರ ವಿ. ಬಸವರೆಡ್ಡಿ ಹೇಳಿದರು.

Advertisement

ನಗರ ಹೊರವಲಯದ ಸಿರನೂರ ಸಮೀಪದ ಭಾರತೀಯ ವಿದ್ಯಾಕೇಂದ್ರದಲ್ಲಿ ರವಿವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ವಿವೇಕ ಜಾಗೃತ ಯೋಗ ವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯೋಗ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಆಧ್ಯಾತ್ಮ ಅನುಸರಿಸುತ್ತಲೇ ಯೋಗಾಭ್ಯಾಸ ಮಾಡಬೇಕು. ಇಲ್ಲವಾದಲ್ಲಿ ಯೋಗ ಸಹ ಕೇವಲ ವ್ಯಾಪಾರವಾಗುತ್ತದೆ. ವ್ಯಾಪಾರವೆಂದರೆ ಲಾಭವೂ ಆಗಬಹುದು, ನಷ್ಟವೂ ಆಗಬಹುದು ಎಂಬುದನ್ನು ನೆನಪಿಟ್ಟಿಕೊಳ್ಳಿ ಎಂದು ಎಚ್ಚರಿಸಿದ ಅವರು, ಯೋಗಾಭ್ಯಾಸವನ್ನು ವೈಜ್ಞಾನಿಕವಾಗಿ ಅರಿತು, ತಂತ್ರಗಳನ್ನು ಬಳಸಿಕೊಂಡು ಅನುಷ್ಠಾನ ಮಾಡಿಕೊಂಡಾಗ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ವಿಶ್ವ ಯೋಗ ದಿನಾಚರಣೆ ಪ್ರಸ್ತಾವವನ್ನು ಪ್ರಧಾನಿ ಮೋದಿ ಜಗತ್ತಿನ ಮುಂದಿಟ್ಟಾಗ, 193 ರಾಷ್ಟ್ರಗಳ ಪೈಕಿ 177 ದೇಶಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದವು. ಅಂದರೆ, ಈಗಾಗಲೇ ಯೋಗದ ಮಹತ್ವ ಪ್ರಪಂಚಾದ್ಯಂತ ಪಸರಿಸಿದೆ ಎಂದರ್ಥ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ವತಿಯಿಂದ ವಿಶೇಷವಾದ ಆ್ಯಪ್‌ ಸಿದ್ಧಪಡಿಸಿದ್ದೇವೆ. ಪ್ರಧಾನಿ ಆಶಯದಂತೆ ನಮ್ಮ ಸಂಸ್ಥೆ ನೀಡಿದ ಯೋಗ ಪ್ರಸ್ತಾವಗಳನ್ನು ಇಲ್ಲಿಯವರೆಗೆ ವಿಶ್ವದ 27 ಕೋಟಿ ಜನರು ಒಪ್ಪಿಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ 200 ಕೋಟಿಗೂ ಅಧಿಕ ಜನರನ್ನು ತಲುಪುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಯೋಗ ಶಿಕ್ಷಣ ನೀಡುವ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಕೇವಲ ಒಂದು ಪದವಿ, ಪ್ರಮಾಣ ಪತ್ರಕ್ಕಾಗಿ ಮಾತ್ರ ಶಿಕ್ಷಣ ನೀಡಿದರೆ
ಅದರಿಂದ ಯೋಗಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಶಿಸ್ತು ಹಾಗೂ ಪರಿಣಾಮಕಾರಿ ಜೀವನಶೈಲಿಗಾಗಿ ಯೋಗ ಕಲಿಸಬೇಕೆಂದು ಕರೆ ನೀಡಿದರು.

Advertisement

ಆಹಾರ ಪದ್ಧತಿ, ಜೀವನ ಶೈಲಿ ಉತ್ತಮವಾಗಿರದಿದ್ದರೆ ಯಾವ ಯೋಗವೂ ಪ್ರಯೋಜನಕಾರಿ ಅಲ್ಲ. ಜೀವನ ಶೈಲಿಯೇ ಸರಿ ಇಲ್ಲದಿದ್ದವರಲ್ಲಿ ಯೋಗ ವ್ಯರ್ಥವಾಗುತ್ತದೆ. ಬರೀ ಪ್ರಮಾಣಪತ್ರಕ್ಕಾಗಿ ಯೋಗ ಹೇಳಿಕೊಟ್ಟರೆ, ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಯಾವ ಉದ್ದೇಶಕ್ಕೆ ಯೋಗ-ಧ್ಯಾನ ಕ್ರಿಯೆಗಳನ್ನು ಕಂಡುಕೊಂಡರೋ ಅದೇ ಮರೆಯಾಗುತ್ತದೆ ಎಂದೂ ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ದಯಾನಂದ ಅಗಸರ, ಪುಣೆಯ ಲೋನವಾಲಾ ಯೋಗ ಕೇಂದ್ರದ ನಿರ್ದೇಶಕ ಡಾ| ಮನ್ಮಥ ಗೋರಾಟೆ, ಯೋಗ ಯೂನಿವರ್ಸಿಟಿ ಆಫ್‌ ದಿ ಅಮೆರಿಕಾಸ್‌ನ ಕುಲಪತಿ ಡಾ| ಯೋಗಿ ದೇವರಾಜ, ಪತಂಜಲಿ ಯೋಗ ವಿದ್ಯಾಪೀಠದ ರಾಜ್ಯಾಧ್ಯಕ್ಷ ಅಧ್ಯಕ್ಷ ಭವರಲಾಲ್‌ ಆರ್ಯ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಉಪವಲಯ ಮುಖ್ಯಸ್ಥೆ ಬಿ.ಕೆ.ವಿಜಯಾ ಬೆಹೆನ್‌ ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಂ.ಎಸ್‌. ಪಸೋಡಿ, ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್‌ ಕಾಲೇಜಿನ ಉಪನ್ಯಾಸಕಿ ಡಾ| ನಿರ್ಮಲಾ ಕೆಳಮನಿ, ವಿವೇಕ ಜಾಗೃತ ಯೋಗ ವಿದ್ಯಾಪೀಠದ ಜಿಲ್ಲಾಧ್ಯಕ್ಷೆ ಡಾ| ಮಾಧುರಿ ಬಿರಾದಾರ, ಯೋಗ ಶಿಕ್ಷಕ ಡಾ| ಚಂದ್ರಕಾಂತ ಬಿ. ಬಿರಾದಾರ ಪಾಲ್ಗೊಂಡಿದ್ದರು. ಬೀದರ್‌ ಜಿಲ್ಲೆಯ ಹುಮನಾಬಾದ್‌ನ ರಾಷ್ಟ್ರೀಯ ಯೋಗ ಪಟುಗಳಾದ ಆನಂದ್‌, ಮಹೇಶ್‌ ಹಾಗೂ ತಂಡದ ವಿದ್ಯಾರ್ಥಿಗಳು ನೀಡಿದ ಯೋಗಾಸನ ಪ್ರದರ್ಶನ ಗಮನ ಸೆಳೆಯಿತು.

ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯು ದೇಶಗಳಲ್ಲಿ ಯೋಗ ವೆಲ್‌ನೆಸ್‌ ಕೇಂದ್ರಗಳನ್ನು ನಡೆಸುತ್ತಿದೆ. ಜತೆಗೆ ಚೀನಾದಲ್ಲಿ “ಚೀನಾ-ಇಂಡಿಯನ್‌ ಯೋಗ ಸೆಂಟರ್‌’ ಕೂಡ ನಡೆಯುತ್ತಿದೆ. ಇದು ಆಡಳಿತಾತ್ಮಕವಾಗಿ ವಿವಾದ ಹೊಂದಿರುವ ರಾಷ್ಟ್ರಗಳಲ್ಲೂ ಭಾರತೀಯರ ಯೋಗಕ್ಕೆ ಪ್ರಾಧಾನ್ಯತೆ ಸಿಗುತ್ತಿದೆ ಎಂಬುವುದಕ್ಕೆ ನಿರ್ದಶನ.
ಡಾ| ಈಶ್ವರ ಬಸವರೆಡ್ಡಿ,
ನಿರ್ದೇಶಕರು, ಮೊರಾರ್ಜಿ ದೇಸಾಯಿ
ರಾಷ್ಟ್ರೀಯ ಯೋಗ ಕೇಂದ್ರ, ದೆಹಲಿ

ಮಕ್ಕಳ ತಾತ್ಕಾಲಿಕ ಸಾಧನೆಗಳನ್ನು ಪಾಲಕರು ಪರಿಗಣಿಸಿದೇ ಅವರ ವ್ಯಕ್ತಿತ್ವದಲ್ಲಿ ಪೂರ್ಣ ಪ್ರಮಾಣದ ವಿಕಸನದತ್ತ ಗಮನ ಹರಿಸಬೇಕು. ಇಂದಿನ ಬಹುತೇಕ
ಪಾಲಕರು ಮಕ್ಕಳ ಸಾಧನೆಗಳನ್ನು ಕಂಡು ಜಗತ್ತೇ ಜಯಸಿದಂತೆ ಭಾವಿಸುತ್ತಾರೆ. ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುತ್ತಾರೆ. ಆದರೆ, ಸಣ್ಣ-ಸಣ್ಣ ಸಾಧನೆಗಳ ಭರದಲ್ಲಿ ಮಕ್ಕಳ ಪೂರ್ಣ ವಿಕಾಸಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ.
ಬಸವರಾಜ ಪಾಟೀಲ ಸೇಡಂ, ಅಧ್ಯಕ್ಷ,
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ,
ಕೃಷಿ ಹಾಗೂ ಸಾಂಸ್ಕೃತಿಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next