Advertisement

ಹಾಲಿ ಸದಸ್ಯರಿಗೆ ಅವಕಾಶದ್ದೇ ಚಿಂತೆ

11:46 AM May 09, 2019 | Team Udayavani |

ಕಲಘಟಗಿ: ಪಟ್ಟಣ ಪಂಚಾಯತಿಯ ಚುನಾವಣೆ ಬಿಸಿ ಏರುತ್ತಲಿದ್ದು, ಹಾಲಿ ಸದಸ್ಯರುಗಳಿಗೆ ವಾರ್ಡ್‌ ಮರುವಿಂಗಡನೆ ಹಾಗೂ ಮೀಸಲಾತಿಯಿಂದ ಅವಕಾಶ ವಂಚಿತರಾಗುವ ಚಿಂತೆ ಕಾಡುತ್ತಲಿದೆ.

Advertisement

2016ರ ಕಲಘಟಗಿ ಪಪಂ ವಾರ್ಡ್‌ ಪುನರ್‌ ವಿಂಗಡನೆಯಿಂದ 13 ವಾರ್ಡ್‌ಗಳು ಈಗ 17ಕ್ಕೆ ಏರಿಕೆಯಾಗಿದೆ. ಇದರಿಂದ ಕ್ಷೇತ್ರಗಳ ಗಡಿ ಬದಲಾಗಿದ್ದು ಮತದಾರರು ಬೇರೆ ಬೇರೆ ವಾರ್ಡ್‌ಗಳಿಗೆ ಹಂಚಿ ಹೋಗಿದ್ದಾರೆ. ಇದರಿಂದ ಹಾಗೂ ನೂತನ ಮೀಸಲಾತಿಯಿಂದ ಹಾಲಿ ಸದಸ್ಯರಿಗೆ ತಮ್ಮ ವಾರ್ಡ್‌ಗಳಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ದೊರಕದೇ ಪರಿತಪಿಸುವಂತಾಗಿದೆ.

ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕಲಘಟಗಿ ವಿಧಾನಸಭಾ ಕ್ಷೇತ್ರವು 2018ರ ಚುನಾವಣೆಯಲ್ಲಿ ಸ್ವಾಭಿಮಾನ ಅಲೆಯಿಂದ ಬಿಜೆಪಿ ಪಾಳಯದಲ್ಲಿದೆ. ಕಲಘಟಗಿ ಪಪಂ 13 ವಾರ್ಡ್‌ ಹೊಂದಿರುವ ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ 8, ಬಿಎಸ್‌ಆರ್‌ ಕಾಂಗ್ರೆಸ್‌ 2, ಕೆಜೆಪಿ 2 ಹಾಗೂ ಜೆಡಿಎಸ್‌ 1 ಸ್ಥಾನ ಪಡೆದಿದ್ದು, ಕಾಂಗ್ರೆಸ್‌ ಬಹುಮತದಿಂದ ಆಡಳಿತ ನಡೆಸಿದೆ. ಮಧ್ಯಂತರದಲ್ಲಿ ಕಾಂಗ್ರೆಸ್‌ ಸದಸ್ಯ ನಾಗರಾಜ ಉಡುಪಿ ನಿಧನದಿಂದ ತೆರವುಗೊಂಡ ಗಾಂಧಿನಗರದ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಈಗಾಗಲೇ ಮೀಸಲಾತಿ ಪ್ರಕಟಗೊಂಡಿದ್ದು, 1ನೇ ವಾರ್ಡ್‌ ಹುಲಗಿನಕಟ್ಟಿ ಗ್ರಾಮ-ಪರಿಶಿಷ್ಟ ಪಂಗಡ, 2ನೇ ವಾರ್ಡ್‌ ಗಾಂಧಿ ನಗರ- ಹಿಂದುಳಿದ ವರ್ಗ (ಎ) ಮಹಿಳೆ, 3ನೇ ವಾಡ್‌ರ್ಡ ಹುಲಗಿನಕಟ್ಟಿ ಮೇಲಿನ ತಾಂಡಾ -ಸಾಮಾನ್ಯ, 4ನೇ ವಾರ್ಡ್‌ ಹುಲಗಿನಕಟ್ಟಿ ಕೆಳಗಿನ ತಾಂಡಾ-ಪರಿಶಿಷ್ಟ ಜಾತಿ ಮಹಿಳೆ, 5ನೇ ವಾರ್ಡ್‌ ಹಟಗಾರ ಓಣಿ ಉತ್ತರ ಭಾಗ-ಸಾಮಾನ್ಯ, 6ನೇ ವಾರ್ಡ್‌ ಜೈನ ಗಲ್ಲಿ- ಹಿಂದುಳಿದ ವರ್ಗ (ಎ), 7ನೇ ವಾರ್ಡ್‌ ಜೋಳದ ಓಣಿ-ಸಾಮಾನ್ಯ ಮಹಿಳೆ, 8ನೇ ವಾರ್ಡ್‌ ಗ್ರಾಮದೇವಿ ಗುಡಿ ಓಣಿ-ಹಿಂದುಳಿದ ವರ್ಗ (ಬಿ), 9ನೇ ವಾರ್ಡ್‌ ಬಜಾರ ದಕ್ಷಿಣ ಭಾಗ-ಸಾಮಾನ್ಯ, 10ನೇ ವಾರ್ಡ್‌ ಬೆಂಡಿಗೇರಿ ಓಣಿ 2 ಬದಿ-ಸಾಮಾನ್ಯ, 11ನೇ ವಾರ್ಡ್‌ ಮಡಕಿಹೊನ್ನಿಹಳ್ಳಿ ರೋಡ್‌ ದಕ್ಷಿಣ ಭಾಗ-ಪರಿಶಿಷ್ಟ ಜಾತಿ ಮಹಿಳೆ, 12ನೇ ವಾರ್ಡ್‌ ಮೂಲಿಮಠ ಓಣಿ-ಪರಿಶಿಷ್ಟ ಜಾತಿ, 13ನೇ ವಾರ್ಡ್‌ ಸೊಪ್ಪಿಮಠ ಓಣಿ-ಪರಿಶಿಷ್ಟ ಜಾತಿ, 14ನೇ ವಾರ್ಡ್‌ ಕೊಂಡವಾಡ ಓಣಿ ದಕ್ಷಿಣ ಭಾಗ-ಸಾಮಾನ್ಯ ಮಹಿಳೆ, 15ನೇ ವಾರ್ಡ್‌ ಬಸವೇಶ್ವರ ನಗರ 2 ಪ್ಲಾಟ್‌ಗಳು-ಸಾಮಾನ್ಯ, 16ನೇ ವಾರ್ಡ್‌ ಮಾಚಾಪೂರ ತಾಂಡಾ-ಸಾಮಾನ್ಯ ಮಹಿಳೆ ಹಾಗೂ 17ನೇ ವಾರ್ಡ್‌ ಕೆಎಚ್ಬಿ ಕೊಲೋನಿ- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಪ್ರಸ್ತುತ ಶಾಸಕ ಸಿ.ಎಂ.ನಿಂಬಣ್ಣವರ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದು ತಾಲೂಕು ಕೇಂದ್ರ ಸ್ಥಾನದ ಪಟ್ಟಣದ ಆಡಳಿತ ಚುಕ್ಕಾಣಿ ಹಿಡಿಯಲು ರಣತಂತ್ರ ಹೆಣೆದಿದ್ದಾರೆ. ಆಯಾ ವಾರ್ಡ್‌ಗಳಲ್ಲಿನ ಜನಾಭಿಮತ ಪಡೆದ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಟಿಕೆಟ್ ವಂಚಿತ ಆಕಾಂಕ್ಷಿಗಳ ಮನವೊಲಿಸುವ ಕಾರ್ಯಕ್ಕೆ ಪ್ರತ್ಯೇಕ ಪಡೆ ನಿರ್ಮಿಸಿದ್ದಾರೆ.

Advertisement

ಇತ್ತ ಪಪಂ ವ್ಯಾಪ್ತಿ ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿಗೆ ಅವಕಾಶ ನೀಡಬಾರದೆಂದು ಕಾಂಗ್ರೆಸ್‌ ಶತಾಯ ಗತಾಯ ಪ್ರಯತ್ನ ಮಾಡುತ್ತಲಿದೆ. ರಾಜ್ಯದ ಆಡಳಿತದಲ್ಲಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಇಲ್ಲಿಯೂ ಮುಂದುವರಿಯುವ ಸ್ಪಷ್ಟ ಚಿತ್ರಣ ಕಂಡು ಬರುತ್ತಿದೆ. ಪಕ್ಷಗಳ ಟಿಕೆಟ್ಗಾಗಿ ಯುವ ಆಕಾಂಕ್ಷಿಗಳೇ ಹೆಚ್ಚಾಗಿದ್ದು ವರಿಷ್ಠರ ಮನವೊಲಿಕೆಗೆ ಮರೆಯ ಕಸರತ್ತು ನಡೆಸುತ್ತಿದ್ದಾರೆ. ಎರಡೂ ಪಕ್ಷಗಳವರು ಸ್ಥಳೀಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಗೆಲ್ಲುವ ಕುದುರೆಯ ಹುಡುಕಾಟದಲ್ಲಿದ್ದರೆ, ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವುದನ್ನು ತಳ್ಳಿ ಹಾಕುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next