Advertisement

ಯೂರಿಯಾ ಕೊರತೆ ಆತಂಕ ಬೇಡ

02:41 PM Jun 18, 2017 | Team Udayavani |

ಹುಬ್ಬಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಬೇಡಿಕೆಗಿಂತ ಸುಮಾರು 2ಲಕ್ಷ ಟನ್‌ನಷ್ಟು ಹೆಚ್ಚಿನ ಪ್ರಮಾಣದ ಯೂರಿಯಾ ದಾಸ್ತಾನು ಇದ್ದು, ಯೂರಿಯಾ ರಸಗೊಬ್ಬರ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ, ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ ಹೇಳಿದರು. 

Advertisement

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಹೋರಾಟ, ಲಾಠಿ ಪ್ರಹಾರ, ಗೋಲಿಬಾರ್‌ ನಡೆದಿತ್ತು. ಕಳೆದ ಮೂರು ವರ್ಷಗಳಿಂದ ಈ ಕೊರತೆ ಇಲ್ಲವಾಗಿದೆ. ಬೇವು ಲೇಪಿತ ಯೂರಿಯಾ ಹಾಗೂ ಕಾಳದಂಧೆಗೆ  ಕಡಿವಾಣದಿಂದ ಯೂರಿಯಾ ರಸಗೊಬ್ಬರ ಕೊರತೆ ಇಲ್ಲವಾಯಿತು. 

ಕೇವಲ ಯೂರಿಯಾ ಅಷ್ಟೇ ಅಲ್ಲ ಡಿಎಪಿ, ಪಾಸೆಟ್‌, ಪೊಟ್ಯಾಶ್‌, ಎನ್‌ಪಿಕೆ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆಯಿಲ್ಲ ಎಂದರು. ಕೇಂದ್ರ ಕುಡಿಯುವ ನೀರು ಹಾಗೂ ಒಳಚರಂಡಿ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ಬಡವರಿಗೆ ಅಡುಗೆ ಅನಿಲ ಸಂಪರ್ಕ ಪ್ರಧಾನಿ ಕನಸಾಗಿದೆ ಎಂದರು. 

ರಾಜ್ಯ ಆಹಾರ ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಮಾತನಾಡಿ, ಉಜ್ವಲ ಯೋಜನೆ ಜಾರಿಗೆ ಈ ಹಿಂದೆಯೇ ಕೇಳಿದ್ದೆವು ಇದೀಗ ಜಾರಿಯಾಗುತ್ತಿರುವುದು ಸಂತಸ. 2011ರ ಸಾಮಾಜಿಕ, ಆರ್ಥಿಕ ಜಾತಿ ಗಣತಿಯ ಪಟ್ಟಿಯಲ್ಲಿದ್ದವರಿಗೆ ಮಾತ್ರ ಅಡುಗೆ ಅನಿಲ ಸಂಪರ್ಕ ಸಿಗುವ ಬದಲು ಎಲ್ಲ ಕಡು ಬಡವರಿಗೂ ದೊರೆಯಬೇಕು.

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಆರಂಭಿಸಲಿದೆ. ಸೀಮೆಎಣ್ಣೆ ಸೋರಿಕೆಯನ್ನು ತಡೆಗಟ್ಟಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇದರಿಂದ ಕೇಂದ್ರ ಸರಕಾರಕ್ಕೆ ಸುಮಾರು 354 ಕೋಟಿ ರೂ.ಗಳನ್ನು ಉಳಿಸಿದ್ದೇವೆ ಎಂದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಉಜ್ವಲ ಯೋಜನೆಗಾಗಿ ಕೇಂದ್ರ ಸರಕಾರ ಸುಮಾರು 8 ಸಾವಿರ ಕೋಟಿ ರೂ. ತೆಗೆದಿರಿಸಿದ್ದು, 2016-17ನೇ ಸಾಲಿಗೆ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯದ 30 ಲಕ್ಷ ಬಡವರಿಗೆ ಅಡುಗೆ ಅನಿಲ ಸಂಪರ್ಕಕ್ಕೆ ಕೇಂದ್ರ ಬದ್ಧವಾಗಿದೆ.

ಅದೇ ರೀತಿ ಅನ್ನಭಾಗ್ಯ ಯೋಜನೆಯೂ ಕೇಂದ್ರದ್ದಾಗಿದೆ ಎಂದರು.  ಪ್ರಧಾನಿ ಬೆಳೆ ವಿಮೆ ಯೋಜನೆ ಪರಿಹಾರಕ್ಕೆ ಈ ಹಿಂದೆ ಶೇ. 50ರಷ್ಟು ಬೆಳೆ ಹಾನಿಯಾಗಬೇಕಿತ್ತು. ಇದೀಗ ಶೇ. 33ರಷ್ಟು ಹಾನಿಯಾದರೂ ಪರಿಹಾರ ಬರುತ್ತದೆ. ಬರದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಹಕಾರ ಸಂಘಗಳ ರೈತರ ಸಾಲ ಮನ್ನಾಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಅಡುಗೆ ಅನಿಲ ಸಂಪರ್ಕದ ಜತೆಗೆ ಒಲೆಗಳನ್ನು ನೀಡಬೇಕು. ರಾಜ್ಯಕ್ಕೆ ನೀಡುವ ಸೀಮೆಎಣ್ಣೆ ಪ್ರಮಾಣವನ್ನು ಕಡಿಮೆ ಮಾಡಬಾರದು ಎಂದು ಒತ್ತಾಯಿಸಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಅಭಿವೃದ್ಧಿ ಯೋಜನೆಗಳಲ್ಲಿ ರಾಜಕೀಯ ಹಾಗೂ ಸಂಘರ್ಷ ಬೇಡ.

ಉಜ್ವಲ ಯೋಜನೆ ಜಾರಿ ನಂತರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿ ಅಗತ್ಯವಿತ್ತೆ ಎಂದರಲ್ಲದೆ, ಉಜ್ವಲ ನೋಂದಣಿ ಮಾಡಿದವರಿಗೆ ಸಿಎಂ ಅನಿಲ ಭಾಗ್ಯ ಯೋಜನೆ ಇಲ್ಲ ಎಂಬ ರಾಜ್ಯ ಸರಕಾರದ ಹೇಳಿಕೆ ಸಾಧುವಲ್ಲ ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ನಾವು ಹಾಗೂ ನೀವು(ಕಾಂಗ್ರೆಸ್‌ ನವರು) ಸೇರಿ ಶ್ರಮಿಸೋಣ.

ಜಿಲ್ಲೆಯಲ್ಲಿ ಸುಮಾರು 56 ಸಾವಿರ ಜನರಿಗೆ ಎಲ್‌ ಪಿಜಿ ನೀಡಬೇಕಿದೆ. ಜಿಲ್ಲೆಗೆ ದಾಖಲೆ ಪ್ರಮಾಣದ ಸುಮಾರು 172ಕೋಟಿ ರೂ. ಪ್ರಧಾನಮಂತ್ರಿ ಬೆಳೆ ವಿಮೆ ಪರಿಹಾರ ಬಂದಿದೆ. ಕೇಂದ್ರ ಸರಕಾರ ಕಿಮ್ಸ್‌ಗೆ 150 ಕೋಟಿ ರೂ., ಸಿಆರ್‌ಎಫ್ ನಿಧಿಯಡಿ 468 ಕೋಟಿ ರೂ. ಜಿಲ್ಲೆಯ ರಸ್ತೆಗಳಿಗೆ ನೀಡಿದೆ. ಫ್ಲೈ ಓವರ್‌ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ. ನೀಡಲು ಒಪ್ಪಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next