Advertisement

ಬ್ಯಾಂಕ್‌ಗಳಿಗೆ ರೈತರನ್ನು ಅಲೆದಾಡಿಸದಿರಿ

12:47 PM May 21, 2017 | Team Udayavani |

ಹೊನ್ನಾಳಿ: ರೈತರು ಮತ್ತು ಸಾರ್ವಜನಿಕರನ್ನು ಬ್ಯಾಂಕ್‌ಗಳಿಗೆ ವ್ರಥಾ ಅಲೆದಾಡಿಸಬಾರದು ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಎನ್‌.ಟಿ. ಯರ್ರಿಸ್ವಾಮಿ ತಾಲೂಕಿನ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸೂಚಿಸಿದರು. ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ಬ್ಲಾಕ್‌ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ತ್ರೈಮಾಸಿಕ ಸಭೆ(ಬಿಎಲ್‌ಬಿಸಿ)ಯಲ್ಲಿ ಅವರು ಮಾತನಾಡಿದರು.

Advertisement

ವಿವಿಧ ವಿಮಾ ಯೋಜನೆಗಳು, ಕೃಷಿ ಸಂಬಂಧಿತ ಸಾಲ ನೀಡಿಕೆ ವೇಳೆ ರೈತರನ್ನು, ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ಸಾಲ ನೀಡಲು ಬ್ಯಾಂಕ್‌ ಅಧಿಕಾರಿಗಳು ಅನಗತ್ಯ ವಿಳಂಬ ಧೋರಣೆ ಅನುಸರಿಸಬಾರದು. ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು.

ಇಲ್ಲದಿದ್ದರೆ, ರಿಸರ್ವ್‌ ಬ್ಯಾಂಕ್‌ ನಿರ್ದೇಶನದ ಮೇರೆಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಶೈಕ್ಷಣಿಕ ಸಾಲ ನೀಡಿಕೆ ಯೋಜನೆಯಲ್ಲಿ ಅನಗತ್ಯ ವಿಳಂಬ ಆಗುವುದನ್ನು ತಪ್ಪಿಸಲು ಸರಕಾರ ಕ್ರಮ ಕೈಗೊಂಡಿದೆ. ವಿದ್ಯಾಲಕ್ಷಿ ಪೋರ್ಟ್‌ಲ್‌ ಪ್ರಾರಂಭಿಸಿದ್ದು, ಭಾರತದ ಯಾವುದೇ ಬ್ಯಾಂಕ್‌ ಶಾಖೆ ಕೂಡ ಶೈಕ್ಷಣಿಕ ಸಾಲದ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ. 

ದೇಶದ ಯಾವುದೇ ಬ್ಯಾಂಕ್‌ ಶಾಖೆಯ ಸಾಲ ನೀಡಿಕೆ ಮಾಹಿತಿ ಪ್ರತಿ ದಿನವೂ ಕೇಂದ್ರ ಕಚೇರಿಗೆ ರವಾನೆಯಾಗುತ್ತದೆ. ಆದ್ದರಿಂದ, ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕರೂ ವಿದ್ಯಾಲಕ್ಷಿ ಪೋರ್ಟ್‌ಲ್‌ಗೆ ಮಾಹಿತಿ ನೀಡಬೇಕು ಎಂದು ವಿವರಿಸಿದರು. ಇನ್ನು ಮುಂದೆ ಎಲ್ಲಾ ವ್ಯವಹಾರಗಳಿಗೂ ಆಧಾರ್‌ ಸಂಖ್ಯೆ ಅಗತ್ಯ.

ಆದ್ದರಿಂದ, ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಕುರಿತಂತೆ ಸಾರ್ವಜನಿಕರಿಗೆ ಬ್ಯಾಂಕ್‌ ಅಧಿಕಾರಿಗಳು ಮಾಹಿತಿ ನೀಡಬೇಕು. ಬರ ಪರಿಹಾರ ಯೋಜನೆಯಡಿ ಜಿಲ್ಲೆಯ 1.10 ಲಕ್ಷ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಈ ವಿಚಾರದಲ್ಲಿ ಬ್ಯಾಂಕ್‌ಗಳೊಂದಿಗೆ ಸಹಕರಿಸಿದ್ದಾರೆ. 

Advertisement

ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದ ಕಾರಣಕ್ಕೆ ಇನ್ನೂ 8 ಸಾವಿರ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ಶೀಘ್ರವೇ ಎಲ್ಲರ ಖಾತೆಗಳಿಗೂ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು. ಬಿಎಲ್‌ಬಿಸಿ ಸಹಾಯಕ ಕಾರ್ಯಕ್ರಮಾಧಿಕಾರಿ ಹಾಗೂ  ಜಿಪಂ ಸಹಾಯಕ ಯೋಜನಾಧಿಕಾರಿ ಶಶಿಧರ್‌ ಮಾತನಾಡಿ, ಸ್ವತ್ಛ ಭಾರತ್‌ ಯೋಜನೆಯಡಿ ತಾಲೂಕಿನಾದ್ಯಂತ 6,500 ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಈ ಕಾರ್ಯಕ್ಕೆ ತಾಲೂಕಿನ ಕುಂದೂರು, ಬೇಲಿಮಲ್ಲೂರು ಗ್ರಾಮಗಳ ಕರ್ಣಾಟಕ ಬ್ಯಾಂಕ್‌ ಶಾಖೆಗಳು ಸೇರಿದಂತೆ ವಿವಿಧ ಗ್ರಾಮಗಳ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆಗಳು ಸಹಕರಿಸಿವೆ. ಆದರೆ ತಾಲೂಕಿನ ಸವಳಂಗ ಗ್ರಾಮದಲ್ಲಿ ಎಸ್‌ಬಿಐ ಅಸಹಕಾರದಿಂದಾಗಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಹಿನ್ನಡೆಯಾಗಿದೆ. 

ಶೌಚಾಲಯ ನಿರ್ಮಾಣದ ಹಣ ವರ್ಗಾವಣೆ ಮಾಡಲು ಎಸ್‌ಬಿಐ ಅಧಿಕಾರಿಗಳು ಅಸಡ್ಡೆ ತೋರಿದರು. ಈ ಕಾರಣದಿಂದ ಗ್ರಾಮದ 36 ಶೌಚಾಲಯ ಫಲಾನುಭವಿಗಳು ಸೌಲಭ್ಯ ಹೊಂದಲು ಸಾಧ್ಯವಾಗಲಿಲ್ಲ ಎಂದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇನ್ನೂ 6,500 ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಈ ಕಾರ್ಯ ಅ.2ರೊಳಗೆ ಪೂರ್ಣಗೊಳ್ಳಬೇಕಿದೆ.

ಆದ್ದರಿಂದ, ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು. ಹೊನ್ನಾಳಿ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಭಾಸ್ಕರ್‌, ಮಲ್ಲಿಕಾರ್ಜುನ್‌, ಹೊನ್ನಾಳಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ತೇಜೇಶ್ವರ್‌ ಮತ್ತಿತರರಿದ್ದರು. ಪಟ್ಟಣದ ಮತ್ತು ತಾಲೂಕಿನ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು-ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next