ದೇವನಹಳ್ಳಿ: ತಾಲೂಕಿನ ಬಡಜನರಿಗೆ ಹಾಗೂ ರೈತರಿಗೆ ತಾಲೂಕು ಕಚೇರಿಯಿಂದ ಆಗುವ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಕಚೇರಿಗಳಿಗೆ ಅಲೆದಾಡಿಸುವುದನ್ನು ಮೊದಲು ತಪ್ಪಿಸಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಬಡವರೇ ವಿವಿಧ ಕೆಲಸಗಳಿಗೆ ತಾಲೂಕು ಕಚೇರಿಗೆ ಬರುತ್ತಾರೆ. ಸರಿಯಾದ ಸಮಯಕ್ಕೆ ಅವರ ಕೆಲಸ ಮಾಡಿ ಕೊಟ್ಟರೆ ಅನುಕೂಲವಾಗುತ್ತದೆ. ಬಡವರನ್ನು ಅಲೆದಾಡಿಸುವುದರ ಬದಲು ಅವರ ಕೆಲಸ ಮಾಡಿ ಕೊಡಿ. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಅಭಿವೃದ್ಧಿಗೆ ಹೆಚ್ಚಿನ ಒತ್ತು: ನನ್ನ ಕಚೇರಿಗೆ ಸಾಕಷ್ಟು ಜನ ಬರುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ತಾಲೂಕು ಕಚೇರಿಗೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳು ಬರುತ್ತಿದೆ.
ಇನ್ನು ಮುಂದೆಯಾದರೂ ಇಂತಹ ದೂರು ಬರಬಾರದು. ತಹಶೀಲ್ದಾರ್ ಶಿವರಾಜ್ ಕಚೇರಿಯಲ್ಲಿ ಕುಳಿತು ಜನಸಾಮಾನ್ಯರ ಕೆಲಸಗಳಿಗೆ ವೇಗವಾಗಿ ಸ್ಪಂದಿಸಿ ಸಹಕಾರಿ ಆಗುತ್ತಿದ್ದಾರೆ. ಅವರ ರೀತಿಯಲ್ಲೇ ತಾಲೂಕು ಕಚೇರಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ವೇಗವಾಗಿ ಕೆಲಸ ಮಾಡಿದರೆ ಮತ್ತಷ್ಟು ಕೆಲಸಗಳ ವೇಗೆ ಹೆಚ್ಚುತ್ತದೆ ಎಂದ ಅವರು, ಕಳೆದ ಮೂರು ವರ್ಷಗಳಿಂದ ಶಾಸಕನಾದ ಮೇಲೆ ಯಾವುದೇ ಅಧಿಕಾರಿಗಳಿಗೆ ಒತ್ತಡ ಹಾಕದೆ ಕೆಲಸ ಮಾಡಿಸಲಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ ಎಂದು ಹೇಳಿದರು.
ಪೋಡಿ ದುರಸ್ತಿಗೆ ಅಡೆತಡೆ ಇಲ್ಲ: ಸ್ಮಶಾನಗಳಿಗೆ ಜಾಗ ಗುರುತಿಸಿ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ಮಾಡಿಕೊಡಬೇಕು. ತಾಲೂಕು ಕಚೇರಿಯಲ್ಲಿ 3 ಮತ್ತು 9 ಮ್ಯಾಚ್ಯು, ಆರ್‌ಟಿಸಿ ಯಲ್ಲಿರುವ ವ್ಯತ್ಯಾಸವನ್ನು ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯಲ್ಲಿ ಸಂಬಂಧಪಟ್ಟ ದಾಖಲೆ ತೆಗೆದುಕೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಆರ್‌ಟಿಸಿ ಪೋಡಿ, ದುರಸ್ತಿ ಕಾರ್ಯ, ಭೂ ಮಂಜೂರಾತಿ ಸಮಯದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಭೆಯಲ್ಲಿ ಅವರವರ ಹೆಸರಿಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಮಾಡಿರುವ ತೀರ್ಮಾನ(ರೆಗ್ಯುಲೇಷನ್) ಹಾಗೂ ಸಾಗುವಳಿ ಚೀಟಿ ನೀಡುರುವುದಕ್ಕೆ ವಿತರಣಾವಹಿ ಹಾಗೂ ಒಎಂ ಕಾಪಿ, ಇನ್ನಿತರೆ ದಾಖಲೆ ಅನುಭವದಂತೆ ರೈತರ ಹೂಳುತ್ತಿರುವ ಭೂಮಿಯನ್ನು ಮತ್ತೆ ಸರ್ವೆ ಕಾರ್ಯ ಮಾಡಿದರು. ಪೋಡಿ ದುರಸ್ತಿಗೆ ಯಾವುದೇ ಅಡೆ ತಡೆಯಿರುವುದಿಲ್ಲ. ಸ್ಮಶಾನ ಒತ್ತುವರಿ, ಸರ್ಕಾರಿ ಒತ್ತುವರಿ ಸೇರಿ ವಿವಿಧ ಜಾಗಗಳನ್ನು ತೆರವು ಗೊಳಿಸಬೇಕು ಎಂದು ಹೇಳಿದರು.
ಸಿಬ್ಬಂದಿ ಕೊರತೆ ಉತ್ತಮ ಕೆಲಸ: ತಹಶೀಲ್ದಾರ್ ಶಿವರಾಜ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರು ಹಾಗೂ ರೈತರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ಇರುವ ಸಿಬ್ಬಂದಿಗಳಲ್ಲಿಯೇ. ಕೆಲಸ ತೆಗೆದುಕೊಳ್ಳುತ್ತಿದ್ದೇವೆ. ಸರ್ಕಾರದ ಕಾರ್ಯಕ್ರಮ ಜನಸಾಮಾನ್ಯರಿಗೆ ತಲುಪುವಂತೆ ಆಗಬೇಕು ಎಂದು ಹೇಳಿದರು. ಶಿರಸ್ತೇದಾರ್, ಬಿ.ಜಿ. ಭರತ್, ಶಶಿಕಲಾ, ತಾಲೂಕು ಕಚೇರಿ ಸಿಬ್ಬಂದಿ ಇದ್ದರು.